ರಾಜ್ಯ ಸಂಸದರು ಧ್ವನಿ ಎತ್ತಲೇಬೇಕಿದೆ
ಕರ್ನಾಟಕ ಇಷ್ಟು ನಿರ್ಲಕ್ಷಿತವಾ?
ಮೋದಿ ೩.೦ ಸರ್ಕಾರದ ಪ್ರಥಮ ಆಯವ್ಯಯ ಮಂಗಳವಾರ ಮಂಡನೆಯಾದ ನಂತರ, ಕರುನಾಡಿನ ಜನತೆ ಈ ರೀತಿ ಪ್ರಶ್ನಿಸಿದ್ದು, ಪ್ರತಿಕ್ರಿಯಿಸಿದ್ದು ಅಸಹಜವಾದದ್ದಲ್ಲ.
ಇಡೀ ಆಯವ್ಯಯ ಓದಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಕರ್ನಾಟಕ'ದ ಹೆಸರೇ ಬಂದಿಲ್ಲ. ನೆರೆ ರಾಜ್ಯಗಳ ಯೋಜನೆ ಪ್ರಸ್ತಾಪ ಬಂದಾಗ, ಬೆಂಗಳೂರು ಹೆಸರು ಮಾತ್ರ ಉಲ್ಲೇಖಿಸಲ್ಪಟ್ಟಿತು. ಹೌದು. ಒಂದೇ ಒಂದು ಕರ್ನಾಟಕದ ಯೋಜನೆಯ ಪ್ರಸ್ತಾಪವಿಲ್ಲ. ಅಥವಾ ಭವಿಷ್ಯತ್ತಿನ ಬೆಳವಣಿಗೆ, ಕಾರ್ಯಕ್ರಮಗಳ ಘೋಷಣೆಯೂ ರಾಜ್ಯಕ್ಕಿಲ್ಲ. ಇದು ಉದ್ದೇಶಿತಪೂರಿತ ನಿರ್ಲಕ್ಷ್ಯವೇ? ರಾಜಕೀಯ ಸೇಡೇ? ಒಳಪೆಟ್ಟಿನ ರಾಜಕಾರಣವೇ? ಅಥವಾ ರಾಜಕಾರಣದ ಒಳಪೆಟ್ಟೇ? ಅಥವಾ ಮೈತ್ರಿ ಸರ್ಕಾರದ ರಕ್ಷಣೆಗಾಗಿ ಕರ್ನಾಟಕ ಹಾಗೂ ದಕ್ಷಿಣ ಭಾರತ ಅನಿವಾರ್ಯವಾಗಿ ತ್ಯಾಗ ಮಾಡಬೇಕಾಯಿತೇ? ಯಾವುದಕ್ಕೂ ಇನ್ನೂ ಕಾಯಬೇಕಾಗಿದೆ. ಕೇಂದ್ರ ಹಣಕಾಸು ಸಚಿವರು ಕರ್ನಾಟಕದ ಪ್ರತಿನಿಧಿ. ಇಲ್ಲಿಯ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾದವರು. ತಾವು ಪ್ರತಿನಿಧಿಸುವ ರಾಜ್ಯದ ಹಿತ ಕಾಯುತ್ತಾರೆಂಬ ಆಶಯ ಆಕಾಂಕ್ಷೆ ಜನತೆಗೆ ಸಹಜ. ಹಾಗೇ ಮೈತ್ರಿ ಪಕ್ಷದ ಜನತಾದಳ(ಎಸ್) ಎಚ್.ಡಿ.ಕುಮಾರಸ್ವಾಮಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು. ಅತ್ಯಂತ ಪ್ರಭಾವಿ ಖಾತೆ. ಎನ್‌ಡಿಎ ಮೈತ್ರಿಕೂಟವಾಗಿರುವುದರಿಂದ ಅವರೊಂದಿಷ್ಟು ರಾಜ್ಯದ ಪರ ಚೌಕಾಸಿಗಿಳಿಯುತ್ತಾರೆಂಬ ನಿರೀಕ್ಷೆ. ಇನ್ನು, ಪ್ರಲ್ಹಾದ ಜೋಶಿ. ಹಿಂದಿನ ಸರ್ಕಾರ ಹಾಗೂ ಈಗಿನ ಸರ್ಕಾರಗಳೆರಡಲ್ಲೂ ಪ್ರಭಾವಿ ಮಂತ್ರಿ. ಮೋದಿ ಅವರ ಅಕ್ಕಪಕ್ಕ ಅವರ ಕಣ್ಣಾಲಿಯ ಅಣತಿಯಂತೆ ಖಾತೆ ನಿರ್ವಹಿಸುವವರು. ಇದೇ ಸಂಪುಟದಲ್ಲಿ ವಿ.ಸೋಮಣ್ಣ ರಾಜ್ಯ ರೈಲ್ವೆ ಸಚಿವರು. ಶೋಭಾ ಕರಂದ್ಲಾಜೆ ಹಿರಿಯ ಸಂಸದೆ ಮತ್ತು ಪ್ರಭಾವಿ ಮಂತ್ರಿ. ಹತ್ತೊಂಬತ್ತು ಬಿಜೆಪಿ-ಜೆಡಿಎಸ್ ಸಂಸದರನ್ನು ಕರ್ನಾಟಕ ಮೋದಿ ೩.೦ಗೆ ನೀಡಿದೆ. ಇವರಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳು. ಪ್ರಭಾವಿಗಳು. ಆರೇಳು ಸಾರೆ ಸತತ ಸಂಸದರಾಗಿ ದೆಹಲಿ ರಾಜಕಾರಣ ಅರಿತವರೂ ಇದ್ದಾರೆ. ಹಾಗಿದ್ದೂ ಕರ್ನಾಟಕ ಪ್ರಸ್ತುತ ಆಯವ್ಯಯದಲ್ಲಿ ನಿರ್ಲಕ್ಷಿತವೇಕೆ? ಬಜೆಟ್ ನಂತರದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ
ಕರ್ನಾಟಕಕ್ಕೆ ಚೊಂಬು, ಬಿಹಾರ ಆಂಧ್ರಕ್ಕೆ ಕೊಂಬು' ಎಂಬ ಪ್ರತಿಕ್ರಿಯೆ ತಕ್ಷಣ ಬಂತು. ಇಂತಹ ಪ್ರತಿಕ್ರಿಯೆ ಅಥವಾ ಜನತೆಯ ಅಸಮಾಧಾನಕ್ಕೆ ಅವಕಾಶ ಕೊಟ್ಟಿದ್ದು ಬಜೆಟ್.
ಸಹಜವಾಗಿ ಕರ್ನಾಟಕದ ಮಂತ್ರಿಗಳ, ಸಂಸದರ ಪ್ರಭಾವ, ತಾಕತ್ತು, ಧ್ವನಿಯ ಪ್ರಶ್ನೆ ಏಳುತ್ತದೆ. ಹಾಗಂತ ರಾಜ್ಯ ನಿರೀಕ್ಷಿಸಿದ್ದು ಮತ್ತು ರಾಜ್ಯದ ಸಂಸದರು ನಿರೀಕ್ಷಿಸಿದ್ದು ಒಂದಿಷ್ಟು ಯೋಜನೆಗಳಿಗೆ ಅವಕಾಶ ನೀಡಲಾಗುತ್ತದೆ ಎಂದೇ. ಹೋಗಲಿ ಚುನಾವಣೆ ವೇಳೆ ಬಹುವಾಗಿ ಎದ್ದಿದ್ದ, ಅಷ್ಟೇ ಬಿಜೆಪಿಗೆ ಇರಿಸು ಮುರಿಸು ತಂದ ಭದ್ರಾ ಮೇಲ್ದಂಡೆ ಯೋಜನೆ.
ಹಿಂದೆ ೫೩೦೦ ಕೋಟಿ ರೂಪಾಯಿ ಘೋಷಿಸಿ ನಂತರ ಬಿಡಿಗಾಸು ನೀಡದಿರುವುದು. ಇನ್ನೂ ಯೋಜನೆಗೆ ಅಂಗೀಕಾರವನ್ನೇ ಕೊಡದಿರುವುದನ್ನು ಈಗಿನ ಆಯವ್ಯಯದಲ್ಲಿ ಪ್ರಸ್ತಾಪಿಸಿ ಅನುಷ್ಠಾನಕ್ಕೆ ಹಸಿರು ನಿಶಾನೆಯ ಬದ್ಧತೆ ವ್ಯಕ್ತವಾದೀತೆಂಬ ನಿರೀಕ್ಷೆ ಇತ್ತು. ಅದೂ ಈಡೇರಲಿಲ್ಲ.
ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ, ಮಹದಾಯಿ-ಮೇಕೆದಾಟು, ಕೃಷ್ಣಾ ಮೇಲ್ದಂಡೆ, ಕರಾವಳಿ ವಲಯದ ಕಲ್ಯಾಣ, ಬೆಂಗಳೂರಿನ ಯೋಜನೆಗಳ ಕುರಿತು ಒಪ್ಪಿಗೆ ದೊರೆಯುವ ಆಶಯವಿತ್ತು.
ಹೋಗಲಿ ಸ್ವತಃ ಪ್ರಧಾನಿ ಅಡಿಗಲ್ಲನ್ನಿಟ್ಟ ಬೆಂಗಳೂರು ಮೆಟ್ರೋದ ಅಭಿವೃದ್ಧಿಗೆ-ವಿಸ್ತಾರಕ್ಕೆ ಖಂಡಿತ ಮಂಜೂರಾತಿ ದೊರೆಯುತ್ತದೆಂಬ ಭರವಸೆ ಎಲ್ಲರಲ್ಲಿ ಇತ್ತು. ಪ್ರಧಾನಿಯವರೇ ಅಡಿಗಲ್ಲನ್ನಿಟ್ಟು ಘೋಷಿಸಿದ ಮೇಲೆ ಹಣ ಕೊಡದೇ ಇರಲಾಗುತ್ತದೆಯೇ? ಕೊಟ್ಟೇ ಕೊಡುತ್ತಾರೆ ಎಂದು ಎಲ್ಲರೂ ನಂಬಿದ್ದರು. ಅದೂ ಇಲ್ಲ !!
ಕರ್ನಾಟಕದಲ್ಲಿ ಮುಚ್ಚುವ ಸ್ಥಿತಿಯಲ್ಲಿರುವ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳಿಗೆ ಪುನಶ್ಚೇತನ ದೊರೆಯಬಹುದು ಎನ್ನುವ ನಿರೀಕ್ಷೆ ಇತ್ತು. ಅದೂ ಇಲ್ಲ.
ಏಕೆ ಹೀಗೆ? ಕಳೆದ ಹತ್ತು ವರ್ಷಗಳಲ್ಲಿ ಕರ್ನಾಟಕ ಬಿಜೆಪಿ ಸಂಸದರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿಸಿದೆ. ಕಳೆದ ಸಾರೆಯಂತೂ ಇಪ್ಪತ್ತೈದು ಸಂಸದರನ್ನು ಮೋದಿಗೆ ಕೊಡುಗೆ ನೀಡಿದ ರಾಜ್ಯವಿದು. ಹಾಗಂತ ಆಗಲೂ ಕರ್ನಾಟಕ ನಿರ್ಲಕ್ಷಿತವಾಯಿತು. ಇಲ್ಲಿನ ಯೋಜನೆಗಳಿಗೆ ವೇಗ-ಮಂಜೂರಾತಿ ದೊರೆಯಲಿಲ್ಲ. ಮತ್ತಷ್ಟು ವಿವಾದಗಳು ಹುಟ್ಟಿಕೊಂಡವು. ರಾಜ್ಯದ ಸಂಸದರ ಬಗ್ಗೆ ಇನ್ನಿಲ್ಲದ ಟೀಕೆಗಳು, ಆರೋಪಗಳು ಬಂದವು. `ಧ್ವನಿ ಇಲ್ಲದ, ಜೀ ಹುಜೂರ್ ಸಂಸ್ಕೃತಿಯ, ಮೋದಿ ಎದುರು ನಿಲ್ಲಲಾಗದ ಮೂಕ ಸಂಸದರು' ಎಂಬ ಟೀಕೆಗಳು ಬಂದವು.
ಈ ಸಾರೆ ಎನ್‌ಡಿಎಗೆ ಹತ್ತೊಂಬತ್ತು, ಬಿಜೆಪಿಯಿಂದ ೧೭ ಸಂಸದರನ್ನು ರಾಜ್ಯ ಕೊಟ್ಟಿದೆ. ಪ್ರಭಾವಿಗಳು, ಪ್ರತಿಷ್ಠಿತರು, ರಾಜ್ಯದ ಬೆಳವಣಿಗೆಗೆ ಕೊಡುಗೆ ನೀಡಿ ಮುಖ್ಯಮಂತ್ರಿಗಳಾಗಿ ಕರ್ನಾಟಕವನ್ನು ಮುನ್ನಡೆಸಿದ ಮೂವರಿದ್ದಾರೆ. ಇಷ್ಟು ಪ್ರಬಲ ಸಂಸದೀಯ ಪಟುಗಳಿಗೆ ಧ್ವನಿ ಇಲ್ಲ ಎಂದು ಹೇಳಲಾದೀತೇ? ಅಥವಾ ಅವರ ಧ್ವನಿಯನ್ನು ನಿರ್ಲಕ್ಷಿಸಲಾಗುತ್ತದೆ ಎಂಬುದನ್ನು ಊಹೆ ಮಾಡಲಾದೀತೇ?
ಹಾಗಿದ್ದೂ ಕರ್ನಾಟಕ ಆಯವ್ಯಯದಲ್ಲಿ ಪ್ರಸ್ತಾಪವಾಗದಿರುವುದು ಏಕೋ? ಕಾಂಗ್ರೆಸ್ ಸರ್ಕಾರ ಒಂದೂವರೆ ವರ್ಷದ ಹಿಂದೆ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಕೇಂದ್ರ-ರಾಜ್ಯ ಸಂಘರ್ಷ, ಒಂದಿಲ್ಲೊಂದು ವಿವಾದಗಳು ಇದ್ದೇ ಇವೆ. ವಿಶೇಷವಾಗಿ ಕೇಂದ್ರದ ಮಲತಾಯಿ ಧೋರಣೆ ಬಗ್ಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಪ್ರಬಲವಾದ ಧ್ವನಿಯನ್ನೇ ಎತ್ತಿದೆ.
ರಾಜ್ಯಕ್ಕೆ ಬರಬೇಕಾದ ತೆರಿಗೆ ಅನುದಾನ, ಆಪತ್ ನಿಧಿ, ಎನ್‌ಡಿಆರ್‌ಎಫ್ ದುಡ್ಡು, ಬರ ಪರಿಹಾರ, ಹಣಕಾಸು ಆಯೋಗದ ಶಿಫಾರಸುಗಳ ಹೊರತಾಗಿಯೂ ರಾಜ್ಯಕ್ಕೆ ಬಿಡುಗಡೆಯಾಗದ ಹಣ ಇವೆಲ್ಲವುಗಳಿಗಾಗಿ ದೆಹಲಿ ಜಂತರ್ ಮಂತರ್‌ನಲ್ಲಿಯೇ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಆಡಳಿತ ಪಕ್ಷದ ಶಾಸಕರು, ಸಂಸದರು, ಸಚಿವರು, ವಿಧಾನ ಪರಿಷತ್ ಸದಸ್ಯರು ಪ್ರತಿಭಟನೆಯನ್ನೇ ನಡೆಸಿದರು.
ಇಷ್ಟಲ್ಲದೇ ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯ ಮೊಕದ್ದಮೆಯನ್ನೂ ಹೂಡಿತು. ಆ ನಂತರವೇ ಬರ ಪರಿಹಾರ ನಿಧಿಯ ಸ್ವಲ್ಪ ಮೊತ್ತ ರಾಜ್ಯಕ್ಕೆ ಬಂತು.
ಇವೆಲ್ಲವೂ ಚುನಾವಣೆ ವೇಳೆ ವಿಶೇಷವಾಗಿ ಪ್ರಸ್ತಾಪವಾಗಿದ್ದ ಅಂಶಗಳೇ. ಆಗಲೂ ಹಣಕಾಸು ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್ ಎಲ್ಲವುಗಳ ಕುರಿತು ಸ್ಪಷ್ಟನೆ ನೀಡುವಾಗ ಕೆಲವು ಸಂಗತಿಗಳನ್ನು ಮರೆಮಾಚಿದರೆ, ಕೆಲವನ್ನು ಉಪೇಕ್ಷಿಸಿ ಸಮಜಾಯಿಷಿ ನೀಡಲು ಹೋಗಿ ಎಡವಿದ್ದರು. ಅದು ಬಿಜೆಪಿ ಸಂಸದರಿಗೆ ಇರಿಸು ಮುರಿಸಾಗಿತ್ತು.
ಕೇಂದ್ರದಲ್ಲಿ ಪ್ರಭಾವ ಬೀರುವ ಬಿಜೆಪಿ ನಾಯಕರೇ ಇಲ್ಲವೇ ಎನ್ನುವ ಆರೋಪವನ್ನು ಮತ್ತೆ ಮತ್ತೆ ಇವೆಲ್ಲವೂ ಸಾಬೀತು ಪಡಿಸುವಂತಿವೆ. ಬಜೆಟ್ ಈಗ ಜೊತೆಗೂಡಿದೆ.
ಭದ್ರಾ ಮೇಲ್ದಂಡೆಯ ಯೋಜನೆ, ಬರ ಪರಿಹಾರ, ಅತಿವೃಷ್ಟಿ-ಅನಾವೃಷ್ಟಿ, ಇದರೊಟ್ಟಿಗೆ ಮೇಕೆದಾಟು, ಎತ್ತಿನ ಹೊಳೆ, ಮಹದಾಯಿ, ರೈಲು ಯೋಜನೆ ಇತ್ಯಾದಿಗಳು ಕೇಂದ್ರದಲ್ಲಿ ಒಂದಿಲ್ಲೊಂದು ಕಾರಣಕ್ಕೆ ಬಾಕಿ ಉಳಿದಿವೆ. ಆಡುವವರ ಬಾಯಿಗೆ ರಾಜ್ಯದ ಸಂಸದರು ಮತ್ತೆ ಸಿಕ್ಕಿಕೊಳ್ಳುವಂತಾಗಿದೆ. ರಾಜ್ಯದ ರೈಲ್ವೆ ಯೋಜನೆಗಳ ನಿರ್ವಹಣೆ ಮತ್ತು ಮುಂದುವರಿದ ಕಾಮಗಾರಿಗಳಿಗೆ ಆಯವ್ಯಯದಲ್ಲಿ ೭೫೦೦ ಕೋಟಿ ರೂ. ನೀಡಲಾಗಿದೆ ಎಂದು ಸಚಿವ ಸೋಮಣ್ಣ ಸಮಜಾಯಿಸಿ ನೀಡಿದ್ದಾರೆ… ಹೊಸ ಯೋಜನೆಗಳಿಲ್ಲದಿದ್ದರೂ ಒಂದಿಷ್ಟು ಸಮಾಧಾನ.
ಇಷ್ಟಕ್ಕೂ ಇದೇನು ಬಿಡಿ, ಪ್ರಥಮ ವರ್ಷದ, ಅದೂ ಆರು ತಿಂಗಳಿನ ಆಯವ್ಯಯ ಎಂಬ ಸಮಜಾಯಿಷಿ ಬರಬಹುದು. ಹಾಗಂತ ಮಂಗಳವಾರ ಮಂಡನೆಯಾದ ಬಜೆಟ್ ಜನಸಾಮಾನ್ಯರಿಗೆ, ವಿಶೇಷವಾಗಿ ಮಧ್ಯಮ ವರ್ಗದವರಿಗೆ, ಉದ್ಯೋಗಿಗಳಿಗೆ ಪೂರಕವಾಗಿಯೇ ಇದೆ. ರಿಯಾಯ್ತಿಗಳು ಹಾಗೂ ಘೋಷಣೆಗಳು ರಾಜ್ಯದ ಜನತೆಗೂ ಸಹಜವಾಗಿ ಬರುತ್ತವೆ.
ಆಡಳಿತಾತ್ಮಕ ನೀತಿ, ನಿರೂಪಣೆಗಳು, ಯೋಜನೆಗಳು ಉಳಿದ ರಾಜ್ಯಗಳಿಗೆ ಹೇಗೆ ಅನ್ವಯವಾಗುತ್ತವೋ ಹಾಗೇ ಇಲ್ಲಿಯ ಜನತೆಗೂ ಆಗುತ್ತವೆ.
ಆದರೆ ದೇಶದಲ್ಲಿಯೇ ಎರಡನೇ ಅತೀ ಹೆಚ್ಚು ತೆರಿಗೆ ನೀಡುವ ರಾಜ್ಯ ಕರ್ನಾಟಕದ ಕಡಗಣನೆ ಅಭಿವೃದ್ಧಿ ದೃಷ್ಟಿಯಿಂದ ಒಪ್ಪಿತವಾಗುವುದಿಲ್ಲ..
ಬಿಜೆಪಿ ಸಂಸದರಲ್ಲಿಯೂ ಕೂಡ ಒಮ್ಮತವಿಲ್ಲದಿರುವುದು ರಮೇಶ ಜಿಗಜಿಣಗಿ ಈಗಾಗಲೇ ಧ್ವನಿ ಎತ್ತಿರುವುದರಿಂದ ಸ್ಪಷ್ಟವಾಗುತ್ತಿದೆ. ಹಾಗೆಯೇ ರಾಜ್ಯ ಬಿಜೆಪಿಯಲ್ಲೂ ಕೇಂದ್ರದ ಮುಂದೆ ಫೈಟ್ ಮಾಡುವ ಹೋರಾಟಗಾರರು, ಹಠವಾದಿಗಳ ಕೊರತೆಯೂ ಈ ರೀತಿಯ ನಿರ್ಲಕ್ಷ್ಯಕ್ಕೆ ಕಾರಣ.
ಈ ಮೊದಲು ಪ್ರಚಂಡ ಬಹುಮತ ಹೊಂದಿದ್ದ ಬಿಜೆಪಿ ಸಹಜವಾಗಿ ಸಂಸದರನ್ನು ನಿರ್ಲಕ್ಷಿಸುತ್ತಿತ್ತು. ಈಗ ಹಾಗಿಲ್ಲ. ಪ್ರತಿ ಸಂಸದನ, ಅದರಲ್ಲೂ ತಮ್ಮದೇ ಪಕ್ಷದ ಸಂಸದನ ಧ್ವನಿಗೆ ಬೆಂಬಲ ಕೊಡಲೇಬೇಕಾಗಿದೆ. ಹಾಗಾಗಿ ಪ್ರಸ್ತುತ ಲೋಕಸಭೆಯ ರಾಜ್ಯ ಪ್ರತಿನಿಧಿಗಳು ಧ್ವನಿ ಎತ್ತಲು ಸಾಕಷ್ಟು ಅವಕಾಶಗಳಿವೆ. ಪ್ರಭಾವಿಗಳು, ಹಲವು ವಿಷಯಗಳಲ್ಲಿ ಪ್ರಾವಿಣ್ಯ ಹೊಂದಿದವರಿದ್ದಾರೆ. ಅವರ ಅನುಭವ ಸದ್ಬಳಕೆ ಆಗಬೇಕು.
ಅಂಕಿ ಸಂಖ್ಯೆ, ಬಲಾಬಲದ ರಾಜಕಾರಣದಲ್ಲಿ ಈಗ ಧ್ವನಿ ಇದ್ದವರಿಗೆ ಕಾಲ. ಕರುನಾಡಿಗಾಗಿ ಸಂಸದರು ಪಕ್ಷಾತೀತವಾಗಿ ಧ್ವನಿ ಎತ್ತಲು ಸದಾವಕಾಶವಿದೆ. ನಿಮ್ಮ ಧ್ವನಿ ಹತ್ತಿಕ್ಕುವ, ಅಡಗಿಸುವ, ಉದ್ದೇಶಪೂರ್ವಕವಾಗಿ ಕೇಳದಿರುವ ಕಾಲ ಇದಲ್ಲವಲ್ಲ?! ಹಾಗೇನಾದರೂ ನಿರ್ಲಕ್ಷಿಸಿದರೆ ನೀವೇ ಕಯ್ಯಾರೆ ಪ್ರತಿಪಕ್ಷದವರಿಗೆ ದೊಣ್ಣೆ ಕೊಟ್ಟು ಬಡಿಸಿಕೊಳ್ಳುವ ಅವಕಾಶ ನೀಡಿದಂತೆ!!