ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಲಿಂಗಾಂಗ ಸಾಮರಸ್ಯದ ಅಂತಿಮ ಸ್ಥಿತಿ

04:00 AM Jul 29, 2024 IST | Samyukta Karnataka

ಐಕ್ಯಸ್ಥಲದ ಸಾಧಕನು ಸಮರಸ ಭಕ್ತಿಯ ಮೂಲಕ ಶಾಂತ್ಯತೀತೋತ್ತರಾ ಕಲೆಯಿಂದ ಕೂಡಿಕೊಂಡಿರುವ ಮಹಾಲಿಂಗದ ಅನುಸಂಧಾನ ಮಾಡುತ್ತಾನೆ. ಶಿವಯೋಗ ಸಾಧನೆಯ ಬಲದಿಂದ ಭ್ರೂಮಧ್ಯದಲ್ಲಿರುವ ಆಜ್ಞಾಚಕ್ರದವರೆಗೆ ಬಂದು ಅಲ್ಲಿ ಮಾಣಿಕ್ಯ ವರ್ಣದಿಂದ ಹೊಳೆಯುವ ಜ್ಯೋತಿಯನ್ನು ಶಿವಯೋಗಿಯು ಸಾಕ್ಷಾತ್ಕರಿಸಿಕೊಳ್ಳುತ್ತಾನೆ. ಈ ಜ್ಯೋತಿಯನ್ನೇ ವೀರಶೈವ ಪರಿಭಾಷೆಯಲ್ಲಿ ಮಹಾಲಿಂಗವೆಂದು ಹೆಸರಿಸಲಾಗಿದೆ. ಇದನ್ನು ಅನುಸಂಧಾನ ಮಾಡುತ್ತಾ ಸಾಗಿದಂತೆ ಶಾಂತ್ಯತೀತೋತ್ತರಾ ಕಲೆಯು ಅವನಲ್ಲಿ ಅನುಗೊಳ್ಳುತ್ತದೆ. ಶಾಂತ್ಯತೀತೋತ್ತರಾ ಕಲಾ ಎಂಬ ಶಬ್ದವನ್ನು ಹೀಗೆ ಅರ್ಥೈಸಿಕೊಳ್ಳಬಹುದು ಶಾಂತಿ ಎಂದರೆ ಆಂತರಿಕ ನೆಮ್ಮದಿ. ಇದು ನಿಶ್ಚಲವಾಗಿ ನಿಲ್ಲುತ್ತದೆ ಎಂದು ಹೇಳಲಾಗದು. ಇದರಲ್ಲಿ ಸೂಕ್ಷ್ಮ ಹೊಯ್ದಾಟ ಇರುತ್ತದೆ. ಗಾಳಿಯಲ್ಲಿ ಇರಿಸಿದ ದೀಪದಂತೆ ಇದರ ಹೊಯ್ದಾಟ. ಈ ಹೊಯ್ದಾಟ ನಿಂತು ನಿಶ್ಚಲಗೊಂಡರೆ ಅದು ಶಾಂತ್ಯತೀತಾ ಕಲೆಯು. ಇದು ಗಾಳಿಯಿಲ್ಲದ ಸ್ಥಾನದಲ್ಲಿರಿಸಿದ ದೀಪದಂತೆ ನಿಶ್ಚಲ. ಇಲ್ಲಿ ಇಂತಹ ನಿಶ್ಚಲವಾದ ಶಾಂತಿಯನ್ನು ನಾನು ಅನುಭವಿಸುತ್ತೇನೆ ಎಂಬ ಭಾವ ಮಾತ್ರ ಇರುತ್ತದೆ. ಹೀಗೆ ನಾನು ಶಾಂತಿಯನ್ನು ಅನುಭವಿಸುತ್ತೇನೆ ಎಂಬ ಭಾವವು ಸಹ ಇಲ್ಲವಾಗಿ ಕೇವಲ ಶಾಂತಿಯೇ ಎಲ್ಲೆಡೆ ವ್ಯಾಪಿಸಿಕೊಂಡಾಗ ಅದು ಶಾಂತ್ಯತೀತೋತ್ತರಾ ಕಲೆಯು. ಈ ಕಲೆಯು ಮಹಾಲಿಂಗವನ್ನು ಅನುಸಂಧಾನ ಮಾಡುವ ಐಕ್ಯಸ್ಥಲದ ಶಿವಯೋಗಿಯಲ್ಲಿ ನೆಲೆಸುತ್ತದೆ. ಅಂದರೆ ಈ ಶಿವಯೋಗಿಯು ಎಲ್ಲ ಭಾವಗಳನ್ನು ಬದಿಗಿರಿಸಿ ತಾನು ಬಯಲೊಳಗೆ ಬಯಲಾಗಿ ನಿರ್ಬಯಲಾನಂದವನ್ನು ತನ್ನದಾಗಿಸಿಕೊಳ್ಳುತ್ತಾನೆ. ಅಂತೆಯೇ ಸಿದ್ದಾಂತ ಶಿಖಾಮಣಿಯಲ್ಲಿ ಐಕ್ಯಸ್ಥಲದ ಅವಾಂತರ ಸ್ಥಲಗಳನ್ನು ನಿರೂಪಿಸುತ್ತಾ ಕೊನೆ ಕೊನೆಗೆ ಭಾವಾಭಾವ ಲಯಸ್ಥಲ ಮತ್ತು ಜ್ಞಾನ ಶೂನ್ಯಸ್ಥಲಗಳನ್ನು ವಿವರಿಸಲಾಗಿದೆ. ಅಲ್ಲಮ ಪ್ರಭುಗಳು ಕೂಡಾ ತಮ್ಮ ಒಂದು ವಚನದಲ್ಲಿ
ಒತ್ತಿ ಒತ್ತಿ ಹಣ್ಣು ಮಾಡಿದೊಡೆ ಅದೆತ್ತಣ ರುಚಿಯಪ್ಪುದೊ
ಕಾಮಿಸಿ ಕಲ್ಪಿಸಿ ಭಾವಿಸಿಹೆನೆಂದಡೆ ಅದಕ್ಕದೇ ಕೊರತೆ
ಭಾವಿಸುವ ಭಾವನೆಗಿಂತ ಸಾವುದೇ ಲೇಸು ಗುಹೇಶ್ವರಾ

ಹೀಗೆ ಹೇಳಿದ್ದಾರೆ. ಅಲ್ಲಮನ ದೃಷ್ಟಿಯಲ್ಲಿ ಸಾಧಕನು ಕೊನೆಯ ಆವಸ್ಥೆಯನ್ನು ತಲುಪಿದಾಗ ಯಾವ ಭಾವನೆಯ ಅಗತ್ಯವಿಲ್ಲ. ಸಿದ್ಧಾಂತ ಶಿಖಾಮಣಿಯಲ್ಲಿ ಹೇಳಲಾದ ಐಕ್ಯಸ್ಥಲದ ಅವಾಂತರಸ್ಥಲಗಳ ಉದ್ದೇಶವು ಇದೇ ಆಗಿದೆ. ಶಿವಯೋಗಿಯ ಈ ಆವಸ್ಥೆಯನ್ನು ಬಣ್ಣಿಸಲು ಶಬ್ದಗಳು ಮೌನ ತಾಳುತ್ತವೆ. ಮಾತು ಮುಗಿದು ಹೋಗುತ್ತವೆ.
ಕಂಗಳು ತುಂಬಿದ ಬಳಿಕ ನೋಡಲಿಲ್ಲ
ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ
ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ
ಮನ ತುಂಬಿದ ಬಳಿಕ ನೆನೆಯಲಿಲ್ಲ
ಮಹಾಂತ ಕೂಡಲಸಂಗಮದೇವ.

ಬಸವಣ್ಣನವರ ಈ ವಚನ ಈ ಸಂದರ್ಭದಲ್ಲಿ ಅದೆಷ್ಟು ಪ್ರಸ್ತುತ! ಮೈಮನ ಭಾವಗಳೆಲ್ಲ ಶಿವಮಯವಾಗಿ ಅವನೆ ಎಲ್ಲೆಡೆ ತುಂಬಿದ ಮೇಲೆ ಯಾವ ಕಾಮನೆ! ಯಾವ ಭಾವನೆ! ಜಗತ್ತಿನ ಎಲ್ಲ ದರ್ಶನಗಳ ಧೈಯ ಈ ಆವಸ್ಥೆಯನ್ನು ತಲುಪುವುದೇ ಆಗಿದೆ. ಇದು ಶಬ್ದಕ್ಕೆ ಸಿಗದು, ಮಾತಿಗೆ ನಿಲುಕದು, ಭಾವಕ್ಕೆ ತಾಗದು, ಎಲ್ಲ ಇದ್ದು ತಾನೆ ಇಲ್ಲವಾಗುವ ಮತ್ತು ಎಲ್ಲಾ ಆಗುವ ಈ ಅವಸ್ಥೆಗೆ ಮತ್ತು ಇಲ್ಲಿ ನಿಂದು ಮಹದಲ್ಲಿ ಬೆರೆದ ಮಹಾಂತನಿಗೆ ಈ ಪ್ರಪಂಚದಲ್ಲಿ ಇನ್ನೊಂದು ಹೋಲಿಕೆಯಿಲ್ಲ . ಇದು ಅನುಪಮ ! ಅನನ್ಯ !

Next Article