For the best experience, open
https://m.samyuktakarnataka.in
on your mobile browser.

ರಾಜ್ಯದಲ್ಲಿ ಲೂಟಿಕೋರ ಸರಕಾರ ಅಸ್ತಿತ್ವ

06:09 PM Jun 28, 2024 IST | Samyukta Karnataka
ರಾಜ್ಯದಲ್ಲಿ ಲೂಟಿಕೋರ ಸರಕಾರ ಅಸ್ತಿತ್ವ

ಮಂಗಳೂರು: ಜನತೆಗೆ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜನತೆಯನ್ನು ವಂಚಿಸುವ ಕೆಲಸ ಮಾಡುತ್ತಿದೆ. ಇದು ಲೂಟಿಕೋರ ಸರಕಾರವಾಗಿದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದಲ್ಲದೆ ಆಡಳಿತ ವೈಫಲ್ಯವಾಗಿದೆ ಎಂದು ಆರೋಪಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಮಿನಿ ವಿಧಾನಸೌಧ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್‌ನ ಭರವಸೆ ನಂಬಿದ ಜನ ಕಾಂಗ್ರೆಸ್ ಬೆಂಬಲಿಸಿದ್ದರು. ಆದರೆ ಈಗ ಕಾಂಗ್ರೆಸ್‌ನ ನೈಜ ಮುಖದ ಅನಾವರಣವಾಗಿಗೆ. ಕೊಟ್ಟ ಆಶ್ವಾಸನೆಯನ್ನು ಮರೆತ ಸರಕಾರ ಬೇಲೆ ಏರಿಕೆಯ ಮೂಲಕ ಜನತೆಗೆ ಸಂಕಷ್ಟ ತಂದಿತ್ತಿದೆ. ಸರಕಾರ ಭ್ರಷ್ಟಾಚಾರದಿಂದ ಮುಳುಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಿನೇ ದಿನೇ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಹಾಲಿನ ದರವೂ ಏರಿಕೆಯಾಗಿದೆ. ಜನತೆ ಈಗ ಕಾಂಗ್ರೆಸ್ ಸರಕಾರದ ವಿರುದ್ಧ ಸಿಡಿದೇಳುವ ಹಂತಕ್ಕೆ ತಲುಪಿದ್ದಾರೆ. ಜನತೆಗೆ ಹೊರೆಯಾಗಿರುವ ಸಿಎಂ ತಕ್ಷಣ ರಾಜೀನಾಮೆ ನೀಡಬೇಕು ಎಂದು ನಳಿನ್ ಆಗ್ರಹಿಸಿದರು.
ರಾಜ್ಯದಲ್ಲಿ ಕೂನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಜನತೆಯ ನೆಮ್ಮದಿಯ ಬದುಕಿಗೆ ಸರಕಾರ ಕೊಳ್ಳಿ ಇಟ್ಟಿದೆ. ಗುತ್ತಿಗೆದಾರರು, ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ. ೮೦೦ಕ್ಕೂ ಅಧಿಕ ರೈತರ ಹೊಟ್ಟೆಗೆ ಹೊಡೆಯುವ ಕೆಲಸವನ್ನು ಸರಕಾರ ಮಾಡಿದೆ ಎಂದವರು ಹೇಳಿದರು.
ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ವಾಲ್ಮೀಕಿ ನಿಗಮ ಮೂಲಕ ಸವಲತ್ತುಗಳಿಗೆ ನೀಡಬೇಕಾದ ಹಣವನ್ನು ಅಕ್ರಮ ವರ್ಗಾವಣೆ ಮಾಡಿದ ಕಾರಣ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ೧೮೭ ಕೋಟಿ ರೂ ಅಕ್ರಮ ವರ್ಗಾವಣೆಯಾಗಿರುವುದು ಗಂಭೀರ ವಿಷಯ. ಸಿದ್ದರಾಮಯ್ಯ ನೇತೃತ್ವದ ಸರಕಾರ ಜನವಿರೋಧಿ ಸರಕಾರವಾಗಿದೆ ಎಂದು ಕಿಡಿಕಾರಿದರು.
ಒಂದೆಡೆ ಬೆಲೆ ಏರಿಕೆಯಿಂದ ಜನತೆ ತತ್ತರಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಸರಿಯಾದ ವೇತನವಿಲ್ಲದೆ ಅವರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗದ ಕಾರಣ ಶಾಸಕರು ಸರಕಾರಕ್ಕೆ ಮೊರೆ ಇಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ನೇತೃಥ್ವದ ಸರಕಾರ ಕಳೆದ ೧೪ ತಿಂಗಳಲ್ಲಿ ಏನು ಸಾಧನೆ ಮಾಡಿದೆ ಎಂಬುದನ್ನು ಜನತೆಯ ಮುಂದಿಡಬೇಕು. ಆಗ ಸರಕಾರದ ನಿಜ ಬಣ್ಣ ಬಯಲಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ವಾಲ್ಮೀಕಿ ನಿಗಮದ ಹಣವನ್ನು ಸರಕಾರ ಸಂಪೂರ್ಣ ನುಂಗಿದೆ ಎಂದರು.
ಕಾಂಗ್ರೆಸ್ ಸರಕಾರ ೨ ಸಾವಿರ ಕೊಟ್ಟು ೧೦ ಸಾವಿರ ಲೂಟಿ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳು ಹಳಿ ತಪ್ಪಿವೆ. ಜನತೆ ನೆಮ್ಮದಿ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಲಜ್ಜೆಗೆಟ್ಟೆ ಸರಕಾರ ಇದಾಗಿದೆ ಎಂದು ಕಾಮತ್ ಹೇಳಿದರು.
ಶಾಸಕಿ ಭಾಗಿರಥಿ ಮುರುಳ್ಯ ಮಾತನಾಡಿ, ಸಮಾನ ನ್ಯಾಯ ಒದಗಿಸುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರು ಬಡವರಿಗೆ ಸಿಗಬೇಕಾದ ಹಣವನ್ನೇ ನುಂಗಿದ್ದಾರೆ. ಬಿಟ್ಟಿ ಭಾಗ್ಯಕ್ಕಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಿಟ್ಟ ಹಣ ವರ್ಗಾಯಿಸಲಾಗುತ್ತಿದೆ. ಸರಕಾರ ದಿಕ್ಕು ತಪ್ಪಿದೆ ಎಂದು ಕಿಡಿಕಾರಿದರು.
ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಕಾಂಗ್ರೆಸ್ ಸರಕಾರ ಎಟಿಎಂ ಸರಕಾರವಾಗಿದೆ. ಈ ಭ್ರಷ್ಟ ಸರಕಾರವನ್ನು ತೊಲಗಿಸಲು ಪಣತೊಡಬೇಕು ಎಂದರು.
ಪ್ರತಿಭಟನೆಯ ಬಲಿಕ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುವ ಯತ್ನ ನಡೆಯಿತು. ಆದರೆ ಪೊಲೀಸರು ಇದಕ್ಕೆ ಅವಕಾಶ ಕಲ್ಪಿಸಲಿಲ್ಲ.
ಪ್ರತಿಭಟನೆಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಕೆ.ಮೋನಪ್ಪ ಭಂಡಾರಿ, ಉಪಮೇಯರ್ ಸುನೀತಾ, ಬಿಜೆಪಿ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಪ್ರೇಮಾನಂದ ಶೆಟ್ಟಿ, ಸಂತೋಷ್ ಕುಮಾರ್ ಬೋಳಿಯಾರ್, ಕಿಶೋರ್ ಕುಮಾರ್, ಪೂರ್ಣಿಮಾ, ಹರೀಶ್ ಬಿಜತ್ರೆ, ಜಗನ್ನಾಥ್, ದಿನೇಶ್ ಅಮ್ಟೂರು ಮತ್ತಿತರರು ಉಪಸ್ಥಿತರಿದ್ದರು.