ರಕ್ತ ಹರಿದರೂ ಚಿಂತೆಯಿಲ್ಲ ವಕ್ಫ್‌ಗೆ ಬಿಟ್ಟುಕೊಡಲ್ಲ
ಬಾಗಲಕೋಟೆ: ಈಗಷ್ಟೇ ಬಿಸಿ ಬಿಸಿ ಚರ್ಚೆಯಲ್ಲಿರುವ ವಕ್ಫ್ ಆಸ್ತಿ ಪ್ರಕರಣವು ಬಾಗಲಕೋಟೆ ಜಿಲ್ಲೆ ತೇರದಾಳ ಕ್ಷೇತ್ರದಲ್ಲಿ 2019ರಿಂದಲೇ ಸದ್ದು ಮಾಡುತ್ತಿದ್ದು, ಈಗಲೂ ನೂರಾರು ರೈತರು ನ್ಯಾಯಾಲಯಕ್ಕೆ ಅಲೆದಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಬನಹಟ್ಟಿಯ ವಿಶ್ರಾಂತಿ ಧಾಮದಲ್ಲಿ ತೇರದಾಳ ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ರೈತರು ತಮಗೆ ನ್ಯಾಯಾಲಯದಿಂದ ಈಗಲೂ ಬರುತ್ತಿರುವ ನೋಟಿಸ್ ಹಿಡಿದು ಪ್ರತಿಭಟಿಸಿದ ಪ್ರಸಂಗ ನಡೆಯಿತು.
ಶಾಸಕ ಸಿದ್ದು ಸವದಿ ಮಾತನಾಡಿ, 2019-20ರಲ್ಲಿ 420 ಎಕರೆಯಷ್ಟು ಭೂಮಿಗೆ 110 ರೈತರಿಗೆ ವಕ್ಫ್ ಮಂಡಳಿಯಿಂದ ನೋಟಿಸ್ ಬರುತ್ತಿದ್ದು, ಈ ಆಸ್ತಿಗೆ ವಕ್ಫ್ ಸಂಬಂಧಿಸಿದ ತಗಾದೆ ನಡೆಯುತ್ತಿದೆ.
ಸ್ವಂತ ಭೂಮಿಯಲ್ಲಿ ಮೂರ‍್ನಾಲ್ಕು ತಲೆಮಾರುಗಳಿಂದ ಕೃಷಿ ಮಾಡುತ್ತ ಇದೀಗ ತುಂಡು ಭೂಮಿ ಹೊಂದಿದ ರೈತರ ಮೇಲೆಯೂ ಕಾಂಗ್ರೆಸ್ ಸರ್ಕಾರ ಗದಾಪ್ರಹಾರ ನಡೆಸುತ್ತಿರುವುದು ವಿಷಾದದ ಸಂಗತಿಯೆಂದು ಸವದಿ ಬೇಸರ ಹೊರಹಾಕಿದರು.
ವಕ್ಫ್ ಮಂಡಳಿಗೆ ಮತಗಳ ಓಲೈಕೆ
ದೇಶದಲ್ಲಿ 1990ರ ಅವಧಿಯಲ್ಲಿ 1.06 ಲಕ್ಷ ಎಕರೆಯಷ್ಟು ಹೊಂದಿದ್ದ ಭೂಮಿಯು ಇದೀಗ 2024ಕ್ಕೆ 9.06 ಲಕ್ಷ ಎಕರೆಯಷ್ಟು ಭೂಮಿಯನ್ನು ಹೊಂದಿ. ಕೇವಲ ಮುಸ್ಲಿಂ ಸಮುದಾಯದ ಮತಗಳ ಓಲೈಕೆಗಾಗಿ ಕಾಂಗ್ರೆಸ್ ನೀಚ ಕೆಲಸಕ್ಕಿಳಿದು ರೈತರ ನ್ಯಾಯಯುತ ಜಮೀನು ಕಸಿದುಕೊಳ್ಳುವ ಸ್ವಾರ್ಥ ರಾಜಕಾರಣ ವಿರೋಧಿಸುತ್ತೇನೆಂದು ಸವದಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ರಕ್ತ ಹರಿದರೂ ಚಿಂತೆಯಿಲ್ಲ ವಕ್ಫ್‌ಗೆ ಬಿಟ್ಟುಕೊಡಲ್ಲ
ತೇರದಾಳದಲ್ಲಿನ 110 ರೈತರಿಗೆ ಯಾವುದೇ ನೋಟೀಸ್ ನೀಡಿಲ್ಲ ಹಾಗೂ ಸರಿಪಡಿಸಲಾಗಿದೆ ಎಂದು ಹೇಳುತ್ತಿರುವ ಕಂದಾಯ ಇಲಾಖೆ ತೆರೆಮರೆಯಲ್ಲಿ ರೈತರ ವಿರುದ್ಧ ಆಟವಾಡುತ್ತಿದೆ. ಬೆಂಗಳೂರಿನಲ್ಲಿರುವ ವಕ್ಫ್ ನ್ಯಾಯಾಲಯದಲ್ಲಿ ಪ್ರಕರಣ ಕಳೆದ 6 ವರ್ಷಗಳಿಂದ ನಡೆಯುತ್ತಿದೆ. ಈಗಲೂ ಮೂರ‍್ನಾಲ್ಕು ತಿಂಗಳಿಗೊಮ್ಮೆ ಈ ಭಾಗದ ರೈತರು ಪ್ರಕರಣ ವಿರುದ್ಧ ಹೋರಾಟ ನಡೆಸುತ್ತ ಇದೀಗ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಇದನ್ನೇ ಲಾಭ ಪಡೆದುಕೊಂಡು ಸರ್ಕಾರ ರೈತರ ಮೇಲೆ ಗದಾಪ್ರಹಾರ ನಡೆಸುವುದನ್ನು ಕೈಬಿಡಬೇಕೆಂದು ಸವದಿ ಆಗ್ರಹಿಸಿದರು. ರೈತರ ಬೆನ್ನೆಲುಬಾಗಿ ಯಾವದೇ ಕಾರಣಕ್ಕೂ ತುಂಡು ರೈತರಾಗಿರುವ ಇಲ್ಲಿನ ರೈತರ ಜಮೀನನ್ನು ವಕ್ಫ್‌ಗೆ ನೀಡುವ ಅವಕಾಶವನ್ನು ನೀಡುವುದಿಲ್ಲ. ರಕ್ತ ಹರಿದರೂ ಚಿಂತೆಯಿಲ್ಲ ಈ ಹೋರಾಟದಿಂದ ಹಿಂದೆ ಸರಿಯುವ ಪ್ರಮೇಯವೇವಿಲ್ಲವೆಂದು ಸ್ಪಷ್ಟನೆ ನೀಡಿದರು.