For the best experience, open
https://m.samyuktakarnataka.in
on your mobile browser.

ರಾಜ್ಯದ ತೆರಿಗೆಯ ಪಾಲು ಅನ್ಯಾಯ ಪ್ರಶ್ನಿಸುವುದು ತಪ್ಪಾ

11:57 PM Feb 21, 2024 IST | Samyukta Karnataka
ರಾಜ್ಯದ ತೆರಿಗೆಯ ಪಾಲು ಅನ್ಯಾಯ ಪ್ರಶ್ನಿಸುವುದು ತಪ್ಪಾ

ಬೆಂಗಳೂರು: ರಾಜ್ಯದಿಂದ ೪.೩೦ ಲಕ್ಷ ಕೋಟಿ ತೆರಿಗೆ ಹೋಗುತ್ತಿದೆ. ಆದರೆ, ನಮ್ಮ ಪಾಲು ಸಮರ್ಪಕವಾಗಿ ಬರುತ್ತಿಲ್ಲ. ರಾಜ್ಯಗಳು ಸುಭದ್ರವಾಗಿದ್ದರೆ ಮಾತ್ರ ದೇಶ ಸುಭದ್ರ. ರಾಜ್ಯಗಳನ್ನು ಕೇಂದ್ರ ದುರ್ಬಲಗೊಳಿಸಬಾರದು. ರಾಜ್ಯಕ್ಕೆ-ರಾಜ್ಯದ ಜನರ ತೆರಿಗೆಯ ಪಾಲಿಗೆ ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸುವುದು ತಪ್ಪಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದಂತೆ ಉತ್ತರ ನೀಡಿದ ಅವರು, ನಮ್ಮ ಸಂವಿಧಾನ ನಮ್ಮದು ಒಕ್ಕೂಟ ವ್ಯವಸ್ಥೆ ಎಂದು ರೂಪಿಸಿದೆ. ಇದನ್ನು ಇಡೀ ದೇಶ ಒಪ್ಪಿಕೊಂಡಿದೆ. ಆದರೆ, ಈ ಒಕ್ಕೂಟ ವ್ಯವಸ್ಥೆಯನ್ನು ಹಾಳು ಮಾಡಬಾರದು. ನರೇಂದ್ರ ಮೋದಿಯವರು ಕೋ ಆಪರೇಟಿವ್ ಫೆಡರಿಲಿಸಂ' ಎಂದು ಹೇಳುತ್ತಾರೆ. ಆದರೆ, ಅವರ ಮತ್ತು ಕೇಂದ್ರ ಸರ್ಕಾರದ ನಡವಳಿಕೆಯಲ್ಲಿ ಇದು ಕಾಣುತ್ತಿಲ್ಲ ಎನ್ನುತ್ತಾ ಕೇಂದ್ರದಿಂದ ರಾಜ್ಯಕ್ಕೆ ಕಳೆದ ೧೦ ವರ್ಷಗಳಿಂದ ನಿರಂತರವಾಗಿ ಆಗುತ್ತಿರುವ ಅನ್ಯಾಯದ ಅಂಕಿ-ಅಂಶಗಳನ್ನು ಬಿಚ್ಚಿಟ್ಟರು. ರಾಜ್ಯದಿಂದ ಕೇಂದ್ರಕ್ಕೆ ೪.೩೦ ಲಕ್ಷ ಕೋಟಿ ತೆರಿಗೆ ಹೋಗುತ್ತಿದೆ. ತೆರಿಗೆ ಹಂಚಿಕೆಯಲ್ಲಿ ೨೦೨೩-೨೪ಕ್ಕೆ ೩೭,೨೫೨ ಕೋಟಿ ರೂ. ಬರುತ್ತಿದೆ. ಕೇಂದ್ರ ಪುರಸ್ಕೃತ ಯೋಜನೆಗಳಿಂದ ೧೩,೦೦೫ ಕೋಟಿ ಸೇರಿ ಒಟ್ಟು ೫೦,೨೫೭ ಕೋಟಿ ರೂ. ಮಾತ್ರ ಬರುತ್ತಿದೆ. ಕೇಂದ್ರದ ಬಜೆಟ್ ಗಾತ್ರ ಹೆಚ್ಚಾದ ಹಾಗೆ ರಾಜ್ಯದ ಪಾಲು ಕೂಡ ನಿಯಮಬದ್ದವಾಗಿ ಹೆಚ್ಚಾಗಬೇಕು. ೨೦೧೮-೧೯ರಲ್ಲಿ ಕೇಂದ್ರದ ಬಜೆಟ್ ಗಾತ್ರ ೨೪,೪೨,೨೧೩ ಕೋಟಿಗಳು. ಆಗ ರಾಜ್ಯಕ್ಕೆ ಲಭಿಸಿದ್ದು ೫೧,೦೦೦ ಕೋಟಿ ರೂ., ೨೦೧೯-೨೦ರಲ್ಲಿ ಬಜೆಟ್ ಗಾತ್ರ ೨೭,೮೬,೩೪೯ ಕೋಟಿ ರೂ. ರಾಜ್ಯಕ್ಕೆ ಬಂದ ಪಾಲು ೪೩,೩೨೩ ಕೋಟಿ ರೂ., ೨೦೨೦-೨೧ರಲ್ಲಿ ಬಜೆಟ್ ಗಾತ್ರ ೩೦,೪೨,೨೪೩ ಕೋಟಿ ರೂ. ರಾಜ್ಯಕ್ಕೆ ಬಂದ ಪಾಲು ೩೧,೭೩೪ ಕೋಟಿ ರೂ., ೨೦೨೧-೨೨ರಲ್ಲಿ ೩೪,೮೩,೨೩೬ ಕೋಟಿ ರೂ. ರಾಜ್ಯಕ್ಕೆ ಲಭಿಸಿದ ಪಾಲು ೪೮,೫೮೯ ಕೋಟಿ ರೂ. ೨೦೨೨-೨೩ರಲ್ಲಿ ೪೧,೮೭,೨೩೨ ಕೋಟಿ ರೂ. ರಾಜ್ಯಕ್ಕೆ ಲಭಿಸಿದ್ದು ೫೩,೫೧೦ ಕೋಟಿ ರೂ. ೨೦೨೩-೨೪ರಲ್ಲಿ ಕೇಂದ್ರದ ಬಜೆಟ್ ಗಾತ್ರ ೪೫,೦೩,೦೯೭ ಕೋಟಿ ರೂ., ರಾಜ್ಯಕ್ಕೆ ಲಭಿಸಿದ್ದು ೫೦,೨೫೭ ಕೋಟಿ ರೂ., ೨೦೨೪-೨೫ನೇ ಸಾಲಿನಲ್ಲಿ ರಾಜ್ಯದ ಪಾಲು ೫೯,೭೮೫ ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಬಜೆಟ್ ಗಾತ್ರ ಹೆಚ್ಚಳವಾಗುತ್ತಿದ್ದರೂ ರಾಜ್ಯಕ್ಕೆ ಬರಬೇಕಾದ ಪಾಲು ಕಡಿಮೆಯಾಗುತ್ತಾ ಹೋಗುತ್ತಿದೆ. ಹೀಗಿದ್ದಾಗ ನಮ್ಮ ಪಾಲನ್ನು ಕೇಳಿದರೆ ಪ್ರಧಾನಿ ಅವರು ಬೆದರಿಕೆ ರೀತಿ ಮಾತನಾಡುತ್ತಾರೆ ಎಂದು ಹೇಳಿದರು. ಇದಕ್ಕೆ ಬಿಜೆಪಿ ಸದಸ್ಯರಿಂದ ಆಕ್ಷೇಪ. ಜೋರು ಧ್ವನಿಯಲ್ಲಿ ಪ್ರಧಾನಿ ಅವರು ಹಾಗೆ ಹೇಳಿಯೇ ಇಲ್ಲ ಎಂದರು. ಇದಕ್ಕೆ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಅವರು, ಪ್ರಧಾನಿ ಮೋದಿಯವರಂತೂ ಸುಳ್ಳು ಹೇಳುವುದು ಮೂಮೂಲು. ಬಿಜೆಪಿ ಸದಸ್ಯರೂ ಸುಳ್ಳು ಹೇಳುವುದನ್ನು ಮುಂದುವರಿಸಿದ್ದಾರೆ ಎಂದು ಟೀಕಿಸಿದರು. ಮೋದಿ ಏನು ಹೇಳಿದ್ದರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಗುಜರಾತಿನ ಸಿಎಂ ಆಗಿದ್ದಾಗ ೨೦೧೨ರಲ್ಲಿ ಗುಜರಾತಿಗೆ ಬರುತ್ತಿರುವ ಆರ್ಥಿಕ ಪಾಲನ್ನು ವಿರೋಧಿಸಿದ್ದರು. ಗುಜರಾತ್ ರಾಜ್ಯ 'ನಾವು ಭಿಕ್ಷುಕ ರಾಜ್ಯವೇ, ನಾವು ಭಿಕ್ಷುಕರೆ, ನಾವು ಕೇಂದ್ರದ ಕರುಣೆಯ ಮೇಲೆ ಬದುಕಬೇಕೇ?' ಎಂದಿದ್ದರು. ಅಂದಿನ ಕೇಂದ್ರಕ್ಕೆಗುಜರಾತಿನಿಂದ ತೆರಿಗೆ ತೆಗೆದುಕೊಳ್ಳಬೇಡಿ, ಅದನ್ನು ನಾವೇ ಬಳಸಿಕೊಳ್ಳುತ್ತೇವೆ' ಎಂದು ಮೋದಿ ಅಂದಿದ್ದರು. ಇದು ಸಂವಿಧಾನ, ಒಕ್ಕೂಟ ವ್ಯವಸ್ಥೆಗೆ ವಿರೋಧವಲ್ಲವೇ? ಲಕ್ನೋದಲ್ಲಿ ೨೦೧೨ರಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ `ಯುಪಿಎ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ಅಪಾಯ' ಎಂದಿದ್ದರು. ನಾವು ನರೆಂದ್ರ ಮೋದಿ ಒಕ್ಕೂಟ ವ್ಯವಸ್ಥೆಗೆ ಅಪಾಯ ಎಂದು ಹೇಳುತ್ತೇವೆ ಎಂದರು.
ನೆರವಿನ ಪ್ರಮಾಣ ಇಳಿಕೆ: ಅಂಕಿಅಂಶಗಳಿಲ್ಲದೇ ನಾನು ಯಾವುದೇ ಮಾತನ್ನು ಹೇಳುವುದಿಲ್ಲ. ವಿರೋಧ ಪಕ್ಷದವರ ಟೀಕೆ ಸರಿಯಾಗಿದ್ದರೆ, ಸರಿಪಡಿಸಿಕೊಳ್ಳಲು ಬದ್ಧ. ೧೫ ನೇ ಹಣಕಾಸು ಆಯೋಗದಲ್ಲಿ ೩.೬೪ ರಾಜ್ಯಕ್ಕೆ ಬಂದಿತು. ೧೪ ರಿಂದ ೧೫ನೇ ಹಣಕಾಸು ಆಯೋಗಕ್ಕೆ ಹೋಲಿಸಿದಾಗ ಶೇ. ೧.೦ರಷ್ಟು ಕಡಿಮೆಯಾಯಿತು. ಇದರಿಂದ ೧೦೦ ರೂ. ನಲ್ಲಿ ಕೇವಲ ೧೩ ರೂ. ರಾಜ್ಯಕ್ಕೆ ಮರಳಿ ಬರುತ್ತಿದೆ. ೧೫ನೇ ಹಣಕಾಸು ಆಯೋಗದಲ್ಲಿ ಮಧ್ಯಂತರ ವರದಿಯಲ್ಲಿ ೫೪೯೫ ಕೋಟಿ ನೀಡಬೇಕಿತ್ತು. ಆದರೆ ಅಂತಿಮ ವರದಿಯಲ್ಲಿ ಪಿ.ಆರ್.ಆರ್ ಮತ್ತು ಕೆರೆಗಳ ಅಭಿವೃದ್ಧಿ, ವಿಶೇಷ ಅನುದಾನ ಸೇರಿದಂತೆ ಒಟ್ಟು ೧೧೪೯೫ ಕೋಟಿ ರಾಜ್ಯಕ್ಕೆ ಬರಬೇಕಿತ್ತು. ಈ ಅನುದಾನ ರಾಜ್ಯಕ್ಕೆ ನೀಡಲು ಕೇಂದ್ರ ವಿತ್ತಸಚಿವೆ ಒಪ್ಪಲಿಲ್ಲ ಎಂದು ದೂರಿದರು.
ಪದೇ ಪದೇ ಅಡ್ಡಿ: ಅನುದಾನ ಕಡಿಮೆಯಾಗುತ್ತಿರುವ ಕುರಿತಂತೆ ಅಂಕಿ ಅಂಶಗಳೊಂದಿಗೆ ವಿವರ ನೀಡಿದ ಮುಖ್ಯಮಂತ್ರಿಗಳು ಬರದ ಕುರಿತು ವಿವರಣೆ ನೀಡಲು ಮುಂದಾದರು. ರಾಜ್ಯದಲ್ಲಿ ಬರದ ಬಂದಿದೆ. ೨೨೩ ತಾಲೂಕುಗಳನ್ನು ಬರ ಎಂದು ಘೋಷಣೆ ಮಾಡಲಾಗಿದೆ. ಇದಕ್ಕಾಗಿ ಕೇಂದ್ರಕ್ಕೆ ಮೊರೆ ಹೋದಾಗ ಅಧ್ಯಯನ ತಂಡ ಬಂದು ವೀಕ್ಷಣೆ ಮಾಡಿ ಕೇಂದ್ರಕ್ಕೆ ವರದಿ ನೀಡಿದೆ. ಆದರೆ, ಇದುವರೆಗೆ ನಯಾಪೈಸೆ ಬರಲಿಲ್ಲ. ರಾಜ್ಯದಲ್ಲಿ ೪೮ ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿ ೩೫ ಸಾವಿರ ಕೋಟಿಯಷ್ಟು ಬೆಳೆ ಹಾನಿಯಾಗಿದೆ ಮೊದಲು ೧೭.೯೮೧ ಕೋಟಿ ನಂತರ ಎರಡನೆ ಹಂತದಲ್ಲಿ ೧೮,೧೭೧ ಕೋಟಿ ರೂ. ಎನ್‌ಡಿಆರ್‌ಎಫ್ ನೆರವು ಕೇಳಿದೆವು. ನಾನು ಹಾಗೂ ಡಿ.ಕೆ. ಶಿವಕುಮಾರ್, ಸಚಿವರುಗಳು ಪ್ರಧಾನಿ, ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವು ಸಚಿವರನ್ನು ಭೇಟಿ ಮಾಡಿದೆವು. ಆದರೂ ಇದುವರೆಗೆ ನಯಾ ಪೈಸೆ ನೆರವು ಬರಲಿಲ್ಲ. ಆದರೆ, ನಾವು ಸುಮ್ಮನೆ ಇಲ್ಲ ತಾತ್ಕಾಲಿವಾಗಿ ೩೩ ಲಕ್ಷ ರೈತರಿಗೆ ೨ ಸಾವಿರ ರೂ.ಗಳಂತೆ ಪರಿಹಾರ ನೀಡಿದ್ದೇವೆ ಎಂದರು.