ಲಂಡನ್ ಪ್ರಾಧ್ಯಾಪಕಿಗೆ ಬೆಂಗಳೂರು ಪ್ರವೇಶಕ್ಕೆ ನಕಾರ
ಬೆಂಗಳೂರು: ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಮೌಲ್ಯಗಳ ಕುರಿತು ಶನಿವಾರ ಮತ್ತು ಭಾನುವಾರ ಕರ್ನಾಟಕ ಸರಕಾರವು ಹಮ್ಮಿಕೊಂಡಿದ್ದ ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತೆ ಸಮ್ಮೇಳನಕ್ಕೆ ಲಂಡನ್‌ನ ವೆಸ್ಟ್ಮಿನಿಸ್ಟರ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಪ್ರಾಧ್ಯಾಪಕಿ ಹಾಗೂ ಲೇಖಕಿ ನಿತಾಶಾ ಕೌಲ್ ಅವರನ್ನು ಬೆಂಗಳೂರು ವಿಮಾನ ನಿಲ್ದಾಣದಿಂದ ವಾಪಸ್ ಕಳುಹಿಸಲಾಗಿದೆ.
ಪ್ರಜಾಪ್ರಭುತ್ವ ಹಾಗೂ ಸಾಂವಿಧಾನಿಕ ಮೌಲ್ಯಗಳ ಕುರಿತು ಮಾತನಾಡಿದ್ದಕ್ಕೆ ನನಗೆ ಭಾರತಕ್ಕೆ ಪ್ರವೇಶವನ್ನು ನಿರಾಕರಿಸಲಾಗಿದ್ದು, ಬೆಂಗಳೂರು ವಿಮಾನ ನಿಲ್ದಾಣದಿಂದ ನನ್ನನ್ನು ವಾಪಸ್ ಕಳುಹಿಸಲಾಯಿತು ಎಂದು ಭಾರತೀಯ ಮೂಲದ, ಲಂಡನ್‌ನ ವೆಸ್ಟ್ಮಿನಿಸ್ಟರ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಪ್ರಾಧ್ಯಾಪಕಿ ಹಾಗೂ ಲೇಖಕಿ ಆಗಿರುವ ನಿತಾಶಾ ಕೌಲ್ ಗಂಭೀರವಾಗಿ ಆರೋಪಿಸಿದ್ದಾರೆ.
ನಿತಾಶಾ ಕೌಲ್ ಅವರನ್ನು ಫೆಬ್ರವರಿ ೨೪ ಮತ್ತು ೨೫ ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ `ಸಂವಿಧಾನ ಮತ್ತು ರಾಷ್ಟ್ರೀಯ ಏಕತಾ ಸಮಾವೇಶ'ದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಲು ಕಾಂಗ್ರೆಸ್ ಸರ್ಕಾರ ಆಹ್ವಾನಿಸಿತ್ತು. ಈ ಬಗ್ಗೆ ಕೌಲ್ ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್ ಸಿ ಮಹದೇವಪ್ಪ ಅವರು ಕಳುಹಿಸಿದ ಆಹ್ವಾನದ ಪ್ರತಿ ಮತ್ತು ನೋಂದಣಿ ವಿವರಗಳನ್ನು ಎಕ್ಸ್ ಮೂಲಕ ಹಂಚಿಕೊಂಡಿದ್ದಾರೆ.