ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಲಕ್ಸ್ಮವ್ವಾ…. ಏಯ್ ಲಕ್ಸ್ಮವ್ವಾ…

03:30 AM Jul 29, 2024 IST | Samyukta Karnataka

ಕ್ವಾಟಿಗ್ವಾಡಿ ಸುಂದ್ರವ್ವ.. ಕಂಬಾರಂಬ್ರವ್ವ.. ತೊಗರಿ ತಿಪ್ಪವ್ವ… ವಾಳದ ಫಕೀರವ್ವ ಸೇರಿದಂತೆ ಪ್ರತಿ ಓಣಿಯ ಲೀಡರ್ ಹೆಣ್ಣುಮಕ್ಕಳು ಸಭೆ ಸೇರಿ ಭರ್ಜರಿ ಮೀಟಿಂಗ್ ನಡೆಸುತ್ತಿದ್ದಾರೆ. ಆವಾಗ ಗೃಹಲಕ್ಷ್ಮಿ ರೊಕ್ಕ ಬಂದೇ ಬರುತ್ತಿದ್ದ ಸಂದರ್ಭದಲ್ಲಿ ಊರಿನ ಎಲ್ಲ ಅಂಗಡಿಗಳಲ್ಲಿ ಉದ್ರಿ ತಂದಿದ್ದರು. ಮುದಿಗೋವಿಂದಪ್ಪ ಮೊದಲು ಉದ್ರಿ ಕೊಡಲು ತಕರಾರು ಮಾಡಿದ್ದ. ಯಾವಾಗ ಗೃಹಲಕ್ಷ್ಮಿ ರೆಗ್ಯುಲರ್ ಆದಳೋ ಆವಾಗಿನಿಂದ ಯಾವುದೇ ತಕರಾರು ಮಾಡದೇ ಕರಕರೆದು ಉದ್ರಿ ಕೊಡತೊಡಗಿದ. ಒಂದು ಕೆಜಿ ಕೇಳಿದರೆ ಎರಡು ಕೆಜಿ ಹಾಕುತ್ತಿದ್ದ. ಇಷ್ಟಕ್ಕೊಂದು ಬೇಡ ಅಂದರೆ… ಅಯ್ಯೋ ಹಂಗನಬೇಡಿ. ಮದ್ರಾಮಣ್ಣ.. ಲಕ್ಸಮ್ಮವ್ವ ಕೊಡ್ತಾರೆ ನೀವು ತಗೊಳ್ಳಿ ಮುಂದೆ ಕೊಡ್ತಾವೋ ಇಲ್ವೋ. ಇದ್ದಾಗ ಎಂಜಾಯ್ ಮಾಡಬೇಕು ಎಂದು ತನ್ನ ಸಿದ್ಧಾಂತವನ್ನು ಮುಂದಿಡುತ್ತಿದ್ದ. ಹೌದಲ್ಲ ಅನಿಸಿ ಈ ಎಲ್ಲ ಲೇಡಿಸ್ ಹೆಚ್ಚೆಚ್ಚು ಉದ್ರಿ ತರತೊಡಗಿದರು. ಎಂದೂ ಇಸ್ತ್ರಿ ಸೀರೆ ಉಟ್ಟುಕೊಳ್ಳದ ಇವರೆಲ್ಲ ತಮ್ಮ ಸೀರೆಗಳನ್ನು ಇಸ್ತ್ರಿ ಮಾಡಿಸತೊಡಗಿದರು. ಆ ಅಂಗಡಿಯಲ್ಲೂ ಉದ್ರಿ ಬುಕ್ ಇಟ್ಟಿದ್ದರು. ಮನೆಯಲ್ಲಿ ನೆಂಟರು ಬಂದರೆ ಸಾಕು. ಮನೆಯಲ್ಲೇಕೆ ಮಾಡುವುದು ಎಂದು ಶೇಷಮ್ಮನ ಹೋಟೆಲ್‌ನಲ್ಲಿ ಉದ್ರಿ ತರಿಸತೊಡಗಿದರು. ಪಾನ್ ಅಂಗಡಿಯಲ್ಲೂ ಉದ್ರಿ..ಎಲ್ಲಿ ನೋಡಿದಲ್ಲಿ ಉದ್ರಿ ಹಚ್ಚತೊಡಗಿದರು. ಪ್ರತಿ ತಿಂಗಳು ಗೃಹಲಕ್ಷ್ಮಿ ಹಣದಿಂದ ಉದ್ರಿ ತೀರಿಸಿ ಹೊಸ ಉದ್ರಿ ಮಾಡತೊಡಗಿದರು. ಈಗ ಎರಡು ತಿಂಗಳಿನಿಂದ ಹಣ ಬರಲಿಲ್ಲ ಈ ಸುದ್ದಿ ಗೊತ್ತಾಗಿ ಉದ್ರಿ ಕೊಟ್ಟ ಎಲ್ಲರೂ ಈ ಎಲ್ಲರ ಮನೆಗೆ ಹೋಗಿ ಕಾಟ ಕೊಡತೊಡಗಿದರು. ಅವರ ಗಂಡಂದಿರು…. ನೋಡ್ರಪ ನೀವು ನಮಗೆ ಹೇಳಿ ಉದ್ರಿ ಕೊಟ್ಟಿಲ್ಲ.. ಅವರನ್ನೇ ಕೇಳಿ ಎಂದು ಜಾರಿಕೊಂಡರು. ಅಂಗಡಿಕಾರರು ಕಾಯಂ ಆಗಿ ಆಳುಗಳನ್ನು ಮನೆಮನೆಗೆ ಕಳಿಸತೊಡಗಿದರು. ಅದಕ್ಕೆ ಈ ಮೀಟಿಂಗ್ ಮಾಡಿ… ಯಾರಿಗೂ ಗೊತ್ತಾಗದಂತೆ ರಾತ್ರಿ ಬಸ್ಸು ಹತ್ತಿ ಬೆಂಗಳೂರಿಗೆ ಬಂದು ಮದ್ರಾಮಣ್ಣನ ಮನೆ ಮುಂದೆ ಕುಳಿತರು. ಎರಡು ದಿನ ಆದಮೇಲೆ ಮದ್ರಾಮಣ್ಣ ಸೆಲ್ಯ ಹೊದ್ದುಕೊಂಡು ಹೊರಬಂದ ಕೂಡಲೇ ಎಲ್ಲರೂ ಅವರತ್ತ ಹೋಗಿ.. ಎಂಥಾ ಆಸೆ ತೋರಿಸಿಬಿಟ್ಟೆ ಮದ್ರಾಮಣ್ಣ… ನಿನ್ನ ಗೃಹಲಕ್ಷ್ಮಿ ನಂಬಿ ಎಲ್ಲಿ ಬೇಕಲ್ಲಿ ಉದ್ರಿ ಮಾಡಿದ್ದೇವೆ. ಅವರು ಅಂತರಪಿಸಾಚಿಯಂತೆ ಗಂಟು ಬಿದ್ದಿದ್ದಾರೆ… ಈಗ ನೀವು ಊರಿಗೆ ಬಂದು ನಾವು ಕೊಡ್ತೀವಿ ಅಂತ ಹವಾಲ್ತಿ ಹಾಕಿಕೊಂಡು ಹೋಗಿ ಎಂದು ತಾವು ಮಾಡಿದ ಉದ್ರಿಲಿಸ್ಟ್ ಅವರ ಕೈಗೆ ನೀಡಿದರು. ಗಾಬರಿಯಾದ ಮದ್ರಾಮಣ್ಣೋರು… ಲಕ್ಸ್ಮವ್ವಾ.. ಏಯ್ ಸಕ್ಸ್ಮವ್ವ ಬಗಿಹರಿಸವ್ವಾ ಅಂತ ಕೂಗುತ್ತ ಕಾರು ಹತ್ತಿ ಹೋದರು. ಇವರೆಲ್ಲ ಓ… ಆ ಮಂತ್ರಿಗೇ ಹೇಳುತ್ತಿದ್ದಾರೆ. ನಮ್ಮ ಸಮಸ್ಯೆ ಬಗೆಹರಿಯುತ್ತದೆ ಎಂದು ಅಂದುಕೊಂಡರು.

Next Article