ರೂಲ್ಸಿನ ಕುಂಟ್ನಾಗನ ಫಾಲ್ಸು
ರೂಲು ಅಂದರೆ ಎಲ್ಲರಿಗೂ ರೂಲೇ ಎಂದು ಅನ್ನುತ್ತಲೇ ಮೊದಲಿನಿಂದಲೂ ರೂಲ್ಸ್ ಪಾಲಿಸಿಕೊಂಡು ಬಂದಿದ್ದ ಕುಂಟ್ನಾಗಣ್ಣನನ್ನು ಎಲ್ಲರೂ ರೂಲ್ಸ್ನಾಗ ಎಂದು ಕರೆಯುತ್ತಿದ್ದರು. ಹೇಳಿದ್ದು ಪಾಲಿಸದೇ ಇದ್ದರೆ ಅದು ರೂಲಲ್ಲ ಎಂದು ನಂಬಿದ್ದ. ತನ್ನ ಶಾಲಾದಿನಗಳಲ್ಲಿ ಈಜಲು ಹೋದಾಗ ಗೆಳೆಯನೊಬ್ಬನಿಗೆ ನನಗೆ ಈಜು ಕಲಿಸಿದರೆ ನಿನಗೆ ಚಹ ಕೊಡಿಸುತ್ತೇನೆ ಎಂದು ಹೇಳಿದ್ದನಂತೆ. ಆತ ಈಜು ಕಲಿಸಿದ್ದ. ನಂತರದಲ್ಲಿ ಕುಂಟ್ನಾಗ ಅದನ್ನು ಮರೆತಿದ್ದ ಗೆಳೆಯನೂ ಮರೆತಿದ್ದ ಕಾಲೇಜು ಕಲಿತು ಎಲ್ಲೋ ನೌಕರಿ ಮಾಡುತ್ತಿದ್ದ ಗೆಳೆಯ ಎಷ್ಟೋ ವರ್ಷಗಳ ನಂತರ ಊರಿಗೆ ಬಂದಿದ್ದ. ಕುಂಟ್ನಾಗ ಆತನನ್ನು ಆದರದಿಂದ ಬರಮಾಡಿಕೊಂಡ. ಗೆಳೆಯರೆಲ್ಲರೂ ಸೇರಿ ಆತನಿಗೆ ವಿಶೇಷ ಅಡುಗೆ ಮಾಡಿಸಿ ಊಟ ಮಾಡಿಸಿದರು. ಈ ಮಧ್ಯೆ ಹಳೆಯದನ್ನು ನೆನಪಿಸಿಕೊಂಡ ಕುಂಟ್ನಾಗ ಆತನಿಗೆ ಚಹ ಕುಡಿಸಬೇಕು ಎಂದು ಹವಣಿಸಿದ. ಅವಕಾಶ ಸಿಗಲಿಲ್ಲ. ಸಂಜೆಯಾದ ಕೂಡಲೇ ಒತ್ತಾಯ ಮಾಡಿ ಆತನನ್ನು ಹೋಟೆಲ್ಗೆ ಕರೆದುಕೊಂಡು ಹೋಗಿ ಚಹ ಕುಡಿಸಿ… ಎಷ್ಟೋ ವರ್ಷಗಳ ಹಿಂದೆ ನೀನು ನನಗೆ ಈಜು ಕಲಿಸಿದೆ. ಆಗ ನಾನು ಚಹ ಕುಡಿಸುತ್ತೇನೆ ಎಂದು ಹೇಳಿದ್ದೆ. ಕಾಲಘಟ್ಟದಲ್ಲಿ ಮರೆತುಬಿಟ್ಟಿದ್ದೆ. ಈಗ ನೆನಪಾಯಿತು. ಚಹ ಕುಡಿಸಿದೆ. ಇದು ರೂಲು ಅಂದ. ಇದೆಂತಹ ರೂಲು ಎಂದು ಗೆಳೆಯನೂ ನಕ್ಕು ಸುಮ್ಮನಾದ. ಅವತ್ತು ಕರಿಭೀಮವ್ವನ ಎಮ್ಮೆ ಹೆಚ್ಚು ಹಾಲು ಕೊಡುವಂತೆ ಮಾಡಲು ಪಕ್ಕದ ಊರಿನಿಂದ ದನದ ಡಾಕ್ಟರ್ನನ್ನು ಕರೆದುಕೊಂಡು ಬಂದು ಔಷಧ ಕೊಡಿಸುತ್ತೇನೆ ಎಂದು ಹೇಳಿದ್ದ. ಅದೆಷ್ಟು ದಿನಗಳಾದರೂ ಅದನ್ನು ಪಾಲಿಸಿಯೇ ಇರಲಿಲ್ಲ. ಎಂಟು ತಿಂಗಳಾದ ಮೇಲೆ ಯಾವುದೋ ವೈದ್ಯನನ್ನು ಊರಿಗೆ ಕರೆದುಕೊಂಡು ಬಂದು ಆಕೆಯ ಎಮ್ಮೆಗೆ ಔಷಧ ಕೊಡಿಸಿದ. ಇವನ ರೂಲಿನ ಸಲುವಾಗಿ ಬಹಳಷ್ಟು ಜನ ಬೇಸತ್ತಿದ್ದರು. ಕುಂಟ್ನಾಗನಿಗೆ ರೂಲ್ಸ್ ಅನ್ನುವುದನ್ನು ಬಿಡಿಸಬೇಕು ಎಂದು ಹಲವು ಕೆಟ್ಟಹುಳುವಿನ ಸುಳಿ ಇದ್ದ ಗೆಳೆಯರು ಒಂದು ದಿನ ರಾತ್ರಿ ಕುಂಟ್ನಾಗನನ್ನು ಸಂಧಿಸಿ… ನಾಗಣ್ಣ ರೂಲು ಅಂದರೆ ಎಲ್ಲರಿಗೂ ಒಂದೇ ತಾನೆ ಎಂದು ಕೇಳಿದರು. ಅದಕ್ಕೆ ಆತ ಹೌದೌದು ಎಲ್ಲರಿಗೂ ಒಂದೇ ನನಗೂ ಒಂದೇ ನಿನಗೂ ಒಂದೇ ಎಂದು ಹೆಮ್ಮೆಯಿಂದ ಹೇಳಿದ. ಅದಕ್ಕೆ ಆ ಗೆಳೆಯರು… ನಿನಗೆ ನೆನಪು ಇದೆಯಾ? ಆವಾಗ ನಾನು ತಪ್ಪು ಮಾಡಿದ್ದಕ್ಕೆ ರೂಲಿನ ಲೆಕ್ಕ ಹೇಳಿ ಐದು ಒದೆ ಕೊಟ್ಟು, ನಾನು ತಪ್ಪು ಮಾಡಿದರೆ ನನಗೂ ಒದೆ ಕೊಡಿ ಅಂದಿದ್ದೆ. ನೀನು ಈಗ ಕರಿಭೀಮವ್ವನ ಎಮ್ಮೆಗೆ ಔಷಧ ಕೊಡಿಸಲು ಕರೆದುಕೊಂಡು ಬಂದಿದ್ದಿಯಲ್ಲ ಆತ ದನದ ಡಾಕ್ಟರ್ ಅಲ್ಲ. ಈಗ ಆಕೆಯ ಎಮ್ಮೆ ಮೊದಲಿಗಿಂತ ಕಡಿಮೆ ಹಾಲು ಕೊಡುತ್ತಿದೆ. ನಿಂದು ತಪ್ಪಲ್ಲವೇ ಎಂದು ಕೇಳಿದಾಗ ನಾಗ ಹೂಂ ಅಂದ. ಆ ಗೆಳೆಯರಲ್ಲ ನಾಗನಿಗೆ ಭರ್ಜರಿ ಒದೆ ಕೊಟ್ಟರು ಅಂದಿನಿಂದ ನಾಗ ರೂಲ್ಸ್ ಅನ್ನುವುದನ್ನು ಬಿಟ್ಟ.