ರೌಡಿಶೀಟರ್ ಮೇಲೆ ಪೊಲೀಸರ ಗುಂಡು
ಶಿವಮೊಗ್ಗ: ನಗರಕ್ಕೆ ಸಮೀಪದ ಮಲ್ಲಿಗೇನಹಳ್ಳಿ ರುದ್ರಭೂಮಿ ಬಳಿ ಸೋಮವಾರ ರೌಡಿಶೀಟರ್ ಪರ್ವೇಜ್ ಆಲಿಯಾಸ್ ರ‍್ರು ಕಾಲಿಗೆ ಪೊಲೀಸರು ಗುಂಡೇಟು ಹೊಡೆದಿದ್ದಾರೆ.
ಪ್ರಕರಣವೊಂದರಲ್ಲಿ ಆರೋಪಿ ಪರ್ವೇಜ್ ಬಂಧನಕ್ಕೆ ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ತೆರಳಿದ್ದರು. ಈ ವೇಳೆ ಪರ್ವೇಜ್ ಡ್ರ‍್ಯಾಗರ್‌ನಿಂದ ಪೊಲೀಸ್ ಸಿಬ್ಬಂದಿ ನಾಗಪ್ಪ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಶರಣಾಗುವಂತೆ ಈ ರೌಡಿಶೀಟರ್‌ಗೆ ಗ್ರಾಮಾಂತರ ಠಾಣಾ ಇನ್ಸ್‌ಪೆಕ್ಟರ್
ಸತ್ಯನಾರಾಯಣ ಎಚ್ಚರಿಕೆ ನೀಡಿದರೂ ಆತ ಮಾರಣಾಂತಿಕ ಹಲ್ಲೆಗೆ ಮುಂದಾದ ಹಿನ್ನೆಲೆಯಲ್ಲಿ ಪರ್ವೇಜ್ ಕಾಲಿಗೆ ೨ ಸುತ್ತು ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಯಗೊಂಡ ಫರ್ವೇಜ್‌ನನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿ ನಾಗಪ್ಪ ಅವರು ಕೂಡ ಚಿಕಿತ್ಸೆ ಪಡೆದಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್‌ಕುಮಾರ್, ಇವತ್ತು ಮಲ್ಲಿಗೇನಹಳ್ಳಿ ಹೊರವಲಯದಲ್ಲಿ ಈತ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಅಲ್ಲಿಗೆ ನಮ್ಮ ಟೀಂ ತೆರಳಿದೆ. ಅಲ್ಲಿ ಮಲಗಿದ್ದ ಪರ್ವೇಜ್‌ನನ್ನು ಹಿಡಿಯುವಾಗ ಆತ ಎಸ್ಕೇಪ್ ಆಗಲು ಮುಂದಾದ. ಅಲ್ಲದೆ ನಮ್ಮ ಸಿಬ್ಬಂದಿ ನಾಗಪ್ಪರವರ ಮೇಲೆ ಡ್ರಾಗರ್‌ನಿಂದ ಅಟ್ಯಾಕ್ ಮಾಡಲು ಮುಂದಾಗಿದ್ದಾನೆ. ಈ ವೇಳೆ ಪೊಲೀಸ್ ಅಧಿಕಾರಿ ಎರಡು ಬಾರಿ ಕಾಲಿಗೆ ಫೈರ್ ಮಾಡಿದ್ದಾರೆ ಎಂದರು.
ಆರೋಪಿ ಪರ್ವೆಜ್ ವಿರುದ್ಧ ೩೦೭, ೩೦೨, ೩೯೩ ಸೇರಿದಂತೆ ಆರು ಪ್ರಕರಣಗಳಿವೆ. ಆತನ ವಿರುದ್ಧ ಗಾಂಜಾ ಕೇಸ್ ಕೂಡ ದಾಖಲಾಗಿತ್ತು. ಆರು ದಿನಗಳ ಹಿಂದೆ ತುಂಗಾನಗರ ಪೊಲೀಸ್ ಸ್ಟೇಷನ್‌ನಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣ ಸಂಬಂಧ ಅಧಿಕಾರಿಗಳ ತಂಡ ಮಲ್ಲಿಗೇನಹಳ್ಳಿ ಬಳಿ ಆತನಿಗಾಗಿ ಹುಡುಕಾಟ ನಡೆಸಿತ್ತು ಎಂದರು.