For the best experience, open
https://m.samyuktakarnataka.in
on your mobile browser.

ರಾಜ್ಯೋತ್ಸವ: ಸರಕಾರಿ ನೌಕರರ ಪಾಲ್ಗೊಳ್ಳುವಿಕೆ ಕಡ್ಡಾಯ

09:49 PM Oct 16, 2024 IST | Samyukta Karnataka
ರಾಜ್ಯೋತ್ಸವ  ಸರಕಾರಿ ನೌಕರರ ಪಾಲ್ಗೊಳ್ಳುವಿಕೆ ಕಡ್ಡಾಯ

ಬೆಂಗಳೂರು: ನವೆಂಬರ್ ೧ರಂದು ನಡೆಯಲಿರುವ ರಾಜ್ಯೋತ್ಸವದಲ್ಲಿ ಎಲ್ಲ ಸರಕಾರಿ ನೌಕರರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಕಡ್ಡಾಯವಾಗಿ ಭಾಗವಹಿಸಲು ಸರಕಾರ ಸೂಚಿಸಿದೆ. ಅಂದು ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವರು ರಾಷ್ಟ್ರೀಯ ಧ್ವಜಾರೋಹಣ ನೆರವೇರಿಸಿ, ಸಾರ್ವಜನಿಕರಿಗೆ ರಾಜ್ಯೋತ್ಸವದ ಸಂದೇಶ ನೀಡಲಿದ್ದಾರೆ. ವಿವಿಧ ಇಲಾಖೆಗಳಿಗೆ ಜವಾಬ್ದಾರಿಗಳನ್ನು ವಹಿಸಲಾಗಿದೆ. ಪ್ರತಿ ಇಲಾಖೆಯು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು. ಮತ್ತು ತಮ್ಮ ಇಲಾಖೆಗಳ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವಂತೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.
ರಾಜ್ಯೋತ್ಸವದ ಕವಾಯತು ಪ್ರದರ್ಶನದಲ್ಲಿ ಹಾಗೂ ಗೌರವ ರಕ್ಷೆ ನೀಡಲು ಆಯ್ಕೆಯಾಗುವ ದಳಗಳಿಗೆ ಅಕ್ಟೋಬರ್ ೨೮ರಿಂದ ೩೦ ವರೆಗೆ ಆರ್.ಎನ್.ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ತರಬೇತಿ ನೀಡಲಾಗುವುದು. ಉತ್ತಮ ತಂಡಗಳನ್ನು ಅಂತಿಮವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದ ಆಯ್ಕೆ ಸಮಿತಿ ಆಯ್ಕೆ ಮಾಡಲಿದೆ. ಉತ್ತಮ ಪ್ರದರ್ಶನ ನೀಡುವ ದಳಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು. ಅಕ್ಟೋಬರ್ ೩೧ರಿಂದ ನವೆಂಬರ್ ೨ ರವರೆಗೆ ಎಲ್ಲ ಸರ್ಕಾರಿ ಕಟ್ಟಡಗಳು ಹಾಗೂ ಸಾರ್ವಜನಿಕ ಮುಖ್ಯ ವೃತ್ತಗಳಲ್ಲಿ ದೀಪಾಲಾಂಕಾರ ಮಾಡಬೇಕು. ರಾಜ್ಯೋತ್ಸವ ಕಾರ್ಯಕ್ರಮ ಸ್ಥಳದಲ್ಲಿ ಅಗತ್ಯ ಕುಡಿವ ನೀರು, ಶೌಚಾಲಯ ಮತ್ತು ಭಾಗವಹಿಸುವ ವಿದ್ಯಾರ್ಥಿಗಳಿಗೆ ಅಲ್ಪೋಪಹಾರದ ವ್ಯವಸ್ಥೆಯನ್ನು ಸಂಬಂಧಪಟ್ಟ ಇಲಾಖೆಗಳು ನಿರ್ವಹಿಸಬೇಕಿದೆ ಎಂದು ಪ್ರಕಟಣೆ ತಿಳಿಸಿದೆ.