ರಾಯಚೂರು ವಿಮಾನ ನಿಲ್ದಾಣ: ಪ್ರಗತಿ ಮಾರ್ಗದಲ್ಲಿ ತ್ವರಿತ ಹೆಜ್ಜೆಗಳು
ರಾಯಚೂರು ವಿಮಾನ ನಿಲ್ದಾಣದ ಯೋಜನೆಗೆ ಸಂಬಂಧಿಸಿದಂತೆ ಸಚಿವ ಸಂಪುಟದ ಸದಸ್ಯ ಶರಣ ಪ್ರಕಾಶ ಪಾಟೀಲ್, ಎನ್.ಎಸ್ ಭೋಸರಾಜು ಹಾಗೂ ಸಂಬಂಧಿಸಿದ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ನಿನ್ನೆ ವಿಸ್ತೃತ ಚರ್ಚೆ ನಡೆಸಿದ್ದಾರೆ. ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ವಿಮಾನ ನಿಲ್ದಾಣಕ್ಕಾಗಿ 25 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಲು ₹20 ಕೋಟಿ ಮಂಜೂರು ಮಾಡಲಾಗಿದ್ದು, ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. 15 ದಿನಗಳೊಳಗಾಗಿ ಭೂ ಸ್ವಾಧೀನ ಪೂರ್ಣಗೊಳಿಸಿ ಕಾಮಗಾರಿಯನ್ನು ತಕ್ಷಣ ಪ್ರಾರಂಭಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಯಿತು ಎಂದಿದ್ದಾರೆ
ಕೇಂದ್ರ ಅನುಮತಿಗಳು ಮತ್ತು ಮುಂದಿನ ಕ್ರಮಗಳು: ಕೇಂದ್ರ ಸರ್ಕಾರ ಈಗಾಗಲೇ ಸೈಟ್ ಕ್ಲಿಯರೆನ್ಸ್ ನೀಡಿದ್ದು, ಲ್ಯಾಂಡ್ ಕ್ಲಿಯರೆನ್ಸ್ ಪಡೆದ ಸ್ಥಳಗಳಲ್ಲಿ ಕಾಂಪೌಂಡ್ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ಪ್ರಾರಂಭಿಸುವಂತೆ ಸೂಚಿಸಲಾಯಿತು. ಮಾರ್ಚ್ ಅಂತ್ಯದೊಳಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ಪಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಯಿತು.
ಗದ್ವಾಲ್ ರಸ್ತೆಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆ: ಕೈಗಾರಿಕೆಗಳ ಸ್ಥಾಪನೆಗಾಗಿ 685 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಲು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, ಶೀಘ್ರದಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲು ಕೆಐಎಡಿಬಿ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಬೃಹತ್ ಜವಳಿ ಪಾರ್ಕ್ ಸ್ಥಾಪನೆಗಾಗಿ 1,000 ಎಕರೆ ಭೂಮಿಯನ್ನು ಗುರುತಿಸಿ ಪ್ರಾಥಮಿಕ ಅಧಿಸೂಚನೆ ತಯಾರಿಸಲು ಸೂಚಿಸಿದೆ.
ಖಾಲಿ ನಿವೇಶನಗಳ ಸಮಸ್ಯೆ: ಕೆಐಎಡಿಬಿ ವ್ಯಾಪ್ತಿಯ ಖಾಲಿ ಇರುವ ನಿವೇಶನ ಮತ್ತು ಮನೆಗಳನ್ನು ವಿಲೇವಾರಿ ಮಾಡುವ ಬಗ್ಗೆ ಚರ್ಚೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಯಿತು ಎಂದು ತಿಳಿಸಿದ್ದಾರೆ