For the best experience, open
https://m.samyuktakarnataka.in
on your mobile browser.

ಲಡ್ಡು ಬೇಕಾ ಲಡ್ಡೂ….

03:00 AM Sep 21, 2024 IST | Samyukta Karnataka
ಲಡ್ಡು ಬೇಕಾ ಲಡ್ಡೂ…

ಭಯಂಕರ ರುಚಿಯ ಲಡ್ಡೂ… ತಿಂದಷ್ಟೂ ತಿನ್ನಬೇಕೆನ್ನುವ ಲಡ್ಡೂ… ಹಿಂದೆಂದೂ ತಿಂದಿರದ ಲಡ್ಡೂ ಮುಂದೆಂದೂ ತಿನ್ನಲಾರದೂ ಲಡ್ಡೂ… ಲಡ್ಡೂ ಬೇಕಾ ಲಡ್ಡೂ… ಲಡ್ಡು ಬೇಕಾ ಲಡ್ಡೂ… ಎಂದು ಕುಂಟ್ತಿರುಪ್ತಿ ಎಲ್ಲೆಡೆ ಅಡ್ಡಾಡಿದರೂ ಎಲ್ಲರೂ ನನಗೆ ಬೇಡ… ನಿನಗೆ ಬೇಡ ಅನ್ನುತ್ತಿದ್ದರು. ಈ ಮುಂಚೆ ಗಂಟು ಬಿದ್ದು ಲಡ್ಡು ತೆಗೆದುಕೊಳ್ಳುತ್ತಿದ್ದವರು ಈಗ ಯಾಕೆ ಬೇಡ ಅನ್ನುತ್ತಿದ್ದಾರೆ? ಎಂದು ಚಿಂತಾಕ್ರಾಂತನಾಗಿ ಇನ್ನು ಈ ಬ್ಯುಸಿನೆಸ್ಸೇ ಬೇಡ ಎಂದು ಮಧ್ಯಸ್ಥಿಕೆ ಪಾರ್ಸಲ್ ಕೇಂದ್ರ ಆರಂಭಿಸಿದ. ಯಾರಾದರೂ ಅಂಗಡಿಯಲ್ಲಿ ಏನಾದರೂ ತರಿಸಬೇಕು ಅಂದರೆ ಅವರು ಕುಂಟ್ತಿರುಪ್ತಿಗೆ ಕಾಲ್ ಮಾಡಿದರೆ ಸಾಕು ಆತ ಅಲ್ಲಿಂದ ಅವರಿಗೆ ತರಿಸಿಕೊಡುವ ಕೆಲಸ ಮಾಡುತ್ತಿದ್ದ. ಮೊದ ಮೊದಲು ಯಾರೂ ಪಾರ್ಸಲ್ ಬೇಕು ಅಂತಿರಲಿಲ್ಲ. ದಿನಗಳಂತೆ ಜನರು ನನಗೆ ಪಾರ್ಸಲ್ ಬೇಕು… ನಿನಗೆ ಪಾರ್ಸಲ್ ಬೇಕು ಎಂದು ಕರೆ ಮಾಡತೊಡಗಿದರು. ಆದರೆ ಈ ಮುಂಚೆ ಅಡ್ವಾನ್ಸ್ ಮಾಡಿಟ್ಟ ಲಡ್ಡುಗಳು ರಾಶಿಗಟ್ಟಲೇ ಹಾಗೆ ಬಿದ್ದಿದ್ದವು. ಇವುಗಳನ್ನು ಮಾಡುವುದಕ್ಕೆ ಸಿಕ್ಕಾಪಟ್ಟೆ ಬಂಡವಾಳ ಹಾಕಿದೆ. ಮಾರಾಟವಾಗದಿದ್ದರೆ ಎಲ್ಲಾ ಲಾಸ್ ಎಂದು ಮರುಗಿದ. ಪ್ಲಾನ್ ಮಾಡುವುದರಲ್ಲಿ ಬಹಳ ನಿಸ್ಸೀಮನಾಗಿದ್ದ ಆತ ಭಾರೀ ಪ್ಲಾನ್ ಮಾಡಿದ. ದಿನವೊಂದಕ್ಕೆ ಇಪ್ಪತ್ತು ಪಾರ್ಸಲ್‌ಗೆ ಆರ್ಡರ್ ಬಂದರೆ ಅವುಗಳಲ್ಲಿ ಒಂದು ಅಥವಾ ಎರಡು ಬಾಕ್ಸ್‌ಗಳಲ್ಲಿ ಸೇಲ್ ಆಗದೇ ಉಳಿದಿದ್ದ ಲಡ್ಡುಗಳನ್ನು ಹಾಕಿ ಕಳುಹಿಸುತ್ತಿದ್ದ. ಪಾರ್ಸಲ್ ಆರ್ಡರ್ ಸಂಖ್ಯೆ ಹೆಚ್ಚಾದಂತೆ ಲಡ್ಡುಗಳ ಬಾಕ್ಸ್ ಸಂಖ್ಯೆಯೂ ಹೆಚ್ಚಾಯಿತು. ಒಂದಿಬ್ಬರು ಏನ್ರೀ ನೀವು ನಾವು ಏನು ಕೇಳಿದ್ದು ನೀವು ಏನು ಕಳಿಸಿದ್ದು ಎಂದು ಜೋರು ಮಾಡಿದ ಮೇಲೆ ಕ್ಷಮಿಸಿ… ಎಂದು ಲಡ್ಡು ತೆಗೆದಿಟ್ಟುಕೊಂಡು ಅವರ ವಸ್ತುಗಳನ್ನು ಪಾರ್ಸಲ್ ಮಾಡುತ್ತಿದ್ದ. ಉಳಿದವರಿಗೆ ಲಡ್ಡಿನ ರುಚಿ ಹತ್ತಿತ್ತು. ಅವರು ಮತ್ತೆ ಆರ್ಡರ್ ಮಾಡಿದರೆ ಲಡ್ಡು ಕಳಿಸುತ್ತಿದ್ದ. ಅವರೂ ಸುಮ್ಮನಿರುತ್ತಿದ್ದರು. ಇದು ಹೀಗೆಯೇ ಮುಂದುವರೆಯಿತು. ಮಾಡಿಟ್ಟ ಲಡ್ಡು ಮುಗಿದಾಗ ಮತ್ತೆ ಲಡ್ಡು ತಯಾರು ಮಾಡುತ್ತಿದ್ದ. ಕೊನೆಗೆ ಅದ್ಯಾರೋ ತಲೆಕೆಟ್ಟವರು ಪೊಲೀಸರಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳಲ್ಲಿ ದೂರು ನೀಡಿದರು ಅವರು ಬಂದು ಕುಂಟ್ತಿರುಪ್ತಿಯನ್ನು ಹೆಡೆಮುರಿ ಕಟ್ಟಿ ಆತನ ಪಾರ್ಸಲ್ ಕೇಂದ್ರಕ್ಕೆ ಬೀಗ ಜಡಿದರು.