For the best experience, open
https://m.samyuktakarnataka.in
on your mobile browser.

ಲೋಕಸಭಾಪತಿ ಆಯ್ಕೆಗೆ ಸರ್ಕಸ್

04:15 AM Jun 14, 2024 IST | Samyukta Karnataka
ಲೋಕಸಭಾಪತಿ ಆಯ್ಕೆಗೆ ಸರ್ಕಸ್

ನವದೆಹಲಿ: ಹದಿನೆಂಟನೇ ಲೋಕಸಭೆಯ ಮೊದಲ ಅಧಿವೇಶನ ಜೂನ್ ೨೪ರಿಂದ ಆರಂಭವಾಗಲಿದೆ. ಎರಡು ದಿನಗಳ ಬಳಿಕ ಜೂನ್ ೨೬ರಂದು ಲೋಕಸಭಾ ಸಭಾಪತಿ ಆಯ್ಕೆ ನಡೆಯಲಿದೆ. ಈ ಬಗ್ಗೆ ರಾಷ್ಟ್ರಪತಿಯವರು ಅಧಿಸೂಚನೆ ಹೊರಡಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯದೇ ಎನ್‌ಡಿಎ ಮೈತ್ರಿಕೂಟದ ಬಲದೊಂದಿಗೆ ಸರ್ಕಾರ ರಚಿಸಿರುವುದರಿಂದ ಸಾಂವಿಧಾನಿಕವಾಗಿ ಮಹತ್ವದ್ದಾಗಿರುವ ಈ ಹುದ್ದೆ ಯಾರ ಪಾಲಾಗಲಿದೆ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜುಜು ಪ್ರಕಟಿಸಿದ ಮಾಹಿತಿಯಂತೆ ಹಂಗಾಮಿ ಸ್ಪೀಕರ್ ಜೂನ್ ೨೪ ಹಾಗೂ ೨೫ರಂದು ನೂತನ ಸಂಸದರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ೨೬ರಂದು ಲೋಕಸಭಾ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ೨೭ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಸತ್ತಿನ ಎರಡೂ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಆನಂತರ ಜುಲೈ ೩ರವರೆಗೂ ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯ ಸೇರಿದಂತೆ ಹಲವಾರು ಕಲಾಪಗಳು ನಡೆಯಲಿವೆ.
ಲೋಕಸಭಾ ಸ್ಪೀಕರ್ ಹುದ್ದೆಗೆ ಈಗಾಗಲೇ ಮಿತ್ರಪಕ್ಷವಾದ ತೆಲುಗುದೇಶಂ ಬೇಡಿಕೆ ಇಟ್ಟಿದ್ದರೂ ಈ ಪದವಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಿದೆ. ಇನ್ನೊಂದು ಮಿತ್ರಪಕ್ಷವಾದ ಜೆಡಿಯು ಪಕ್ಷ ಕೂಡಾ ಈ ಪದವಿಗೆ ತನ್ನ ನಾಯಕರೊಬ್ಬರನ್ನು ಆರಿಸುವಂತೆ ಒತ್ತಾಯಿಸುತ್ತಿದೆ. ಜೆಡಿಯು ಅಥವಾ ಟಿಡಿಪಿ ಈ ಸ್ಥಾನ ಪಡೆದುಕೊಳ್ಳಬೇಕೆಂದು ಆಪ್ ಸೇರಿದಂತೆ ಪ್ರತಿಪಕ್ಷಗಳು ಸಲಹೆ ನೀಡಿವೆ. ಆದರೆ ಬಿಜೆಪಿಯ ಹಿರಿಯ ಸಂಸದರೊಬ್ಬರು ಈ ಹುದ್ದೆ ಅಲಂಕರಿಸಲಿದ್ದಾರೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.
ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ಸುಮಿತ್ರಾ ಮಹಾಜನ್ ಈ ಕಾರ್ಯನಿರ್ವಹಿಸಿದ್ದರೆ, ಎರಡನೇ ಅವಧಿಯಲ್ಲಿ ಓಂ ಬಿರ್ಲಾ ಈ ಹುದ್ದೆ ಅಲಂಕರಿಸಿದ್ದರು.
ಮೂಲಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ ಮುಗಿಸಿ ಬಂದ ನಂತರ ಲೋಕಸಭಾ ಸಭಾಪತಿ ಯಾರಾಗಬೇಕೆಂಬುದರ ಬಗ್ಗೆ ಚರ್ಚೆ ನಡೆಯಲಿದೆ. ಲೋಕಸಭೆಯ ಸ್ಪೀಕರ್ ಆಗಿ ಯಾರನ್ನು ಆರಿಸಬೇಕೆಂಬುದರ ಕುರಿತು ಬಿಜೆಪಿಯೊಳಗೆಯೇ ಚರ್ಚೆ ನಡೆದ ನಂತರ ಮಿತ್ರ ಪಕ್ಷಗಳೊಂದಿಗೆ ಆ ಬಗ್ಗೆ ಪರಾಮರ್ಶಿಸಲಾಗುತ್ತದೆ. ಮಿತ್ರಪಕ್ಷಗಳಿಂದ ಈ ವಿಚಾರವಾಗಿ ಸಲಹೆ ಅಥವಾ ಬೇಡಿಕೆ ಬಂದರೆ ಬಿಜೆಪಿ ಹೊಸ ಸೂತ್ರ ಅನುಸರಿಸಲಿದೆ.