ರುದ್ರಾಕ್ಷಿ ಮಹಿಮೆ
ಭಾರತೀಯ ಸಂಸ್ಕೃತಿಯಲ್ಲಿ ರುದ್ರಾಕ್ಷಿಗೆ ವಿಶೇಷ ಸ್ಥಾನವಿದೆ. ವೀರಶೈವರಿಗೆ ರುದ್ರಾಕ್ಷಿಯೂ ಸುಂದರವಾದ ತೊಡುಗೆ ಎನಿಸಿದೆ ಅದು ಅಷ್ಟಾವರಣದಲ್ಲಿ ಒಂದಂಗವಾಗಿದೆ. ಗೋಮಯದಿಂದಾದ ಭಸ್ಮವೂ ಮಹತ್ವ ಸ್ಥಾನ ಹೊಂದಿದೆ. ವಸ್ತು ಭಸ್ಮವು ದಿವ್ಯೌಷಧಿವಾಗಿದೆ. ವೈಜ್ಞಾನಿಕ ಸತ್ಯತೆ ಭಸ್ಮದಲ್ಲಿದೆ. ಗೋವು ವಿಭಿನ್ನ ಜಾತಿಯ ಸಸ್ಯಗಳನ್ನು ತಿಂದು ತನ್ನ ಜಠರಾಗ್ನಿಯಲ್ಲಿ ಪಾಕಗೊಳಿಸಿ ಗೋಮಯದಲ್ಲಿ ಸಿದ್ಧಗೊಳಿಸುತ್ತದೆ. ಭಸ್ಮವೂ ಶೈತ್ಯಬಾಧೆಯನ್ನು ಕಳೆಯುತ್ತದೆ. ಹಿಮಾಲಯದಲ್ಲಿ ಅತ್ಯಂತ ತಂಪುಳ್ಳ ಪ್ರದೇಶ ಅಲ್ಲಿರುವ ಸಾಧು ಸಂತರು ಬರಿಮೈಯಿಂದ ವಾಸಿಸುತ್ತಾರೆ. ಅವರು ಮೈತುಂಬ ಭಸ್ಮವನ್ನು ಧರಿಸಿ ಶೀತಬಾಧೆಯಿಂದ ಮುಕ್ತರಾಗುತ್ತಾರೆ. ಅದರೊಂದಿಗೆ ನೇಪಾಳ ಭಾಗದಲ್ಲಿ ವಿಶೇಷವಾಗಿ ಬೆಳೆದ ರುದ್ರಾಕ್ಷಿಗಳು ಪೂಜ್ಯ ಸ್ಥಾನವನ್ನು ಹೊಂದಿವೆ.
ರುದ್ರಾಕ್ಷಿಯ ಧರಿಸುವವರಿಗೆ ಕ್ಷುದ್ರಬಾಧೆಗಳಿಲ್ಲ
ಭೂತ-ಪ್ರೇತ ಪಿಶಾಚಿ ಬಾಧೆಗಳು ಮತ್ತಿಲ್ಲವಯ್ಯ
ರುದ್ರನಕ್ಷಿಯಿಂ ಬಂದುದು ರುದ್ರಾಕ್ಷಿಯೆಂದರಿದು
ಭಕ್ತಯಿಂದ ಧರಿಸಬೇಕಯ್ಯಾ ಮೃಡಗಿರಿ ಅನ್ನದಾನೀಶ
ರುದ್ರಾಕ್ಷಿಧಾರಣೆಯಿಂದ ಭೂತ ಪ್ರೇತ ಪಿಶಾಚಾದಿಗಳ ಕಾಟ ಬರುವದಿಲ್ಲ. ಅದೊಂದು ಮಾನಸಿಕವಾಗಿ ದೈವ ಅತಿ ದೊಡ್ಡ ರಕ್ಷಣೆಯನ್ನು ನೀಡುತ್ತದೆ. ವಸ್ತುತಃ ರುದ್ರಾಕ್ಷಿಯು ರುದ್ರದೇವನ ನೇತ್ರದಿಂದ ಉದಿಸಿತೆಂಬ ಕಥಾನಕವಿದೆ. ಹಿಂದೆ ತಾರಕಾಸುರನೆಂಬ ಬಲಶಾಲಿ ರಾಕ್ಷಸನ ಕಬಂಧ ಬಾಹು ಜಗತ್ತಿಗೆ ಬಹುವಾಗಿ ಕಾಡಿತು. ದೇವ ಮಾನವರೆಲ್ಲ, ಶಿವನಲ್ಲಿ ಮೊರೆ ಹೋದರು. ಅತ್ಯಂತ ಕಳಕಳಿಯಿಂದ ಭಕ್ತಿಯಿಂದ ಪ್ರಾರ್ಥಿಸಿ ತಾರಕಾಸುರನಿಂದ ಉಂಟಾಗುವ ಉಪಟಳವನ್ನು ನೀಗಿಸು ಎಂದು ಬೇಡಿಕೊಂಡರು. ಶಿವನು ರುದ್ರರೂಪತಾಳಿ ತಾರಕಾಸುರನ ಮೂರು ಮಕ್ಕಳನ್ನು ಕೊಂದು ಹಾಕಿದನು. ಅವರು ಬ್ರಹ್ಮನಿಂದ ವರ ಪಡೆದಿದ್ದರಿಂದ ತಾರಕಾಕ್ಷ, ಮಕರಾಕ್ಷ, ಮತ್ತು ವದ್ಯುನ್ಮಾಲರೆಂಬಮೂರು ಪಟ್ಟಣಗಳನ್ನು ರಚಿಸಿ ಭಯಪಡಿಸುತ್ತಲೇ ಇದ್ದರು. ಅವು ಸಾಮಾನ್ಯ ಪಟ್ಟಣಗಳಾಗಿರಲಿಲ್ಲ. ಅವು ತಿರಗುವ ಪಟ್ಟಣಗಳಾಗಿದ್ದವು. ಮೂರು ಒಂದೇ ರೇಖೆಯಲ್ಲಿ ಬಂದಾಗ ಮಾತ್ರ ಅವರ ಅಂತ್ಯ ಎಂಬುದಾಗಿತ್ತು. ಅದಕ್ಕಾಗಿ ರುದ್ರದೇವನು ಏಕದೃಷ್ಟಿಯಿಂದ ನೋಡಿ ಸಂಹಾರ ಮಾಡಲು ಸನ್ನದ್ಧನಾದನು. ಆಗ ಆತನ ಕಣ್ಣಿನಿಂದ ಉದುರಿದ ಹನಿ ಅವೇ ರುದ್ರಾಕ್ಷಿ ಮರಗಳಾಗಿ ಬೆಳೆದವು ಎಂಬ ಪೌರಾಣಿಕ ಆಖ್ಯಾನವಿದೆ. ಏನೇ ಇರಲಿ; ರುದ್ರಾಕ್ಷಿಗಳಲ್ಲಿಯೂ ಔಷಧಿಯ ಗುಣವಿದೆ. ಭಸ್ಮವೂ ಶೀತ ಬಾಧೆಯನ್ನು ಕಳೆದರೆ ರುದ್ರಾಕ್ಷಿ ಧಾರಣೆಯಿಂದ ರಕ್ತದೊತ್ತಡ ಇಲ್ಲವಾಗುತ್ತದೆ. ಜ್ವರ ಬಂದು ಬಾಯಿ ವಿಷವೇರಿದಾಗ ರುದ್ರಾಕ್ಷಿಯನ್ನು ತೇದು ಅದರ ರಸವನ್ನು ನಾಲಿಗೆಗೆ ಹಚ್ಚಿದರೆ ಗುಣವಾಗುತ್ತದೆ. ಹೀಗೆ ಅನೇಕ ಬಹುಗುಣಗಳುಳ್ಳ ರುದ್ರಾಕ್ಷಿಗೆ ಔಷಧೀಯ ಅಲ್ಲದೇ ಅಧ್ಯಾತ್ಮಿಕ ಉನ್ನತಿಗೆ ಸಾಧನವಾಗುವ ಗುಣವಿದೆ.