For the best experience, open
https://m.samyuktakarnataka.in
on your mobile browser.

ರಾಜ್ಯದಲ್ಲಿ ಹುಕ್ಕಾ ಬಾರ್ ಕಾಯ್ದೆ ಉಲ್ಲಂಘಿಸಿದರೆ ೩ ವರ್ಷ ಜೈಲು

10:48 PM Feb 21, 2024 IST | Samyukta Karnataka
ರಾಜ್ಯದಲ್ಲಿ ಹುಕ್ಕಾ ಬಾರ್ ಕಾಯ್ದೆ ಉಲ್ಲಂಘಿಸಿದರೆ ೩ ವರ್ಷ ಜೈಲು

ವಿಧಾನಸಭೆ: ರಾಜ್ಯದಲ್ಲಿ ಹುಕ್ಕಾ ಬಾರ್ ಇನ್ನು ಬಂದ್… ಅಲ್ಲದೇ ಇಪ್ಪತ್ತೊಂದು ವರ್ಷ ವಯಸ್ಸಿನ ಒಳಗಿನವರಿಗೆ ಸಿಗರೇಟು ಅಥವಾ ಇತರ ತಂಬಾಕು ಉತ್ಪನ್ನಗಳನ್ನು ಮಾರುವಂತಿಲ್ಲ.
ಎಲ್ಲ ರೀತಿಯ ಹುಕ್ಕಾ ಬಾರ್‌ಗಳನ್ನೂ ನಿಷೇಧಿಸುವ ಮತ್ತು ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಬಿಗಿ ನಿಬಂಧನೆಗಳನ್ನು ಹೇರುವ ತಿದ್ದುಪಡಿಯನ್ನು ಸಂಬಂಧಿಸಿದ ಕಾಯ್ದೆಗೆ ತರಲಾಗಿದೆ. ಉಲ್ಲಂಘಿಸಿದರೆ ಒಂದರಿಂದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ಐದರಿಂದ ಐವತ್ತು ಸಾವಿರ ರೂಪಾಯಿವರೆಗೆ ಜುಲ್ಮಾನೆಯನ್ನು ವಿಧಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಸಿಗರೇಟುಗಳ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ, ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆ, ವಿನಿಮಯ) ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಹುಕ್ಕಾ ಬಾರ್ ನಿಷೇಧಿಸುವ ಶಾಸನವನ್ನು ಬುಧವಾರ ರೂಪಿಸಿತು. ತಿದ್ದುಪಡಿಯನ್ನು ವಿಧಾನಸಭೆ ಸರ್ವಾನುಮತದೊಂದಿಗೆ ಮಾತ್ರವಲ್ಲ, ಮನಬಿಚ್ಚಿ ಶ್ಲಾಘಿಸುವುದರೊಂದಿಗೆ ಅಂಗೀಕರಿಸಿದೆ.
ಆರೋಗ್ಯ ಸಚಿವ ದಿನೇಶ ಗುಂಡೂರಾವ್ ವಿಧೇಯಕ ಮಂಡಿಸಿದರು. ವಿಪಕ್ಷ ನಾಯಕ ಆರ್.ಅಶೋಕ, ಬಸವರಾಜ ಬೊಮ್ಮಾಯಿ, ಆರಗ ಜ್ಞಾನೇಂದ್ರ, ಸುರೇಶಕುಮಾರ ಸೇರಿದಂತೆ ಆಡಳಿತ ಮತ್ತು ಪ್ರತಿಪಕ್ಷದವರೆಲ್ಲ ವಿಧೇಯಕ ಸ್ವಾಗತಿಸಿದರು. ಸರ್ಕಾರವನ್ನು ಅಭಿನಂದಿಸಿದರು. ಇಂತಹ ಕಾಯ್ದೆ ಪ್ರಸಕ್ತ ಸನ್ನಿವೇಶದಲ್ಲಿ ಅತ್ಯಗತ್ಯವಾಗಿತ್ತು ಎಂದರು.
ಹುಕ್ಕಾ ಬಾರ್‌ಗಳ ಹಾವಳಿ ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಬೆಳಗಾವಿಯಂತಹ ದೊಡ್ಡ ನಗರಗಳಲ್ಲಿ ಮಿತಿ ಮೀರಿದೆ ಎನ್ನುವ ದೂರುಗಳು ಇತ್ತೀಚೆಗೆ ಹೆಚ್ಚಿದ್ದವು. ಇವುಗಳನ್ನು ನಿಷೇಧಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂಬ ಒತ್ತಾಯ ಸಾರ್ವತ್ರಿಕವಾಗಿತ್ತು.
ತಿದ್ದುಪಡಿ ವಿಧೇಯಕ ವಿಧಾನ ಪರಿಷತ್ತಿಗೆ ಹೋಗಿದ್ದು, ಗುರುವಾರ ಅಂಗೀಕಾರಗೊಂಡು ರಾಜ್ಯಪಾಲರ ಮುದ್ರೆಯೊಂದಿಗೆ ಕಾಯ್ದೆಯಾಗಲಿದೆ. ಇದರೊಂದಿಗೆ ಹುಕ್ಕಾ ಬಾರ್‌ಗಳನ್ನು ನಿಷೇಧಿಸಿರುವ ದೇಶದ ಅನೇಕ ರಾಜ್ಯಗಳ ಸಾಲಿಗೆ ಕರ್ನಾಟಕವೂ ಸೇರಿದಂತಾಗಲಿದೆ.