For the best experience, open
https://m.samyuktakarnataka.in
on your mobile browser.

ರಾಗ, ದ್ವೇಷಗಳಿಂದ ಮುಕ್ತಿ

05:00 AM Aug 10, 2024 IST | Samyukta Karnataka
ರಾಗ  ದ್ವೇಷಗಳಿಂದ ಮುಕ್ತಿ

ನಾವೇ ಆಗಿರುವ ಪರಮಾತ್ಮವನ್ನು ನಮ್ಮಿಂದ ತಿಳಿಯಲು ಏಕೆ ಸಾಧ್ಯವಿಲ್ಲ? ರಾಗ ಅಥವಾ ಇಚ್ಛೆಗಳು ಮತ್ತು ದ್ವೇಷವೇ ಇದಕ್ಕೆ ಕಾರಣ. ನಿರಂತರವಾಗಿ ರಾಗ ಮತ್ತು ದ್ವೇಷಗಳ ನಡುವೆಯೆ ಇದ್ದು ಮಾನವ ತೊಳಲಾಡುತ್ತಿರುತ್ತಾನೆ. ಯಾರಾದರೂ ವಿಪರೀತ ಬಯಕೆ, ರಾಗದಲ್ಲಿ ಮುಳುಗಿ ಬಿಟ್ಟಾಗ ಅಥವಾ ದ್ವೇಷದಿಂದ ಆವೃತರಾಗಿಬಿಟ್ಟಾಗ ಅವರ ಮನಸ್ಸೆಲ್ಲ ಅದರಿಂದಲೆ ತುಂಬಿ ಹೋಗುತ್ತದೆ ಮತ್ತು ಬೇರೇನೂ ಅವರಿಗೆ ಕಾಣಿಸುವುದಿಲ್ಲ.
ವಿಪರೀತವಾಗಿ ಯಾರನ್ನಾದರೂ ಬಯಸುವವರು ಮತ್ತು ಯಾರನ್ನಾದರೂ ವಿಪರೀತವಾಗಿ ದ್ವೇಷಿಸುವವರು ಮೋಹದ ಬಲೆಯಲ್ಲಿ ಬೀಳುತ್ತಾರೆ. ಎಲ್ಲ ಜೀವಿಗಳೂ ಇದರಿಂದ ಬಾಧಿತರಾಗುತ್ತಾರೆ ಮತ್ತು ಈ ಕಾರಣದಿಂದ ಬಾಧೆಗೊಳಗಾಗುತ್ತಾರೆ. ದುಃಖದಲ್ಲಿರುವವರಿಗೆ ಬೇರೇನೂ ಕಾಣಿಸುವುದಿಲ್ಲ ಮತ್ತು ಬೇರೇನೂ ಅರ್ಥವಾಗುವುದಿಲ್ಲ. ಅವರ ಹಣದ ಸಮಸ್ಯೆ, ಸಂಬಂಧದ ಸಮಸ್ಯೆ ಅಥವಾ ಇತರ ಸಮಸ್ಯೆ ಮಾತ್ರ ಅವರಿಗೆ ಕಾಣಿಸುತ್ತದೆ ಮತ್ತು ಸಮಸ್ಯೆಯಲ್ಲೇ ಮುಳುಗಿ ಹೋಗಿರುತ್ತಾರೆ.
ಈ ರೀತಿಯಾಗಿ ಮೋಹದಲ್ಲಿ ಮುಳುಗಿದವರಿಗೆ ಸರ್ವವ್ಯಾಪಿಯಾದ ಶುದ್ಧ ಚೈತನ್ಯದ ಅನುಭವವಾಗಲು ಸಾಧ್ಯವೇ ಇಲ್ಲ. ಭಗವಾನ್ ಕೃಷ್ಣನು, `ಯಾರು ಜರಾ ಮರಣಗಳಿಂದ ಮುಕ್ತಿ ಪಡೆಯಲು ಬಯಸುತ್ತಾರೊ, ಯಾರಿಗೆ ನಾನು ಆಶ್ರಯದಾತನಾಗಿರುವೆನೊ, ಯಾರು ನನ್ನಲ್ಲಿ ಪೂರ್ಣವಾಗಿ ಶರಣಾಗಿ ನನ್ನನ್ನು ಎಲ್ಲದ್ದಕ್ಕೂ ಅವಲಂಬಿಸುತ್ತಾರೊ ಅವರು ಉನ್ನತವಾದುದನ್ನು ಪಡೆಯುತ್ತಾರೆ. ಅವರಿಗೆ ಕರ್ಮದ ಗತಿಯೂ ಅರ್ಥವಾಗುತ್ತದೆ. ಯಾರ ಪುಣ್ಯಗಳು ಫಲವನ್ನು ಕೊಡಲು ಆರಂಭಿಸಿದೆಯೊ ಅವರು ಎಲ್ಲ ದುಃಖಗಳಿಂದಲೂ ವಿಮುಕ್ತಿ ಪಡೆದು, ಉನ್ನತವಾದುದರ ಕಡೆಗೆ ನಡೆಯುತ್ತಾರೆ.
ಯಾರು ಇನ್ನೂ ಶುದ್ಧವಾಗಿಲ್ಲವೊ ಅವರು ಅಜ್ಞಾನ, ಮೋಹದಲ್ಲೆ ಮುಳುಗಿರುತ್ತಾರೆ ಎನ್ನುತ್ತಾನೆ. ಕಷ್ಟ, ದುಃಖವನ್ನು ಅನುಭವಿಸಬೇಕಾದವರಿಗೆ ಆಧ್ಯಾತ್ಮಿಕ ಪಥದಲ್ಲಿ ನಡೆಯಲು ಆಗುವುದಿಲ್ಲ. ಒಮ್ಮೆ ಈ ಪಥದಲ್ಲಿ ನಡೆಯಲು ಪ್ರಾರಂಭಿಸಿದರೆ ನಿಮಗೆ ವಯಸ್ಸಾಗಿದೆ ಎಂದು ಅನಿಸುವುದೇ ಇಲ್ಲ. ವಯಸ್ಸಾದ ಹಿರಿಯರು ಈ ಪಥದಲ್ಲಿ ನಡೆದಾಗ ತಮ್ಮ ಕೊನೆಯ ಉಸಿರಿನವರೆಗೂ ಅತ್ಯಂತ ಉತ್ಸಾಹದಿಂದ, ಸಂತೋಷದಿಂದಿರುತ್ತಾರೆ, ಅವರ ಮುಖದಲ್ಲಿ ಮಗುವಿನಂತಹ ಮುಗ್ಧತೆ, ಸಂತೋಷ ಇರುತ್ತದೆ.
ಮಗುವಿನಂತಹ ಮುಗ್ಧತೆಯನ್ನು ಹೊಂದಿರುವವರನ್ನು, ಮರಣಕ್ಕೆ ಹೆದರದವರನ್ನು ವಯಸ್ಸಾದವರು ಎನ್ನಲು ಹೇಗೆ ಸಾಧ್ಯ? ಇಂತಹವರು ಎಲ್ಲಾ ರಾಗ, ದ್ವೇಷಗಳಿಂದ, ಮರಣದ, ಮುಪ್ಪಿನ ಭಯದಿಂದ ಬಿಡುಗಡೆ ಹೊಂದಿರುತ್ತಾರೆ. ಆಧ್ಯಾತ್ಮಿಕತೆಯೆಂದರೆ ಕರ್ಮಕಾಂಡಗಳನ್ನು ಮಾಡುತ್ತಲಿರುವುದಲ್ಲ, ಭಗವದ್ ವಿಶ್ವಾಸವನ್ನು ಅಚಲವಾಗಿ ಹೃದಯದಲ್ಲಿ ಹೊಂದಿರುವುದು.