ರಾಜ್ಯದಲ್ಲಿ ಕಲರ್ ಕಾಟನ್ ಕ್ಯಾಂಡಿ, ಕಲರ್ ಗೋಬಿ ಮಂಚೂರಿ ಬ್ಯಾನ್
ಬೆಂಗಳೂರು: ಕರ್ನಾಟಕ ಆರೋಗ್ಯ ಇಲಾಖೆಯು ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿಯನ್‌ನಲ್ಲಿ ರೋಡಮೈನ್-ಬಿ ಆಹಾರ ಬಣ್ಣ ಏಜೆಂಟ್ ಅನ್ನು ನಿಷೇಧಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಟನ್ ಕ್ಯಾಂಡಿ ಮಾರಾಟ, ಬಳಕೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಅಪಾಯಕಾರಿಯಾದ ಕಾಟನ್ ಕ್ಯಾಂಡಿ ಬ್ಯಾನ್ ಮಾಡಲಾಗಿದೆ. ಇನ್ನು ಗೋಬಿ ಮಂಚೂರಿಯ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣಗಳನ್ನು ಬಳಸುವಂತಿಲ್ಲ. ಈ ಬಗ್ಗೆ ಸುತ್ತೋಲೆ ಹೊರಡಿಸಲಾಗುತ್ತದೆ. ಕ್ಯಾಂಡಿ ಬ್ಯಾನ್ ಮಾರಾಟ ಮಾಡಿದರೇ ಮತ್ತು ಗೋಬಿ ಮಂಚೂರಿಯ ತಯಾರಿಕೆಯಲ್ಲಿ ಯಾವುದೇ ಕೃತಕ ಬಣ್ಣ ಬಳಸಿದರೇ ಆಹಾರ ಸುರಕ್ಷಿತೆ ಮತ್ತು ಗುಣಮಟ್ಟ ಕಾಯ್ದೆ 2006 ನಿಯಮ 59ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ರಾಜ್ಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ವಿಭಾಗವು, ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾದರಿಯನ್ನು ಸಂಗ್ರಹಿಸಿದೆ. ಇವುಗಳಲ್ಲಿ ಕೃತಕ ಬಣ್ಣಗಳ ಬಳಸಿರುವುದು ಪತ್ತೆಯಾಗಿದೆ. ಗೋಬಿ ಮಂಚೂರಿ ಹಾಗೂ ಕಾಟನ್ ಕ್ಯಾಂಡಿಯಲ್ಲಿ ಕೃತಕ ಬಣ್ಣ ಬೆರಕೆ ಹಿನ್ನೆಲೆ ಈ ಹಿಂದೆ ವಿವಿಧ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ನೀಡಲಾಗಿತ್ತು. ಸದ್ಯ ಪರೀಕ್ಷೆಯ ವರದಿ ಬಂದ ಹಿನ್ನೆಲೆಯಲ್ಲಿ ಕಾಟನ್ ಕ್ಯಾಂಡಿ ಬ್ಯಾನ್ ಆಗಿದೆ, ಗೋಬಿಯಲ್ಲಿ ಕೃತಕ ಬಣ್ಣ ಬಳಸಿದರೇ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. ಗೋಬಿ ಮಂಚೂರಿ ಸಸ್ಯಾಹಾರಿ ಪದಾರ್ಥ, ಹೀಗಾಗಿ ನಿಷೇಧ ಮಾಡಲು ಸಾಧ್ಯವಿಲ್ಲ. ಹೀಗಾಗಿ ಕೃತಕ ಬಣ್ಣ ಬಳಸದಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.