For the best experience, open
https://m.samyuktakarnataka.in
on your mobile browser.

ಲಿಂಗ ಕಳೆದರೆ ಪ್ರಾಣ ಬಿಡಬೇಕೆ!

02:00 AM Mar 18, 2024 IST | Samyukta Karnataka
ಲಿಂಗ ಕಳೆದರೆ ಪ್ರಾಣ ಬಿಡಬೇಕೆ

ಪ್ರಾಣಕ್ಕಿಂತ ಮಿಗಿಲಾಗಿ ಲಿಂಗವನ್ನು ಪ್ರೀತಿಸಬೇಕು. ಅದೇನೋ ಸರಿ. ಆದರೆ ಅಕಸ್ಮಾತ್ ಅಪ್ಪಿತಪ್ಪಿ ಲಿಂಗವು ಶರೀರದಿಂದ ಕಳೆದು ಹೋದಾಗ ತಕ್ಷಣ ಪ್ರಾಣ ಹೋಗದಿದ್ದರೆ ಆಗೇನು ಮಾಡಬೇಕು? ಒತ್ತಾಯಪೂರ್ವಕ ಪ್ರಾಣ ಕಳೆದುಕೊಳ್ಳಬೇಕೆ? ಇಲ್ಲವೆ ಲಿಂಗಬಿಟ್ಟು ಬದುಕಬೇಕೆ? ಎಂಬ ಸಂದಿಗ್ಧತೆ ಇಲ್ಲಿ ಸಹಜ. ಲಿಂಗವಿಯೋಗವಾದಾಗ ಪ್ರಾಣ ಹೋಗದಿದ್ದರೆ ದೀಕ್ಷೆಯನ್ನು ಕರುಣಿಸಿದ ಗುರುವಿನ ಬಳಿ ಹೋಗಿ ತನ್ನ ಪರಿಸ್ಥಿತಿಯನ್ನು ಪ್ರಾರ್ಥಿಸಿಕೊಂಡು ಗುರು ಹೇಳಿದ ಪ್ರಾಯಶ್ಚಿತ ಆಚರಿಸಿ ಗುರುವಿನಿಂದ ಮತ್ತೊಂದು ಲಿಂಗವನ್ನು ಸ್ವೀಕರಿಸಿ ಧರಿಸಿ ಆರಾಧಿಸಬೇಕು. ಗುರುವಾದರೂ ಶಿಷ್ಯನಿಗೆ ಕೆಲ ಪ್ರಾಯಶ್ಚಿತ ಹೇಳಿ ಲಿಂಗವನ್ನು ದಯಪಾಲಿಸಬೇಕು.
ಸಾಧಕನೋರ್ವ ನದೀ ಸ್ನಾನಕ್ಕೆ ಹೋದ ಪ್ರಸಂಗದಲ್ಲಿ ಎದೆಯ ಮೇಲಿನ ಲಿಂಗ ಹಾರಿ ಬಿದ್ದು ನೀರಲ್ಲಿ ಮುಳುಗಿ ಹೋಯ್ತು. ಸಾಕಷ್ಟು ಹುಡುಕಿದರೂ ದೊರೆಯಲಿಲ್ಲ. ಗುರುಗಳ ಬಳಿ ಬಂದು ತನ್ನ ಅವಸ್ಥೆ ಬಿನ್ನವಿಸಿ ಲಿಂಗ ಹೋಯ್ತು ಇನ್ನು ಮೇಲೆ ನಾನ್ಹೇಗೆ ಮಾಡಲಿ ಎಂದು ಕೇಳಿಕೊಂಡ. ಗುರುಗಳು ಸಿಟ್ಟಿಗೆದ್ದಂತೆ ನಟಿಸಿ `ಅಲ್ಲೊ ಮೂರ್ಖನೇ! ದೀಕ್ಷೆಯನ್ನು ಕೊಡುವಾಗಲೇ ಇದನ್ನು ಜೋಪಾನವಾಗಿರಿಸಿಕೊಳ್ಳಬೇಕು. ಎಲ್ಲೂ ಕಳೆದು ಕೊಳ್ಳಬಾರದು, ಒಂದು ವೇಳೆ ಕಳೆದು ಹೋದರೆ ಪ್ರಾಣ ಬಿಡಬೇಕಾಗುತ್ತದೆ ಎಂದು ಆದೇಶಿಸಿದ್ದೆ. ಆದರೂ ನೀನು ಎಚ್ಚರಿಕೆಯಿಂದ ಅದನ್ನು ಕಾಯ್ದುಕೊಳ್ಳದೆ ಕಳೆದುಕೊಂಡಿರುವೆ. ಆದ್ದರಿಂದ ಅದಕ್ಕೆ ನೀನೀಗ ಪ್ರಾಣತ್ಯಾಗಕ್ಕೆ ಸಿದ್ಧನಾಗು' ಎಂದರು. ನನಗೆ ಪ್ರಾಣ ಕಳೆದುಕೊಳ್ಳುವ ಇಚ್ಛೆಯಿಲ್ಲ ಕಾರಣ ಬೇರೆ ಪ್ರಾಯಶ್ಚಿತ ಹೇಳಿ ನನ್ನನ್ನು ಕಾಪಾಡಿ”ಎಂದು ಪ್ರಾರ್ಥಿಸಿದ. ಗುರುಗಳು ಸಾವೇ ನಿನಗೆ ಪ್ರಾಯಶ್ಚಿತ್ತ ಎಂದರು. ಸಾಯುವ ಮೊದಲು ನನ್ನದೊಂದು ಕೊನೆಯ ಇಚ್ಛೆ, ನಿಮ್ಮ ವೈಭವಪೂರ್ಣ ಲಿಂಗಪೂಜೆಯನ್ನು ಕಣ್ಣಾರೆ ಕಂಡು ನಂತರ ನಾನು ಅಗ್ನಿ ಪ್ರವೇಶ ಮಾಡಿ ಪ್ರಾಣತ್ಯಾಗ ಮಾಡಿಕೊಳ್ಳುವೆ. ಅದಕ್ಕಾಗಿ ನಿಮ್ಮ ಲಿಂಗಪೂಜೆಯನ್ನು ವೀಕ್ಷಿಸಲು ದಯಮಾಡಿ ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡ. ಈ ಅಪರೂಪದ ಅಂತಿಮ ಇಚ್ಛೆಯನ್ನು ಕೇಳಿ ಅಚ್ಚರಿಪಟ್ಟ ಗುರುಗಳು ನಿನ್ನ ಈ ಇಚ್ಛೆಯನ್ನು ಕೇಳಿ ನಿನ್ನ ಬಗ್ಗೆ ನನಗೆ ಹೆಮ್ಮೆಯೆನಿಸುತ್ತದೆ ಎಂದರು.
ನಾಳೆ ಈ ಊರಿನ ಹೊರಗೆ ಪೂರ್ವದಿಕ್ಕಿನಲ್ಲಿರುವ ವಿಶಾಲ ಭಾವಿಯ ಸಮೀಪ ನಾವು ಶಿವಪೂಜೆ ಮಾಡಿಕೊಳ್ಳುವೆವು. ನೀನು ಒಂದೆಡೆ ಅಗ್ನಿಕುಂಡವನ್ನು ನಿರ್ಮಿಸಿ ನಮ್ಮ ಪೂಜೆಯನ್ನು ಕಣ್ಣು ತುಂಬ ನೋಡಿ ನಂತರ ಅಗ್ನಿಪ್ರವೇಶ ಮಾಡುವೆಯಂತೆ' ಎಂದರು. ಮರುದಿನ ಭಾವಿಯ ಸಮೀಪ ಶಿಷ್ಯ ಅಗ್ನಿಕುಂಡ ನಿರ್ಮಿಸಿ ಬಂದು ಗುರುಗಳ ಎದುರು ಕುಳಿತ. ಗುರುಗಳು ಲಿಂಗಪೂಜೆಯಲ್ಲಿ ನಿರತರಾದರು. ಧ್ಯಾನ, ಜಪ, ಅಭಿಷೇಕ ಎಲ್ಲ ಸುಂದರವಾಗಿ ಜರುಗಿದವು. ಮಂಗಳಾರತಿಯ ನಂತರ ಗುರುಗಳು ಒಂದು ಕ್ಷಣ ಲಿಂಗನಿರೀಕ್ಷಣೆಯಲ್ಲಿ ತೊಡಗಿದ್ದರು. ತಕ್ಷಣ ಶಿಷ್ಯ ಮೇಲೆದ್ದು, ಲಿಂಗ ಹಿಡಿದ ಗುರುಗಳ ಕೈಯನ್ನು ಕೆಳಗೆ ಪಟ್ಟನೆ ಬಡಿದ, ಗುರುಗಳ ಕೈಯೊಳಗಿನ ಲಿಂಗ ಜಿಗಿದು ಭಾವಿಯೊಳಗೆ ಬಿತ್ತು ಗಾಬರಿಗೊಂಡ ಗುರುಗಳು ಇದೇನು ಘಾತ ಮಾಡಿದೆಯೋ ಶಿಷ್ಯ.
ಇನ್ನು ನಮ್ಮ ಗತಿಯೇನು? ಎಂದರು. ಶಿಷ್ಯ ಕೈಮುಗಿದು ಗುರುಗಳೆ! ಅಗ್ನಿಕುಂಡ ತಯಾರಿದೆ ಇಬ್ಬರೂ ಪ್ರವೇಶಿಸೋಣ ಬನ್ನಿ ಎಂದ. ನನ್ನ ಉಪದೇಶ ತಿರುಗುಬಾಣವಾಯ್ತಲ್ಲ ಎಂದುಕೊಂಡ ಗುರುಗಳು ಜೋಳಿಗೆಯೊಳಗಿನ ಲಿಂಗವನ್ನು ಹೊರತೆಗೆದು ಶಿಷ್ಯನೇ! ಇದನ್ನು ಯಾರ ಮುಂದೆ ಹೇಳಬೇಡ ತೆಗೆದುಕೋ ಈ ಲಿಂಗವನ್ನು ಎಂದರಂತೆ. ಆಗ ಶಿಷ್ಯ ಹೀಗೆ ಹೇಳಿ ಗುರುಗಳೆ ಎಂದನಂತೆ ನಗುತ್ತ…