ರಾಜಧರ್ಮವ ಮರೆತರೆ ಜನಧರ್ಮ ಒಪ್ಪದಯ್ಯ !
ಇದು ಸಂಘರ್ಷಕ್ಕೆ ನಾಂದೀನಾ? ಅಥವಾ ಅಸಡ್ಡೆಯೋ, ರಾಜಕೀಯ ದ್ವೇಷವೋ?
ಕಾವೇರಿ ನೀರು ಕರ್ನಾಟಕದ ಜಲಾಶಯಗಳಲ್ಲಿ ತಳ ಕಂಡಿರುವಾಗ ನಿತ್ಯ ಐದು ಸಾವಿರ ಕ್ಯುಸೆಕ್ ನೀರು ಹರಿಸುವಂತೆ ಕಾವೇರಿ ಜಲ ನಿಯಂತ್ರಣ ಪ್ರಾಧಿಕಾರ ನೀಡಿರುವ ನಿರ್ದೇಶನದಿಂದ ಕಾವೇರಿ ಕೊಳ್ಳದ ಮಲ ಮಕ್ಕಳು ಆಕ್ರೋಶಿತರಾಗಿದ್ದಾರೆ.
ಕೇಂದ್ರ ಸರ್ಕಾರ ಕಳಸಾ ಬಂಡೂರಿ ಮತ್ತು ಮಹದಾಯಿ ಯೋಜನೆ ನೀರು ಹಂಚಿಕೆಯ ಸದ್ಬಳಕೆಗೆ ಒಂದಿಲ್ಲೊಂದು ಕೊಕ್ಕೆ ಹಾಕಿ ಯೋಜನೆ ಅನುಷ್ಠಾನಗೊಳ್ಳದಂತೆ ನೋಡಿಕೊಳ್ಳುತ್ತಿರುವುದನ್ನು ವಿರೋಧಿಸಿ ರೈತರು, ಕೇಂದ್ರ ಸಚಿವರು, ಸಂಸದರ ಮನೆ ಮುಂದೆ ಧರಣಿ ನಡೆಸುತ್ತಿದ್ದಾರೆ.
ಆಲಮಟ್ಟಿ ಜಲಾಶಯದಲ್ಲಿ ನೀರಿದೆ. ಅದರ ಸದ್ಬಳಕೆಗೆ ಅಂತಾರಾಜ್ಯ ಬಿಕ್ಕಟ್ಟಿದೆ. ಈ ಮಧ್ಯೆ ರಾಜ್ಯಾದ್ಯಂತ ಮುಂಗಾರು ವಿಫಲವಾಗಿ ಎಲ್ಲೆಡೆ ಬರದ ಛಾಯೆ ಆವರಿಸಿದೆ.
ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕೊಡಿಸುವಂತೆ ಕೋರಲು ಮುಖ್ಯಮಂತ್ರಿಗಳೇ ಪ್ರಧಾನ ಮಂತ್ರಿ, ಜಲಸಂಪನ್ಮೂಲ ಸಚಿವರು ಹಾಗೂ ಕೃಷಿ ಸಚಿವರಿಗೆ ಸರ್ವಪಕ್ಷಗಳ ನಿಯೋಗ ತರುತ್ತಿದ್ದೇನೆ, ಕಾಲಾವಕಾಶ ಕೊಡಿ ಎಂದು ಕೋರಿಕೆ ಪತ್ರ ಸಲ್ಲಿಸಿ ಹದಿನೈದು ದಿನಗಳಾದವು. ಆದರೆ ದೆಹಲಿಯಿಂದ ಸ್ಪಂದನೆಯೇ ಇಲ್ಲ ಎಂಬುದು ರಾಜ್ಯ ಸರ್ಕಾರದ ದೂರು- ಆತಂಕ.
ನಿಜ. ಈ ಎಲ್ಲ ಪ್ರಮುಖ ಸಮಸ್ಯೆ ಹಾಗೂ ವಿವಾದಗಳಿಗೆ ಅಂತಿಮ ಚರಣ ಹಾಡುವುದು ಕೇಂದ್ರ ಸರ್ಕಾರವೇ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಮತ್ತು ಅಂತಾರಾಜ್ಯ ಸಮಸ್ಯೆ- ವಿವಾದಗಳನ್ನು ನಿಭಾಯಿಸಬೇಕಾದುದು ಮತ್ತು ಇವಕ್ಕೊಂದು ಸಾಂವಿಧಾನಿಕ ಪ್ರಕ್ರಿಯೆಯನ್ನು ಕಂಡುಕೊಳ್ಳಬೇಕಾದದ್ದು ಕೇಂದ್ರ ಸರ್ಕಾರದ ಸಾಂವಿಧಾನಿಕ ಕರ್ತವ್ಯ.
ಪ್ರಧಾನ ಮಂತ್ರಿ ಕಾರ್ಯಾಲಯದಿಂದ ನಮಗೆ ಸರ್ವಪಕ್ಷ ನಿಯೋಗ ಕರೆದುಕೊಂಡು ಬರಲು ಸೂಚನೆ ಬಿಡಿ, ಪತ್ರಕ್ಕೊಂದು ಉತ್ತರವೂ ಇಲ್ಲ ಎಂಬುದೀಗ ಮುಖ್ಯಮಂತ್ರಿ ಆದಿಯಾಗಿ ಎಲ್ಲರದ್ದೂ ಬಹಿರಂಗ ಅಸಮಾಧಾನ.
ರಾಜ್ಯ ಪ್ರಸ್ತಾಪ ಮಾಡಿರುವಂತೆ ಸರ್ವಪಕ್ಷ ಸಭೆ ಕರೆದು ಸರ್ವಸಮ್ಮತ ಅಭಿಪ್ರಾಯದೊಂದಿಗೆ ಕೇಂದ್ರದ ಮುಂದೆ ಮಂಡಿಸಿರುವ ಅಂಶಗಳ ಗಂಭೀರತೆಯನ್ನು ಕೇಳಬೇಕು ಎನ್ನುವ ಕೂಗು ಸ್ವಾಭಾವಿಕವೇ.
ಕಾವೇರಿ ಕೊಳ್ಳದಲ್ಲಿ ಈ ಸಾರೆ ಮಳೆಯ ಪ್ರಮಾಣ ಅತ್ಯಂತ ಕಡಿಮೆ. ಆದಾಗ್ಯೂ ಸಂಕಷ್ಟ ಪರಿಹಾರ ಸೂತ್ರದಂತೆ ನೀರು ಹರಿಸಿದರೂ ತಮಗೆ ಸಲ್ಲಬೇಕಾದ ಅಥವಾ ಅದು ತಮ್ಮ ಹಕ್ಕು ಎಂದು ಪ್ರತಿಪಾದಿಸುವ ತಮಿಳುನಾಡಿಗೆ ಸರ್ಕಾರವೇನೋ ನೀರು ಬಿಟ್ಟಿತು. ಸರ್ವೋಚ್ಚ ನ್ಯಾಯಾಲಯಕ್ಕೆ ತಮಿಳುನಾಡು ಹೋಗಿ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದಿಂದ ಸಭೆ ನಡೆಸಿ, ಹದಿನೈದು ದಿನಗಳವರೆಗೆ ೫ ಸಾವಿರ ಕ್ಯೂಸೆಕ್ ನೀರನ್ನು ಬಿಡಿಸಿಕೊಂಡರೂ ವಿವಾದವೇನೂ ಬಗೆಹರಿದಿಲ್ಲ. ಮತ್ತೆ ಇನ್ನೂ ಹದಿನೈದು ದಿನ ೫ ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸಿಡಬ್ಲೂಸಿ ನಿರ್ದೇಶನ ನೀಡಿದೆ. ನಮ್ಮಲ್ಲೇ ನೀರಿಲ್ಲ. ಎಲ್ಲಿಂದ ಬಿಡುವುದು ಎಂದು ರಾಜ್ಯ ಸರ್ಕಾರವೇನೋ ಈಗ ಸೆಟೆದು ನಿಂತಿದೆ.
ಹದಿನೈದು ದಿನಗಳ ಹಿಂದೆಯೇ ಇದಕ್ಕೊಂದು ಸಂಧಾನ ಪರಿಹಾರ ಸೂತ್ರ ರೂಪಿಸೋಣ. ನಮಗೆ ಮೇಕೆದಾಟು ಯೋಜನೆಗೆ ಪರವಾನಗಿ ನೀಡಿ. ನೀರಿಲ್ಲದ ಸ್ಥಿತಿಯಲ್ಲಿ ನೀರು ಬಿಡುವುದು ಹೇಗೆ ಎಂದು ಪ್ರಧಾನ ಮಂತ್ರಿಗಳಿಗೆ ರಾಜ್ಯ ಮನವಿ ಮಾಡಿಕೊಂಡಿತ್ತು. ಈ ವಿಷಯವನ್ನು ಮನವರಿಕೆ ಮಾಡಿಕೊಡಲು ಭೇಟಿಗೆ ಇನ್ನೂ ಪರವಾನಗಿ ಸಿಕ್ಕಿಲ್ಲ. ಆದರೆ ಕೃಷ್ಣರಾಜಸಾಗರ ಸೇರಿದಂತೆ ಎಲ್ಲ ಜಲಾಶಯಗಳೂ ಬರಿದಾಗುತ್ತಿವೆ!
ಐದು ವರ್ಷಗಳ ಹಿಂದಿನ ಮಾತು. ಲೋಕಸಭೆ ಚುನಾವಣೆಯ ಅಬ್ಬರ. ಮೂರು ಸಾವಿರ ಮಠದ ಮೈದಾನದಲ್ಲಿ ಯಡಿಯೂರಪ್ಪ ಆಕ್ರೋಶಿತ ಮಾತು. ಇಲ್ಲಿಯೇ ರಕ್ತದಲ್ಲಿ ಬರೆದು ಕೊಡುತ್ತೇನೆ. ಕೇಂದ್ರದಲ್ಲಿ ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬಂದ ಹದಿನೈದು ದಿನದಲ್ಲಿ ಕಳಸಾ ಬಂಡೂರಿ ಯೋಜನೆಗೆ ಪರವಾನಗಿ ಕೊಡಿಸುತ್ತೇನೆ. ನನ್ನನ್ನು ನಂಬಿ ಎಂದು ಘೋಷಿಸಿದ್ದರು. ಆದರೆ ಐದು ವರ್ಷ ಸಂದರೂ ಕಳಸಾ ಬಂಡೂರಿ ನಾಲಾ ನೀರು ರೇಣುಕಾ ಜಲಾಶಯ ತಲುಪಲಿಲ್ಲ. ಹುಬ್ಬಳ್ಳಿ-ಧಾರವಾಡ ಸೇರಿದಂತೆ ನಲವತ್ತು ಹಳ್ಳಿಗಳ ಜನತೆಗೆ ಕುಡಿಯುವ ನೀರು ಲಭ್ಯವಾಗಿಲ್ಲ.
ಕೇಂದ್ರದಲ್ಲಿ ಮೋದಿ ಸರ್ಕಾರವೂ ಬಂತು. ಇದೇ ನೆಲದ ಸಂಸದರು ಕೇಂದ್ರ ಮಂತ್ರಿಯೂ ಆದರು. ತಿಂಗಳಿಗೆ ಒಂದರಂತೆ ನೆಪಗಳನ್ನು ಹುಡುಕಿತೇ ವಿನಾ, ಇನ್ನೂ ತೊಟ್ಟು ನೀರು ಬಳಸಿಕೊಳ್ಳಲಾಗುತ್ತಿಲ್ಲ. ಈ ಸಂಬಂಧ ಈ ಹಿಂದೆ ಸಿದ್ದರಾಮಯ್ಯ ನೇತೃತ್ವದಲ್ಲಿಯೇ ಸರ್ವಪಕ್ಷ ನಿಯೋಗ ಪ್ರಧಾನಿಯವರನ್ನು ಭೇಟಿ ಮಾಡಿತ್ತು. ಆಗ ನಡೆದದ್ದು ದೊಡ್ಡ ನಾಟಕವೇ. `ತಾವು ವಹಿಸಬೇಕಾದ ಪಾತ್ರವನ್ನು ರಾಜ್ಯ ಸರ್ಕಾರಕ್ಕೆ ವಹಿಸಿ ಗೋವಾ, ಮಹಾರಾಷ್ಟ್ರ ಒಪ್ಪಿಸಿಕೊಂಡು ಬನ್ನಿ' ಎಂದು ಮಾರುತ್ತರ ನೀಡಿ ಕಳಿಸಿಬಿಟ್ಟರು.
ಸರ್ವಪಕ್ಷಗಳ ರಾಜ್ಯದ ನಿಯೋಗಕ್ಕೆ ತಪರಾಕಿ ಏಟು ಸಿಕ್ಕಿತೇ ವಿನಾ, ನೀರು ಸಿಗಲಿಲ್ಲ. ಸ್ಪಂದೆಯೂ ದೊರೆಯಲಿಲ್ಲ. ಇದೆಂತಹ ಸೂತ್ರ ಎಂದು ಜನತೆ ಜರಿದದ್ದೇ ಬಂತು. ಮೋದಿ ಪಕ್ಷದ ಸಂಸದರಿಗೆ, ಸಚಿವರಿಗೆ, ಮುಖಂಡರಿಗೆಲ್ಲ ಅತ್ತ ತಲೆ ಎತ್ತುವಂತೂ ಇಲ್ಲ. ಮುಖ ಪ್ರದರ್ಶಿಸುವಂತೆಯೂ ಇಲ್ಲ. ಆ ಸ್ಥಿತಿ. ಈಗ ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರಗಳೇ ಇವೆಯಲ್ಲ. ಅವರನ್ನೇಕೆ ಈಗ ಕಳಸಾ, ಮಹದಾಯಿ ಯೋಜನೆಗಳಿಗೆ ಒಪ್ಪಿಸಬಾರದು ಇವರು?
ಡಿಪಿಆರ್ ಸಿದ್ಧಪಡಿಸಿದ್ದೇವೆ. ಕೇಂದ್ರ ಒಪ್ಪಿಗೆ ಕೊಟ್ಟಿಲ್ಲ. ಪರಿಸರದ ಪರವಾನಗಿ ಇಲ್ಲ. ಕೇಂದ್ರವೇ ನೀಡಬೇಕು. ಇತ್ಯಾದಿ ಪ್ರಶ್ನೆಗಳ ಪರಿಹಾರಕ್ಕಾಗಿ ನಿಯೋಗ ತರುತ್ತೇನೆ ಎಂದು ಕೋರಿದ್ದಾಯ್ತು. ಇದಕ್ಕೂ ದೊರಕಿಲ್ಲ ಇನ್ನೂ ಅವಕಾಶ.
ಮನ್ಸೂನ್ ಕೈಕೊಟ್ಟಿರುವ ಈ ಕಾಲದಲ್ಲಿ ರಾಜ್ಯ ಬೆಂಕಿಯುಂಡೆಯಾಗಿದೆ. ನೆಲ ಒಣಗಿ ಛಿದ್ರವಾಗಿದೆ. ಒಂದು ಹಂಗಾಮು ಪೂರ್ತಿ ರೈತ ಹೊಲಕ್ಕೆ ಕಾಲಿಡದ ಸ್ಥಿತಿ. ಈ ಮಧ್ಯೆ ಬರಪೀಡಿತ ಪ್ರದೇಶಗಳನ್ನು ಘೋಷಿಸಿ ಪರಿಹಾರ ನೀಡಲು, ಪರ್ಯಾಯ ಉದ್ಯೋಗ ಸೃಜಿಸಲು ಕೇಂದ್ರದ ಬರ ಘೋಷಣೆಯ ಸೂತ್ರ ಅಡ್ಡಿಯಾಗಿದೆ.
ಶೇಕಡಾ ೨೦ಕ್ಕಿಂತಲೂ ಕಡಿಮೆ ಮಳೆ ಬಿದ್ದಿರಬೇಕು. ಮೂರು ವಾರಗಳ ಕಾಲ ತೇವದ ವಾತಾವರಣವೂ ಇರತಕ್ಕದ್ದಲ್ಲ ಎಂಬ ಸೂತ್ರವನ್ನು ೨೦೧೬ರಲ್ಲಿ ಕೇಂದ್ರ ಘೋಷಿಸಿದೆ. ಅದೇ ಬೆಳೆ ವಿಮಾ ಪರಿಹಾರವೆಂಬ ಯೋಜನೆಗೆ ಬೇರೆ ಪರಿಹಾರ ಸೂತ್ರ. ಬರ ಘೋಷಣೆಯಾಗಬೇಕೆಂಬುದು ಷರತ್ತು. ಹೇಗಿದೆ ನೋಡಿ ಈ ದ್ವಂದ್ವಗಳು…!?
ಕೇಂದ್ರದ ಬರ ಘೋಷಣೆ ನಿಯಮವನ್ನು ಪರಿವರ್ತಿಸಿ ಜನರ ಸಂಕಷ್ಟಗಳಿಗೆ ತಕ್ಷಣ ಪರಿಹಾರ ಮಾಡಿ ಎಂದು ಕರ್ನಾಟಕ ಅಷ್ಟೇ ಅಲ್ಲ, ಬಹುತೇಕ ರಾಜ್ಯಗಳು ಮನವಿ ಮಾಡಿಕೊಂಡಿವೆ. ವಿಶೇಷವಾಗಿ ದಕ್ಷಿಣದ ರಾಜ್ಯಗಳು ಹಾಗೂ ಮಹಾರಾಷ್ಟ್ರ ಎಲ್ಲೆಡೆ ಮುಂಗಾರು ವಿಫಲವಾಗಿದೆ.
ಬರ ಸಂಬಂಧಿತ ರಾಜ್ಯದ ಮನವಿಗೂ ಕೇಂದ್ರದ ಸ್ಪಂದನೆ ಇಲ್ಲ. ರಾಜ್ಯ ಸರ್ಕಾರದ ಪ್ರಶ್ನೆ, ತುರ್ತು ಸಮಸ್ಯೆಗಳಿಗೆ ಸ್ಪಂದನೆ ಇಲ್ಲದೇ ಇರುವಾಗ ಒಕ್ಕೂಟ ವ್ಯವಸ್ಥೆಯ ಅರ್ಥವೇನು ಎಂಬುದು? ಜನಸಾಮಾನ್ಯ ಕೂಡ ಇದರಲ್ಲಿಯ ರಾಜಕೀಯ ಕಂಡುಕೊಳ್ಳದಷ್ಟು ದಡ್ಡನಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್, ತಮಿಳುನಾಡಿನಲ್ಲಿ ಡಿಎಂಕೆ ಆಡಳಿತವಿದೆ. ಆಂಧ್ರ, ತೆಲಂಗಾಣ, ಕೇರಳ, ಪಾಂಡಿಚೇರಿ ಎಲ್ಲಿಯೂ ಎನ್ಡಿಎ ಅಧಿಕಾರದಲ್ಲಿ ಇಲ್ಲ. ಹಾಗಿದ್ದಾಗ ಸ್ಪಂದನೆ ಕೇಂದ್ರದ ಮಹಾಪ್ರಭುಗಳಿಂದ ದೊರಕೀತು?
ಕಳೆದ ಏಪ್ರಿಲ್- ಮೇ ತಿಂಗಳಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ ರಾಜ್ಯದಲ್ಲಿ ಸಾಕಷ್ಟು ರ್ಯಾಲಿ ನಡೆಸಿದ್ದರು. ಆಗೆಲ್ಲ ಡಬಲ್ ಎಂಜಿನ್ ಸರ್ಕಾರದ ಲಾಭ ತಲುಪಿಸುತ್ತೇನೆ ಎಂದಿದ್ದರು. ಅದಾಗಲೇ ನಾಲ್ಕು ವರ್ಷಗಳ ಕಾಲ ಜನ ಡಬಲ್ ಎಂಜಿನ್ ಸರ್ಕಾರದ ಫಲವನ್ನು ಉಂಡಿದ್ದರು. ಅತಿವೃಷ್ಟಿಯಾದರೂ ರಾಜ್ಯಕ್ಕೆ ನೆರವಿಲ್ಲ. ಜಿಎಸ್ಟಿ ಪರಿಹಾರವಿಲ್ಲ. ರಾಜ್ಯದ ಯಾವುದೇ ಯೋಜನೆಗೂ ಅಂಗೀಕಾರವಿಲ್ಲ. ಇದೇ ಕಳಸಾ ಬಂಡೂರಿ, ಕಾವೇರಿ, ತುಂಗಭದ್ರಾ ಜಲವಿವಾದಗಳಿಂದ ಮುಕ್ತಿ ನೀಡಲಿಲ್ಲ. ಹಾಗಾಗಿಯೇ ಡಬಲ್ ಎಂಜಿನ್ ಸರ್ಕಾರವನ್ನು ಜನ ಬೆಂಬಲಿಸಲಿಲ್ಲ.
ಅಂದು ರ್ಯಾಲಿಗಳಲ್ಲಿ ನಮ್ಮ ಸರ್ಕಾರ ಬಾರದಿದ್ದರೆ ಕೇಂದ್ರದಿಂದ ನೀಡುವ ನೆರವು- ಅನುದಾನವನ್ನು ಬಹಿಷ್ಕರಿಸಬೇಕಾಗುತ್ತದೆ ಎಂಬರ್ಥದ ಧಮಕಿಯನ್ನು ಬಿಜೆಪಿ ಅಧ್ಯಕ್ಷರೇ ಹಾಕಿದ್ದರು. ಈಗ ಕೇಳುವ ಪ್ರಶ್ನೆ ಅದೇ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಸ್ಥಿತ್ವಕ್ಕೆ ಬಂದ ಪರಿಣಾಮವಾಗಿ ನಮ್ಮ ಕೋರಿಕೆಗಳಿಗೆ ಸ್ಪಂದನೆ ಇಲ್ಲದಾಗಿದೆಯೇ?
ಹೀಗೊಂದು ನೆನಪು ಮಾಡಿಕೊಳ್ಳಬೇಕು. ಯಾವುದೇ ಪಕ್ಷದ ಸರ್ಕಾರ ರಾಜ್ಯಗಳಲ್ಲಿದ್ದರೂ, ಇಂದಿರಾಗಾಂಧಿ, ವಿ.ಪಿ.ಸಿಂಗ್, ರಾಜೀವ್ಗಾಂಧಿ, ಪಿ.ವಿ.ನರಸಿಂಹರಾವ್, ಮನಮೋಹನ ಸಿಂಗ್, ವಾಜಪೇಯಿ ಇವರೆಲ್ಲ ರಾಜಧರ್ಮ ಪಾಲಿಸಿಕೊಂಡು ಬಂದವರು. ಸರ್ವಪಕ್ಷ ಸಭೆ, ಅಂತಾರಾಜ್ಯ ವಿವಾದ- ಅದು ನೆಲವಿರಲಿ, ಗಡಿ, ಜಲವಿರಲಿ, ಸರಕು ಸಾಗಣೆ- ವಾಣಿಜ್ಯ ವ್ಯವಹಾರ ಇರಲಿ, ಯಾವುದೂ ಸರಿ, ಆ ಸಮಸ್ಯೆ ವಿವಾದಗಳ ಪರಿಹಾರಕ್ಕೆ ಅಗ್ರ ಪ್ರಾಶಸ್ತ್ಯ ನೀಡಿದವರು. ಪಕ್ಷ- ಸರ್ಕಾರ ನೋಡಿದವರಲ್ಲ. ಅದರಲ್ಲೂ ವಿಶೇಷವಾಗಿ ನರಸಿಂಹರಾವ್, ವಾಜಪೇಯಿ, ಮನಮೋಹನಸಿಂಗ್ ಇವರುಗಳ ರಾಜಕೀಯೇತರ ದೂರದೃಷ್ಟಿ ಮತ್ತು ಸಾಂವಿಧಾನಿಕ ಪ್ರಕ್ರಿಯೆ ಹೇಳಿಸಿದಂತಿತ್ತು.
ನ್ಯಾಯಾಂಗ ಬಿಕ್ಕಟ್ಟು, ಸ್ವತಂತ್ರ ಸ್ವಾಯತ್ತ ಸಂಸ್ಥೆಗಳ ರಕ್ಷಣೆ, ಸಾರ್ವಜನಿಕ ಉದ್ಯಮಗಳು ಮತ್ತು ಕ್ಷೇತ್ರದ ಬಗೆಗಿನ ಕಾಳಜಿ ಮೆಚ್ಚುವಂಥದ್ದೇ. ಈಗ ಹಾಗಿದೆಯೇ? ಪರಾಮರ್ಶಿಸಬೇಕಾದದ್ದೇ.
ಮರಾಠಿ ಭಾಷೆಯನ್ನು ಶಾಸ್ತ್ರಿಯ ಭಾಷೆಯನ್ನಾಗಿಸಬೇಕೆಂದು ಅವರದೇ ಪಕ್ಷ ಅಧಿಕಾರ ಇರುವ ಮಹಾರಾಷ್ಟ್ರ ವಿಧಾನಸಭೆ ನಿರ್ಣಯ ಅಂಗೀಕರಿಸಿ, ಸರ್ವಪಕ್ಷ ನಿಯೋಗ ಕರೆತರುವುದಾಗಿ ಹೇಳಿದರೂ ಸ್ಪಂದನೆ ಇಲ್ಲ!
ಮಣಿಪುರ ಘಟನೆ ಗೊತ್ತಲ್ಲ. ಕಳೆದ ನಾಲ್ಕು ತಿಂಗಳಿಂದ ಹೊತ್ತಿ ಉರಿಯುತ್ತಿದ್ದರೂ ಇದಕ್ಕೂ ಮೌನವೇ ಪ್ರತಿಕ್ರಿಯೆ.
ನಿಜ. ಕಳೆದ ಹದಿನೈದು ದಿನಗಳಿಂದ ಪ್ರಧಾನ ಮಂತ್ರಿ ಮತ್ತು ಅವರ ಕಾರ್ಯಾಲಯ ಜಿ-೨೦ ಮತ್ತಿತರ ಮಹತ್ವದ ಕಾರ್ಯಕ್ರಮ ಆಯೋಜನೆಗೆ ಅತ್ಯಂತ ಒತ್ತಡದಲ್ಲಿದ್ದವು ಎನ್ನೋಣ. ಆದರೆ ಸಂಬಂಧಿಸಿದ ಜಲಸಂಪನ್ಮೂಲ, ಕೃಷಿ, ಹಣಕಾಸು ಸಚಿವರುಗಳ ಸ್ಪಂದನೆಯಾದರೂ ಬೇಕಿತ್ತಲ್ಲ? ಅದೂ ಒಂದು ರಾಜ್ಯ ಸರ್ಕಾರ ಅಧಿಕೃತವಾಗಿ ಪ್ರಸ್ತಾವನೆಯನ್ನು ಮಂಡಿಸಿದಾಗಲೂ ಸ್ಪಂದನೆ ಇಲ್ಲವೆಂದರೆ ಹೇಗೆ?
ರಾಜ್ಯದಿಂದ ಬಿಜೆಪಿಯ ಇಪ್ಪತ್ತೈದು ಸಂಸದರು, ಅದರಲ್ಲಿ ನಾಲ್ವರು ಸಚಿವರುಗಳು,
ಕರ್ನಾಟಕದ ಪ್ರತಿನಿಧಿಗಳು ಧ್ವನಿ ಜವಾಬ್ಧಾರಿ ಮರೆತರೇ ಎಂಬ ಪ್ರಶ್ನೆ ಎತ್ತುವುದು ಸಹಜವೇ…..
ಇಲ್ಲದಿದ್ದರೆ ಚುನಾವಣೆಯಲ್ಲಿ ಸೋತ ಪರಿಣಾಮ ರಾಜ್ಯದ ಜನತೆಯ ಮೇಲೆ ಅಸಡ್ಡೆ-ಸೇಡು ತೋರಿಸುತ್ತಿದೆ ಎಂದು ಜನ ಭಾವಿಸಿದ್ದರೆ, ಹಾಗೆ ಆರೋಪಿಸಿದರೆ ಖಂಡಿತ ತಪ್ಪೆನ್ನಿಸುವುದಿಲ್ಲ…