ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ರಾಜ್ಯದಲ್ಲಿ ಪಂಚಾಯ್ತಿ ವ್ಯವಸ್ಥೆಗೆ `ಮಿಲಾಪಿ' ಮೊಳೆ

01:15 PM May 16, 2024 IST | Samyukta Karnataka

ಭಾರತದ ಪಂಚಾಯತ್ ರಾಜ್ ವ್ಯವಸ್ಥೆ ಜಗತ್ತಿಗೇ ಮಾದರಿ. ಪಂಚಾಯತ್ ರಾಜ್, ಗ್ರಾಮ ಸಭೆಯ ಮೂಲಕ ಎಲ್ಲ ನಿವಾಸಿಗಳು ಸಕ್ರಿಯವಾಗಿ ಪಾಲ್ಗೊಳ್ಳಬಹುದಾದ ನೇರ ಪ್ರಜಾಪ್ರಭುತ್ವ ವ್ಯವಸ್ಥೆ.

ವಿಶ್ವ ಸಂಸ್ಥೆಯ ಭಾರತದ ಕಾಯಂ ಪ್ರತಿನಿಧಿ ರುಚಿತಾ ಕಾಂಬೋಜ್, ಇತ್ತೀಚಿಗೆ (ಮೇ ೪ರಂದು) ಪ್ರಜಾಪ್ರಭುತ್ವದ ಬಲವರ್ಧನೆ ಕುರಿತು ಜಾಗತಿಕ ವೇದಿಕೆಯಲ್ಲಿ ಮಾತನಾಡಿದರೆ, ಭಾರತದ ಗ್ರಾಮೀಣ ಜನ ಗಲಿಬಿಲಿಗೊಂಡರು.

ಒಂದು ಉತ್ತಮ ವ್ಯವಸ್ಥೆಯನ್ನು ಹೇಗೆ ಹಾಳುಗೆಡವಬಹುದು ಎನ್ನುವುದಕ್ಕೆ ಪಂಚಾಯತ್ ರಾಜ್ ವ್ಯವಸ್ಥೆ ಒಂದು ಉದಾಹರಣೆ.

ಜನರ ಕೈಗೇ ಅಧಿಕಾರ, ನಿಮ್ಮ ಗ್ರಾಮದ ಅಭಿವೃದ್ಧಿ, ಬೇಕು-ಬೇಡಗಳ, ಅಗತ್ಯತೆಗಳ ತೀರ್ಮಾನ ನಿಮ್ಮ ಗ್ರಾಮದಲ್ಲಿಯೇ ಎನ್ನುವ ಅತ್ಯುತ್ತಮ ಕಲ್ಪನೆಯ ಈ ವ್ಯವಸ್ಥೆ ಈಗ ನರಳುತ್ತಿದೆ.

ದೇಶದ ಹಲವು ರಾಜ್ಯಗಳಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸದೇ ಸಾಂವಿಧಾನಿಕ ಬದ್ಧತೆಯನ್ನು ತಿರಸ್ಕರಿಸಿರುವ ಕ್ರೂರ ನಡವಳಿಕೆ ಅಧಿಕಾರಸ್ಥರದ್ದಾದರೆ, ಶಾಸಕರು, ರಾಜ್ಯ ಸರ್ಕಾರ, ಸಂಸದರು ನೇರವಾಗಿ ದರ್ಬಾರು ನಡೆಸುವ ದಂಧೆ ಈಗ ಪಂಚಾಯತ್ ರಾಜ್ ಹೆಸರಿನಲ್ಲಿ ಢಾಳಾಗಿ ನಡೆಯುತ್ತಿದೆ.

ಹೌದು. ಪಂಚಾಯತ್ ರಾಜ್ ವ್ಯವಸ್ಥೆಗೆ ಈಗ ಸಂವಿಧಾನಬದ್ಧ, ಶಾಸನಬದ್ಧ ಮಾನ್ಯತೆ, ಹಕ್ಕು ಎರಡೂ ಇವೆ. ಎಪ್ಪತ್ತೆರಡು ಮತ್ತು ಎಪ್ಪತ್ಮೂರನೇ ತಿದ್ದುಪಡಿ ಅನ್ವಯ ಅವಧಿ ಮುಗಿದ ತಕ್ಷಣ ಈ ವ್ಯವಸ್ಥೆಗೆ ಜನಪ್ರತಿನಿಧಿಗಳ ಆಯ್ಕೆಯಾಗಬೇಕು. ಈಗ ಹೇಗೆ ಲೋಕಸಭೆ, ವಿಧಾನಸಭೆಗಳಿಗೆ ಅವಧಿ ಪೂರ್ಣಗೊಳ್ಳುತ್ತಿದ್ದಂತೆಯೇ ಹೊಸ ಚುನಾವಣೆ ನಡೆದು ಸರ್ಕಾರ ರಚನೆಯಾಗುತ್ತವೋ, ಹಾಗೇ ಕಡ್ಡಾಯವಾಗಿ ಇವಕ್ಕೆ ಚುನಾವಣೆ ನಡೆದು ಜನಪ್ರತಿನಿಧಿಗಳ ಕೈಗೆ ಈ ಪಂಚಾಯತ್ ಆಡಳಿತ ನೀಡಬೇಕು.

ಕರ್ನಾಟಕದಲ್ಲೇ ನೋಡಿ. ಅವಧಿ ಮುಗಿದು ಮೂರು ವರ್ಷವಾದರೂ, ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್‌ಗಳಿಗೆ ಚುನಾವಣೆ ನಡೆಸಿಯೇ ಇಲ್ಲ. ಈ ಅವಧಿಯಲ್ಲಿ ಎರಡೂ ರಾಜಕೀಯ ಪಕ್ಷಗಳು ಆಡಳಿತ ನಡೆಸಿವೆ.

ಜಿಪಂ-ತಾಪಂ ಚುನಾವಣೆ ನಡೆಯದಂತೆ ಎಲ್ಲರೂ `ಮಿಲಾಪಿ' ಆದವರೇ. ಒಂದಿಲ್ಲೊಂದು ನೆಪ. ರಾಜಕೀಯ ಲೆಕ್ಕಾಚಾರ. ಷಡ್ಯಂತ್ರ, ಎಲ್ಲಕ್ಕೂ ಹೆಚ್ಚಾಗಿ ತಮ್ಮ ಅಧಿಕಾರ ಕಳೆದುಕೊಳ್ಳುವ, ದಬಾವಣೆ ಮಾಡಲಾಗದ ಸೆಡವು, ಕುತ್ಸಿತ ಭಾವನೆಯೇ ಇದಕ್ಕೆ ಕಾರಣ.

ಗ್ರಾಮ ಸ್ವರಾಜ್ಯ ಪರಿಕಲ್ಪನೆ ಮತ್ತು ಅನುಷ್ಠಾನದಲ್ಲಿ ಮುಂಚೂಣಿಯ ರಾಜ್ಯ. ಕರ್ನಾಟಕ ೧೯೮೩ರ ಕಾಂಗ್ರೆಸ್ಸೇತರ ಜನತಾ ಆಡಳಿತ ಬಂದಾಗ ಪ್ರಥಮವಾಗಿ ಪಂಚಾಯತ್ ರಾಜ್ ವ್ಯವಸ್ಥೆ ಅನುಷ್ಠಾನಕ್ಕೆ ಬಂತು. ಜಿಲ್ಲಾ ಪರಿಷತ್ತು, ಮಂಡಳ ಪಂಚಾಯತ್ ವ್ಯವಸ್ಥೆಯಲ್ಲಿ ಗ್ರಾಮಾಂತರ ಜನ ಅಭಿವೃದ್ಧಿಯ ಬೆಳಕು ಕಂಡರು. ಅನುಷ್ಠಾನದಲ್ಲೂ ಬದ್ಧತೆ ಇತ್ತು. ರಾಮಕೃಷ್ಣ ಹೆಗಡೆ, ನಜೀರ್‌ಸಾಬ್, ರಾಚಯ್ಯ, ಎಂ.ಪಿ.ಪ್ರಕಾಶ್, ಜೆ.ಎಚ್.ಪಟೇಲ್, ದೇವೇಗೌಡರ ತಂಡ ಕ್ರಾಂತಿಕಾರಕ ಹೆಜ್ಜೆಯನ್ನೇ ಇಟ್ಟಿತು.

ಇದನ್ನು ಅಧ್ಯಯನ ಮಾಡಿ ಮನಗಂಡ ಅಂದಿನ ಪ್ರಧಾನಿ ರಾಜೀವ್ ಗಾಂಧಿ, ಪಕ್ಷ ರಾಜಕೀಯ ಮಾಡಲಿಲ್ಲ. ಇಡೀ ದೇಶಕ್ಕೆ ಅನ್ವಯವಾಗುವಂತೆ ಪಂಚಾಯತ್ ರಾಜ್ ವ್ಯವಸ್ಥೆಗೆ ಸಾಂವಿಧಾನಿಕ, ಶಾಸನಬದ್ಧ ವ್ಯವಸ್ಥೆಯನ್ನು ರೂಪಿಸಿ ಸಂವಿಧಾನದ ತಿದ್ದುಪಡಿ ತಂದು ವ್ಯಾಪಕಗೊಳಿಸಿದರು.

ಬಡ ಕಮ್ಮಾರ, ಚಮ್ಮಾರ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತನ್ನ ಧ್ವನಿಗೆ ಕೂಡ ಮೌಲ್ಯ ಇದೆ ಎನ್ನುವುದನ್ನು ಈ ವ್ಯವಸ್ಥೆ ತೋರಿಸಿಕೊಟ್ಟಿತು. ಆ ನಂತರ ಈ ವ್ಯವಸ್ಥೆ ಹಾಳುಗೆಡುವುದು ಆರಂಭವಾಯಿತು. ಕಾರಣ, ಶಾಸಕರು, ಸಚಿವರುಗಳ ಮಾತು ನಡೆಯದಾದಾಗ ಅಧಿಕಾರಿಗಳ ದರ್ಪ, ಕೊಕ್ಕೆ, ಕೆಂಪು ಪಟ್ಟಿ ಬೆಲೆ ಕಳೆದುಕೊಂಡಾಗ ಎಲ್ಲರೂ ಸೇರಿ ಈ ವ್ಯವಸ್ಥೆಗೆ `ಗತಿ' ಕಾಣಿಸುವ ತಂತ್ರಕ್ಕೆ ಇಳಿದು ಬಿಟ್ಟರು. ಸಾಂವಿಧಾನಿಕ ರಕ್ಷಣೆ ಇದ್ದರೇನು? ಏನಾದರೊಂದು ನೆಪ ಹುಡುಕುವ ಮಟ್ಟಕ್ಕಿಳಿದುಬಿಟ್ಟರು.

ಇದಕ್ಕಾಗಿಯೇ ಏನೋ, ದೇಶದ ಹದಿನಾಲ್ಕಕ್ಕೂ ಹೆಚ್ಚು ರಾಜ್ಯಗಳಲ್ಲಿ ಪಂಚಾಯತ್ ಚುನಾವಣೆ ನಡೆದಿಲ್ಲ. ಜಿಲ್ಲಾ ಪಂಚಾಯ್ತಿಗಳಂತೂ ಅವಧಿ ಪೂರ್ಣಗೊಳಿಸಿಕೊಂಡು ಅಧಿಕಾರಿಗಳ ಆಡಂಬೋಲ. ನಾಮ್‌ಕೆವಾಸ್ತೆ ಪಂಚಾಯತ್ ರಾಜ್ ವ್ಯವಸ್ಥೆಗೆ ಈಗ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಶಾಸಕರುಗಳು, ಸರ್ಕಾರಗಳದ್ದೇ ದರ್ಬಾರು.

ಪಂಚಾಯತ್ ರಾಜ್‌ನ, ವಿಶೇಷವಾಗಿ ಜಿಲ್ಲಾ ಪಂಚಾಯ್ತಿಯ ವ್ಯವಸ್ಥೆಯನ್ನು ಹಾಳುಗೆಡವುವಲ್ಲಿ ಎಲ್ಲ ರಾಜಕೀಯ ಪಕ್ಷಗಳ, ಅಧಿಕಾರಸ್ಥರ ಕೊಡುಗೆ ಸಾಕಷ್ಟಿದೆ.

ಕರ್ನಾಟಕದಲ್ಲಿ ಜಿಲ್ಲಾ ಪಂಚಾಯ್ತಿಗಳು ವಿಸರ್ಜನೆಯಾಗಿ ಈಗ ಮೂರು ವರ್ಷಗಳೇ ಸಂದಿವೆ. ಏಪ್ರಿಲ್ ೨೦೨೧ರ ಮೇ ಅಂತ್ಯದ ಒಳಗೆ ರಾಜ್ಯದ ಎಲ್ಲ ಮೂವತ್ತೊಂದು ಜಿಪಂಗಳ ಚುನಾವಣೆ ಜರುಗಬೇಕಿತ್ತು.

ಸಾಂವಿಧಾನಿಕ ರಕ್ಷಣೆ ಇರುವ ಈ ಸಂಸ್ಥೆಗಳಿಗೆ ಆಗಲೇ ಚುನಾವಣೆ ನಡೆಯಬೇಕಿತ್ತು. ಇಷ್ಟಾಗಿಯೂ ಒಂದಿಲ್ಲೊಂದು ನೆಪ. ಜಿಲ್ಲಾ ಪಂಚಾಯ್ತಿ ಅಧಿಕಾರಾವಧಿ ಮುಗಿಯುವ ಪೂರ್ವ ಮೀಸಲಾತಿ ಮತ್ತು ಕ್ಷೇತ್ರ ವಿಂಗಡನೆ ಪೂರ್ಣಗೊಳ್ಳಬೇಕಿತ್ತು. ಹಾಗೇ ಆಗಲೇ ಇಲ್ಲ. ಮೊದಲು ಕ್ಷೇತ್ರ ವಿಂಗಡಣೆ, ಮೀಸಲಾತಿ, ಮತದಾರರ ಪಟ್ಟಿ ಮುಂತಾದ ನೆಪಗಳನ್ನು ಹೇಳುತ್ತಲೇ ಬರಲಾಯಿತು.

ಹ್ಯಾಗೆ ವ್ಯವಸ್ಥಿತ ತಂತ್ರ ಹೆಣೆಯಲಾಯಿತು ನೋಡಿ. ಪ್ರಥಮವಾಗಿ ಮೀಸಲಾತಿಯನ್ನು ನೆಪವಾಗಿಟ್ಟುಕೊಂಡು, ಮೀಸಲಾತಿ ನಿರ್ಣಯಿಸುವ ಅಧಿಕಾರವನ್ನು ಚುನಾವಣಾ ಆಯೋಗದಿಂದ ಹಿಂಪಡೆಯಲಾಯಿತು!

ಚುನಾವಣೆ ಮುಂದೂಡುತ್ತಲೇ ಹೋದುದಕ್ಕೆ ರಾಜ್ಯ ಸರ್ಕಾರಕ್ಕೆ ಐದು ಲಕ್ಷ ರೂಪಾಯಿ ದಂಡವನ್ನೂ ಹೈಕೋರ್ಟ್ ವಿಧಿಸಿತು.

ಕ್ಷೇತ್ರ ಪುನರ್‌ವಿಂಗಡನೆ ಆಯೋಗದ ಅಧ್ಯಕ್ಷ ಎಂ.ಆರ್.ಕಾಂಬಳೆ ಮೂವತ್ತೊಂದು ಜಿಲ್ಲೆಗಳ ೧೧೧೮ ಜಿಲ್ಲಾ ಪಂಚಾಯ್ತಿ, ೨೩೬ ತಾಲ್ಲೂಕುಗಳ ೩೦೭೧ ತಾಪಂಗಳ ಕ್ಷೇತ್ರ ವಿಂಗಡಣೆಯನ್ನು ಪೂರ್ಣಗೊಳಿಸಿ ವರದಿ ಕೊಟ್ಟು ವರ್ಷವಾಯಿತು. ಆ ನಂತರ ಮೀಸಲಾತಿ ಸಮರ. ಬಿಜೆಪಿ ಇದ್ದಾಗ ಏನೋ ಒಂದು ಕ್ಷೇತ್ರ ಮೀಸಲುಗೊಳಿಸಿದ್ದರೆ, ಈಗ ಕಾಂಗ್ರೆಸ್ ಸರ್ಕಾರ ಬಂದ ನಂತರ ಮತ್ತೊಂದು ಪಟ್ಟಿ. ಮೀಸಲಾತಿಗೊಂದು ಮಾನದಂಡವಿಲ್ಲ ಎಂದು ಹೈಕೋರ್ಟ್ ಕೂಡ ಚಾಟಿ ಬೀಸಿದೆ.

ಈಗ ರಾಜ್ಯಾದ್ಯಂತ ಬರವಿದೆ. ಬರ ನಿರ್ವಹಣೆಯ ಸ್ಥಳೀಯ ಹೊಣೆಗಾರಿಕೆಯನ್ನು ಪಂಚಾಯ್ತಿಗಳು, ಜಿಲ್ಲಾ ಪಂಚಾಯ್ತಿ ನಿರ್ವಹಿಸಬೇಕಿತ್ತು. ಬರದ ಬಿಸಿ ತಟ್ಟದಂತೆ ಸ್ಥಳೀಯ ಪ್ರತಿನಿಧಿಗಳು ನೋಡಿಕೊಳ್ಳುತ್ತಿದ್ದರು. ಆದರೆ ಬರದಲ್ಲೂ `ಗಳಿಕೆ' ನಡೆಸುವವರಿಗೆ ಜನ ನರಳಿದರೆಷ್ಟು? ಫಲ ದೊರೆತರೆಷ್ಟು? ತಮಗೆ ಬರದ ನೆಪದಲ್ಲಿ ದರ್ಬಾರು ನಡೆಸಬೇಕು ಅಷ್ಟೆ!

ಅಧಿಕಾರಿಗಳು ಮತ್ತು ಶಾಸಕರೇ ನೇರವಾಗಿ ನಿರ್ವಹಿಸುತ್ತಿರುವುದರಿಂದ ಪ್ರತಿ ಜಿಪಂಗಳಲ್ಲೂ ಕಾನೂನು ಬಾಹಿರ, ನಿಯಮ ಬಾಹಿರ ಕೃತ್ಯಗಳ ಸರಮಾಲೆ. ಅವ್ಯವಹಾರ. ಜನಪ್ರತಿನಿಧಿಗಳಿದ್ದಾಗ ನಡೆದ ಅವ್ಯವಹಾರಗಳಿಗಿಂತ ಮೂರು ವರ್ಷದಲ್ಲಿ, ಅಧಿಕಾರಿಗಳ ದರ್ಬಾರಿನಲ್ಲಿ ನಡೆದ ಅಕ್ರಮಗಳು ನೂರಾರು ಕೋಟಿಯಷ್ಟು. ರಾಯಚೂರು ಜಿಪಂ ಒಂದರಲ್ಲೇ ೩೦ ಕೋಟಿ ರೂಪಾಯಿ ಒಂದು ಇಲಾಖೆಯಲ್ಲಿ ಅವ್ಯವಹಾರ ನಡೆದು ತನಿಖೆಗೆ ಆದೇಶಿಸಲಾಗಿದೆ. ಪ್ರತಿ ಜಿಪಂನಲ್ಲೂ ಒಂದಿಲ್ಲೊಂದು ಹಗರಣಗಳದ್ದೇ ದರ್ಬಾರು.

ಇಷ್ಟಾಗಿಯೂ ರಾಜ್ಯ ಸರ್ಕಾರವೇ ಕಳೆದ ವರ್ಷದ ಜುಲೈನಲ್ಲಿ ಮೀಸಲಾತಿ ಪ್ರಕಟಣೆ, ಅದರ ಅಧಿಸೂಚನೆ, ಆಕ್ಷೇಪಣೆ ಎಲ್ಲದಕ್ಕೂ ಕಾಲ ನಿರ್ಧರಿಸಿ ಮುಚ್ಚಳಿಕೆ ಬರೆದುಕೊಟ್ಟು ಜನವರಿ ತಿಂಗಳಲ್ಲಿ ಚುನಾವಣೆ ನಡೆಸುವ ಭರವಸೆಯನ್ನೂ ನೀಡಿತ್ತು. ಚುನಾವಣೆ ನಡೆಯಿತೇ? ಇಲ್ಲವಲ್ಲ. ಈ ಬಗ್ಗೆ ಯಾರೊಬ್ಬರೂ ಧ್ವನಿಯನ್ನೂ ಎತ್ತಿಲ್ಲ.

ಯಾರಿಗೆ ಬೇಕಿದೆ, ತನ್ನ ಅಧಿಕಾರವನ್ನು ಮತ್ತೊಬ್ಬರಿಗೆ ಹಂಚಿಕೊಡುವುದು? ಯಾರು ಕಳೆದುಕೊಳ್ಳುತ್ತಾರೆ ಈ ಜಿಲ್ಲಾ ಪಂಚಾಯತ್,

ತಾಲ್ಲೂಕು ಪಂಚಾಯತ್‌ಗಳಲ್ಲಿ ಅಧಿಕಾರ ನಡೆಸುವ ಅವಕಾಶವನ್ನು? ಇದೇ ಈ ತಂತ್ರದ ಹಿನ್ನೆಲೆ.

ವಿಧಾನಸಭೆ ಚುನಾವಣೆ ಪೂರ್ವ ಇವಕ್ಕೆ ಚುನಾವಣೆ ನಡೆಸಿದ್ದರೆ ಎಲ್ಲಿ ಅಸಮಾಧಾನ, ಭಿನ್ನಮತ, ಜೊತೆಗೆ ಅಂದಿನ `ಮೌಲ್ಯ'(ಕಮಿಷನ್) ಬಾರದೋ ಎನ್ನುವ ದುರಾಲೋಚನೆ, ದುರಾಸೆ ಬೇರೆ. ಆ ನಂತರ ಬಂದ ಇಂದಿನ ಸರ್ಕಾರ ಗ್ಯಾರಂಟಿಗಳ ಅನುಷ್ಠಾನ, ಅವುಗಳ ಅಮಲಿನಲ್ಲಿಯೇ ದಿನದೂಡಿ ಹೈಕೋರ್ಟಿಗೆ ಏನೋ ಒಂದು ಮುಚ್ಚಳಿಕೆ ಬರೆದುಕೊಟ್ಟಿತು.

ಇಷ್ಟಾಗಿಯೂ ಲೋಕಸಭೆ ಪೂರ್ವ ಚುನಾವಣೆ ನಡೆಸುವ ಧೈರ್ಯ ಮಾಡಲಿಲ್ಲ. ಭಿನ್ನಮತ ಕಾಟ ಬೇರೆ. ವಿಧಾನಸಭೆ ಚುನಾವಣೆಯ ಗ್ಯಾರಂಟಿಯಂತೆಯೇ ಇಲ್ಲಿಯೂ ಗ್ರಾಮ ಗ್ಯಾರಂಟಿ ನೀಡಬಹುದಿತ್ತು. ಇಲ್ಲ. ಈಗ ಪದವೀಧರ, ಶಿಕ್ಷಕರ ಮತ್ತು ವಿಧಾನ ಪರಿಷತ್ತಿನ ಖಾಲಿ ಇರುವ ಸ್ಥಾನಗಳಿಗೆ ಚುನಾವಣೆ ಘೋಷಿಸಿಯಾಗಿದೆ. ಏಕೆಂದರೆ ಅಲ್ಲಿ ಬಹುಮತ ಬೇಕು. ಅಧಿಕಾರದ ಘಮಘಮಿಕೆ ಬೇಕು. ಆದ್ದರಿಂದ ನಿಯಮಬದ್ಧವಾಗಿ, ಸ್ಥಾನ ಖಾಲಿಯಾಗುತ್ತಿದ್ದಂತೇ ಚುನಾವಣೆ.

ಅದೇ ಬಿಬಿಎಂಪಿ, ಪಂಚಾಯತ್ ವ್ಯವಸ್ಥೆ ಚುನಾವಣೆ ಬೇಕಿಲ್ಲ. ಬಿಬಿಎಂಪಿಯಂತಹ ಸಾವಿರಾರು ಕೋಟಿ ರೂಪಾಯಿಗಳ ವಹಿವಾಟಿನ ಸಂಸ್ಥೆಯ ಚುನಾವಣೆ ನಡೆದಿದ್ದರೆ ಮಂತ್ರಿಯ ಕೈಯಲ್ಲಿ ಈ ಸಂಸ್ಥೆ ಇರುತ್ತಿತ್ತೇ? ಇದು ಒಳ್ಳಗುಟ್ಟು..

ಬಿಬಿಎಂಪಿ ಗುತ್ತಿಗೆ ಹಗರಣ, ಅದರ ಕಮಿಷನ್ ವ್ಯವಹಾರಗಳ ದಾಂಧಲೆಗಳೆಲ್ಲ ಚುನಾಯಿತ ಮಂಡಳಿ ಇಲ್ಲದಿರುವುದೇ ಕಾರಣ. ಒಂದು ಬಿಬಿಎಂಪಿ ಅಧಿಕಾರ ರಾಜ್ಯದ ಲೋಕಸಭಾ ಚುನಾವಣೆಯ ಖರ್ಚುವೆಚ್ಚದ ಅಂದಾಜು ಅರ್ಧ ಭಾಗವನ್ನು ನಿಭಾಯಿಸಿರಬಹುದೇನೋ, ಅಲ್ಲವೇ?

ಪಂಚಾಯತ್ ರಾಜ್ಯ, ಗ್ರಾಮ ಸ್ವರಾಜ್ಯ ವ್ಯವಸ್ಥೆ ಅಧ್ಯಯನಕ್ಕೆ ಕರ್ನಾಟಕ ದೇಶದಲ್ಲೇ ಮೊದಲ ವಿಶ್ವವಿದ್ಯಾಲಯವನ್ನೇ ರೂಪಿಸಿದೆ. ಹಲವು ಹೆಗ್ಗುರುತುಗಳನ್ನು ಈ ವ್ಯವಸ್ಥೆ ತಂದಿದೆ. ಸಂವಿಧಾನ ತಿದ್ದುಪಡಿಯ ಪೂರ್ವ ಬೇಲೂರು ಸಮಾವೇಶ ಈ ದಿಸೆಯಲ್ಲಿ ಐತಿಹಾಸಿಕ. ಹಾಗೆಯೇ ಮಹಿಳಾ ಮೀಸಲಾತಿ, ವಿವಿಧ ಪಂಗಡ, ಜಾತಿಗಳ ಮೀಸಲಾತಿ ತಂದ ಹೆಗ್ಗಳಿಕೆ ಕೂಡ ಕರ್ನಾಟಕದ್ದು. ಆದರೇನು? ಈಗ ಚುನಾವಣೆ ನಡೆಸಿ ಅಧಿಕಾರವನ್ನೇ ಹಸ್ತಾಂತರಿಸುತ್ತಿಲ್ಲವಲ್ಲ? ಎಂತಹ ಅಪಸವ್ಯವಲ್ಲವೇ? ವಿಶ್ವ ಸಂಸ್ಥೆಯಲ್ಲಿ ಭಾರತದ ಪ್ರತಿನಿಧಿ ಪಂಚಾಯತ್ ರಾಜ್ ಮತ್ತು ಮಹಿಳಾ ಮೀಸಲಾತಿ ಬಗ್ಗೆ ವಿವರಿಸಿ ಜಾಗತಿಕ ಮೆಚ್ಚುಗೆ ಗಳಿಸಿದ್ದಾರೆ. ವಾಸ್ತವವಾಗಿ ಇಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ನರಳುತ್ತಿದೆ. ಹಾಗಂತ ಹಲವರಿಗೆ ಈ ವ್ಯವಸ್ಥೆಯ ಮೇಲೆ ನಂಬಿಕೆಯೂ ಇದೆ. ಕಳೆದುಕೊಂಡಿಲ್ಲ. ಜನರಿಗೆ ತನ್ನ ಅಧಿಕಾರವನ್ನು ಹಂಚುವುದು, ಬಿಟ್ಟುಕೊಡುವುದು ಎಂದರೆ ಇಷ್ಟೆಲ್ಲ ನೋವೇ? ಸಾಂವಿಧಾನಿಕ ರಕ್ಷಣೆ, ನ್ಯಾಯಾಂಗದ ಸೂಚನೆಗಳೆಲ್ಲ ವ್ಯರ್ಥವಾದವೇ? ಜನರ ಒತ್ತಾಸೆಗೆಲ್ಲಿ ಬೆಲೆಯಿದೆ, ಅಲ್ಲವೇ?

Next Article