ರಾಜಕೀಯ ಅಪಾಯ…ಪ್ರಜಾಕೀಯವೊಂದೇ ಉಪಾಯ
ಆದರ್ಶ ಸಮಾಜದ ಕಲ್ಪನೆ ಹೊತ್ತವನೊಬ್ಬ, ಅವೆಲ್ಲ ಪುಸ್ತಕದ ಬದನೆಕಾಯಿ ಎನ್ನುವವನೊಬ್ಬ…
ಚಿತ್ರ: ಯುಐ
ನಿರ್ದೇಶನ: ಉಪೇಂದ್ರ
ತಾರಾಗಣ: ಉಪೇಂದ್ರ, ರೀಷ್ಮಾ ನಾಣಯ್ಯ, ಸಾಧುಕೋಕಿಲ, ರವಿಶಂಕರ್, ಅಚ್ಯುತ್ ಕುಮಾರ್ ಮುಂತಾದವರು.
ರೇಟಿಂಗ್ಸ್: 3
- ಗಣೇಶ್ ರಾಣೆಬೆನ್ನೂರು
ಯುಐ ಸಿನಿಮಾ ಮೂಲಕ ಉಪೇಂದ್ರ ನಿರ್ದೇಶಕನಾಗೇನೋ ಮರಳಿದ್ದಾರೆ. ವಯಸ್ಸಿಗೆ, ಪ್ರಬುದ್ಧತೆಗೆ ತಕ್ಕಂತೆ ಮಾಗಿ ಚೆನ್ನಾಗಿ ಅರಳಿಯೂಕೊಂಡಿದ್ದಾರೆ. ಆದರೆ ಅವರ ಮರಳುವಿಕೆ, ಅರಳುವಿಕೆ ಅಭಿಮಾನಿಗಳ ಪಾಲಿಗೆ ಹೇಗನ್ನಿಸಬಹುದು? ಅವರು ಅರಳುತ್ತಾರೋ ನರಳುತ್ತಾರೋ ಎಂಬುದಕ್ಕೆ ಇನ್ನೆರಡು ದಿನ ಬೇಕಾಗಬಹುದು. ಇದು ಮಸಾಲೆ ಚಿತ್ರವಲ್ಲ, ಫೋಕಸ್ ಮಾಡಿ ನೋಡಿ ಬೇರೇನೋ ಕಾಣಿಸುತ್ತದೆ ಎನ್ನುತ್ತಾರೆ ಉಪ್ಪಿ. ಅಭಿಮಾನಿಗಳು ಫೋಕಸ್ ಮಾಡುವಲ್ಲಿ ವಿಫಲರಾದರೆ ಯುಐ ಸಿನಿಮಾವೆ ಔಟ್ ಆಫ್ ಫೋಕಸ್ ಆಗಿಬಿಡುವ ಅಪಾಯವಿದೆ.
‘ಯುಐ’ ಮೂಲಕ ಎಐ, ಸೈ-ಫೈ ಏನೇನೋ ಹೇಳಲಿದ್ದಾರೆ ಅಂತೆಲ್ಲ ಮಾತುಗಳು ಕೇಳಿಬಂದಿದ್ದವು. ಆದರೆ ಉಪೇಂದ್ರ ರಾಜಕೀಯ ಹಾಗು ಪ್ರಜಾಕೀಯದ ಬೆನ್ನಿಗೆ ಕನ್ನಡಿ ಹಿಡಿಯುವ ಕೆಲಸ ಮಾಡಿದ್ದಾರೆ. ಆದರ್ಶ ಸಮಾಜದ ಕಲ್ಪನೆ ಹೊತ್ತವನೊಬ್ಬ, ಅವೆಲ್ಲ ಪುಸ್ತಕದ ಬದನೆಕಾಯಿ ಎನ್ನುವವನೊಬ್ಬ… ಈ ತಾಕಲಾಟವೇ ‘ಯುಐ’.
ಪ್ರೇಕ್ಷಕರಿಗೆ ಒಂದು ಥಾಟ್ ಹೇಳಬೇಕು… ಅದಷ್ಟೇ ಉಪೇಂದ್ರರ ಗುರಿ. ಅದನ್ನು ಅವರ ಹಿಂದಿನ ಸಿನಿಮಾಗಳಲ್ಲೂ ನೋಡಿದ್ದೇವೆ. ಆದರೆ ಆ ಹೇಳುವ ದಾರಿಯಲ್ಲಿ ರಂಜನೀಯ ಸರಕುಗಳನ್ನಿಟ್ಟು ಸಾಮಾನ್ಯನಿಗೂ ತಲುಪಿಸುವುದು ಅವರ ಶೈಲಿ. ಯುಐ ಚಿತ್ರದಲ್ಲೂ ಯೋಚನೆಗಳಿವೆ. ಆದರೆ ಅದು ಉಪೇಂದ್ರ ಅಭಿಮಾನಿಗಳು ಬಯಸುವ ಪ್ರಚೋದನಾ ಶೈಲಿಯಲ್ಲಿಲ್ಲ. ಇದು ಬೇರೆಯದೇ ನೆಲೆಗಟ್ಟಿನಿಂದ ನೋಡಬೇಕಾದ ಸಿನಿಮಾ ಎನ್ನುತ್ತಾರೆ ಉಪ್ಪಿ. ಅದು ಅಭಿಮಾನಿಗಳಿಗೂ ಅನ್ನಿಸಿದರೆ, ಉಪೇಂದ್ರ ಇನ್ನೊಂದು ಹಂತ ಎತ್ತರಕ್ಕೇರಿದಂತಾಗುವುದು ನಿಶ್ಚಯ. ಉಪೇಂದ್ರ ಸಿನಿಮಾದಲ್ಲಿ ಮನಸ್ಸಿನ ತಾಕಲಾಟವಿತ್ತು. ಆದರೆ ಇಲ್ಲಿ ಅಧಿಕಾರಕ್ಕಾಗಿ ನಡೆಯುವ ಮೇಲಾಟ, ಕಳ್ಳಾಟ, ಜನಸಾಮಾನ್ಯನ ಪರದಾಟ ಮುನ್ನೆಲೆಗೆ ಬಂದಿದೆ. ಫ್ಲಾಶ್‌ಬ್ಯಾಕ್ ತಂತ್ರ, ಗಿಮಿಕ್, ಗೊಂದಲ, ಪಂಚಿಂಗ್ ಡೈಲಾಗ್ಸ್, ಹುಚ್ಚೆದ್ದು ಕುಣಿಸುವ ಹಾಡು… ಇದ್ಯಾವುದರ ಹೆಗಲ ಮೇಲೂ ತಲೆ ಇಡದೆ ಉಪ್ಪಿ ‘ಯುಐ’ ಮುನ್ನಡೆಸಿದ್ದಾರೆ. ಇದ್ದರೂ ತುಂಬಾ ಕಡಿಮೆ. ಹೀಗಾಗಿ ಉಪೇಂದ್ರ ನಿರ್ದೇಶನದ ಹಿಂದಿನ ಸಿನಿಮಾಗಳ ಹ್ಯಾಂಗೋವರ್ ಹೊತ್ತು ಬರಬಾರದು. ಅವರು ಈ ಸಿನಿಮಾದಲ್ಲಿ ಹೆಂಗೆಂಗೋ ಆಡುವುದಿಲ್ಲ. ಅವರದೇ ಹಾಡಾದ ಏನಿಲ್ಲ ಏನಿಲ್ಲ ಗುನುಗುತ್ತಲೇ ಏನೇನೆಲ್ಲಾವನ್ನೂ ಪ್ರೇಕ್ಷಕ ಅರ್ಥ ಮಾಡಿಕೊಳ್ಳಬೇಕು.
ಯುಐ ಸಿನಿಮಾದಲ್ಲಿ ವೈಭವೋಪೇತ ಸೆಟ್‌ಗಳಿವೆ. ಎಣಿಸಲಾಗದಷ್ಟು ಜ್ಯೂನಿಯರ್ ಆರ್ಟಿಸ್ಟ್‌ಗಳಿದ್ದಾರೆ. ಅದ್ದೂರಿ ಮೇಕಿಂಗ್, ಖ್ಯಾತ ಕಲಾವಿದರ ದಂಡೇ ಚಿತ್ರದಲ್ಲಿದೆ. ಅವೆಲ್ಲ ಕಥೆಗೆ ಪೂರಕವಾಗಿದೆ ಅಂತಲೇ ಅನಿಸಿದರೂ, ಎಲ್ಲೋ ಒಂದು ಕಡೆ ಅವೆಲ್ಲ ಅಲಂಕಾರಿಕ, ಕೃತಕ ಅಂತನ್ನಿಸುವುದುಂಟು.
‘ಜನ ಮಾಸ್ ಎಲಿಮೆಂಟ್ಸ್ ಎಕ್ಸ್‌ಪೆಕ್ಟ್ ಮಾಡ್ತಾರೆ… ಈ ಥರ ಸಿನಿಮಾ ಅಲ್ಲ’ ಅಂತ ಕ್ಲೈಮ್ಯಾಕ್ಸ್‌ಗೂ ಮುನ್ನ ಉಪ್ಪಿ ಪಾತ್ರವೇ ಮಾತನಾಡುತ್ತದೆ. ಅಂದಮೇಲೆ ಉಪೇಂದ್ರರಿಗೂ ತಾವೇನು ಮಾಡಿದ್ದೇನೆ ಎಂಬುದರ ಬಗ್ಗೆ ಸ್ಪಷ್ಟತೆ ಇದೆ ಎಂಬುದು ಖಚಿತ.
ಸಿನಿಮಾದಲ್ಲಿ ಸಾಕಷ್ಟು ಸಿಜಿ, ವಿ.ಎಫ್.ಎಕ್ಸ್ ಬಳಕೆಯಾಗಿದೆ. ಹಾಗಾಗಿ ಯುಐ ಒಂದು ಹೊಸ ಲೋಕದ ರೀತಿ ಕಾಣಿಸುವುದಂತೂ ನಿಜ. ನಿಮಗೆ ಅದು ಬ್ಲರ್ ಎನಿಸಿದರೆ ಉಪೇಂದ್ರ ವಿನಂತಿಸಿಕೊಳ್ಳುತ್ತಾರೆ-ದಯವಿಟ್ಟು ಫೋಕಸ್ ಮಾಡಿ ನೋಡಿ…