ರೇಸ್‌ನಲ್ಲಿ ಯಾರೂ ಇಲ್ಲವೇ ಇಲ್ಲ.. ಸಿದ್ದರಾಮಯ್ಯನವರೇ ಸಿಎಂ
ಬೆಳಗಾವಿ: ರೇಸ್‌ನಲ್ಲಿ ಯಾರೂ ಇಲ್ಲವೇ ಇಲ್ಲ. ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿಯವರಿಗೆ ಸ್ಥಿರ ಸರಕಾರವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಬಿಜೆಪಿಯವರದ್ದು ಸರಕಾರ ಅಸ್ಥಿರ ಮಾಡುವುದು, ಸರಕಾರ ಬೀಳಿಸುವುದು, ಸರಕಾರ ಒಡೆಯುವುದು, ಆಪರೇಷನ್ ಮಾಡುವುದು ಕೇಂದ್ರ ಸರಕಾರದವರಿಗೆ ಇದೇ ಕೆಲಸ ಆಗಿದೆ. ಕರ್ನಾಟಕದ ಅಭಿವೃದ್ಧಿ ಕೆಲಸವನ್ನು ಬಿಜೆಪಿ ಮುಖಂಡರು ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾಳೆ ಸಿಎಂ ಭವಿಷ್ಯ ನಿರ್ಧಾರ ಆಗುತ್ತದೆಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ನಾಳೆ ಏನು ಆಗುವುದಿಲ್ಲ, ಸಿಎಂ ಅವರ ಭವಿಷ್ಯ ನಿರ್ಧಾರದ ಪ್ರಶ್ನೆಯಿಲ್ಲ. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಇರುತ್ತಾರೆ. ಸಿಎಂ ರೇಸ್‌ನಲ್ಲಿ ಯಾರು ಇಲ್ಲಾ ಎಂದರು. ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಭ್ರಷ್ಟ ಸಿಎಂ, ಭ್ರಷ್ಟ ಸಿಎಂ ಆಕಾಂಕ್ಷಿಗಳು ಪೋಸ್ಟ್ ವಿಚಾರಕ್ಕೆ ಉತ್ತರಿಸಿದ ಅವರು, ಅವರ ಸೋಷಿಯಲ್ ಮೀಡಿಯಾದಲ್ಲಿ ಏನೇನೂ ಹಾಕ್ತಿರತ್ತಾರೆ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ದೇಶದಲ್ಲಿ ನಂಬರ್ ಒನ್ ಅಲ್ವಾ, ಸುಳ್ಳು ಸುದ್ದಿ, ಪ್ರಚೋದನೆ ಮಾಡುವುದರಲ್ಲಿ ಬಿಜೆಪಿಯವರು ದೇಶದಲ್ಲಿ ನಂಬರ್ ಒನ್ ಎಂದರು.