For the best experience, open
https://m.samyuktakarnataka.in
on your mobile browser.

ಲೋಕಸಭೆ ಚುನಾವಣೆ: ಮಾ. ೧೩ಕ್ಕೆ ಅಧಿಸೂಚನೆ ಸಾಧ್ಯತೆ

03:01 AM Feb 24, 2024 IST | Samyukta Karnataka
ಲೋಕಸಭೆ ಚುನಾವಣೆ  ಮಾ  ೧೩ಕ್ಕೆ ಅಧಿಸೂಚನೆ ಸಾಧ್ಯತೆ

ಕೆ.ವಿ.ಪರಮೇಶ್
ಬೆಂಗಳೂರು: ಲೋಕಸಭೆ ಚುನಾವಣೆ ಸಂಬಂಧ ಕೇಂದ್ರ ಚುನಾವಣಾ ಆಯೋಗ ಸಿದ್ಧತೆ ಆರಂಭಿಸಿದೆ. ಈಗಾಗಲೇ ಜಂಟಿ ಆಯುಕ್ತರ ತಂಡಗಳು ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ತಯಾರಿ ಕುರಿತು ಮಾಹಿತಿ ಪಡೆಯುತ್ತಿರುವ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲಿ ಆಗಿರುವ ಸಿದ್ಧತೆ ಬಗ್ಗೆ ವಿವರ ಸಂಗ್ರಹಿಸಿದೆ, ರಾಜ್ಯದಲ್ಲಿ ವಿವಿಧ ವಾರ್ಷಿಕ ಪರೀಕ್ಷೆ ದಿನಾಂಕಗಳು ಹಾಗೂ ವಿಶೇಷ ಹಬ್ಬಾಚರಣೆಗಳ ಮಾಹಿತಿ ಪಡೆದಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಸಭೆಯ ೪ ಸ್ಥಾನಗಳಿಗೆ ಮಂಗಳವಾರ ನಡೆಯಲಿರುವ ಮತದಾನದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳ ರಾಜ್ಯ ಮುಖ್ಯಚುನಾವಣಾಧಿಕಾರಿಯಿಂದ ತಯಾರಿ ಕುರಿತು ಮಾಹಿತಿ ಪಡೆದಿದ್ದಾರೆ. ಇದೇ ಸಂದರ್ಭದಲ್ಲಿ ಲೋಕಸಭೆ ಚುನಾವಣೆ ಬಗ್ಗೆಯೂ ಚರ್ಚೆಯಾಗಿದ್ದು, ೨೦೧೯ರ ಚುನಾವಣೆ ಎಷ್ಟು ಹಂತಗಳಲ್ಲಿ ನಡೆದಿತ್ತು? ಮತದಾರರ ಅಂತಿಮ ಪಟ್ಟಿ ತಯಾರಿ ಮತ್ತಿತರ ವಿವರಗಳನ್ನು ಬಯಸಿದೆ ಎನ್ನಲಾಗಿದೆ.
ಪ್ರಮುಖವಾಗಿ ಬಹುತೇಕ ಏಪ್ರಿಲ್ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗಿದೆ. ಈಗಾಗಲೇ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆ ಮುಕ್ತಾಯವಾಗಿದ್ದು, ಶಾಲಾ-ಕಾಲೇಜುಗಳ ಪರೀಕ್ಷಾ ದಿನಾಂಕಗಳು ಮತ್ತು ರಾಜ್ಯದಲ್ಲಿನ ವಿಶೇಷ ಜಾತ್ರೆ ಅಥವಾ ಹಬ್ಬಾಚರಣೆಗಳ ಕುರಿತು ಖಚಿತ ಮಾಹಿತಿ ಪಡೆದುಕೊಳ್ಳಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.

ಹಣದ ವಹಿವಾಟಿಗೆ ಹದ್ದಿನಕಣ್ಣು
ಈ ಬಾರಿ ಚುನಾವಣೆಯಲ್ಲಿ ನೀತಿಸಂಹಿತೆ ಅತ್ಯಂತ ಕಠಿಣವಾಗಿರಲಿದೆ. ಚುನಾವಣೆ ಪೂರ್ವದಲ್ಲಿ ಮತದಾರರಿಗೆ ಆಮಿಷವೊಡ್ಡುವಂತಹ ಯಾವುದೇ ಪ್ರಕ್ರಿಯೆಗಳ ಬಗ್ಗೆ ಕಟ್ಟುನಿಟ್ಟಿನ ನಿಗಾವಹಿಸಿ ಎಂದು ಕೇಂದ್ರ ಚುನಾವಣಾ ಆಯೋಗ ತಾಕೀತು ಮಾಡಿದೆ. ವಿವಿಧ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಲ್ಲಿ ದೊಡ್ಡಮಟ್ಟದ ಹಣವಹಿವಾಟುಗಳ ಬಗ್ಗೆ ಸೂಕ್ತ ದಾಖಲೆ ಮತ್ತು ಮಾಹಿತಿ ಸಂಗ್ರಹಿಸುವಂತೆಯೂ ರಾಜ್ಯ ಮುಖ್ಯಚುನಾವಣಾಧಿಕಾರಿಗಳಿಗೆ ಸ್ಪಷ್ಟ ಸಂದೇಶ ರವಾನೆಯಾಗಿದೆ ಎಂದು ತಿಳಿದುಬಂದಿದೆ.

ದಕ್ಷಿಣ ರಾಜ್ಯಗಳಿಗೆ ಭೇಟಿ
ಈಗಾಗಲೇ ಹಲವು ರಾಜ್ಯಗಳಿಗೆ ಭೇಟಿ ನೀಡಿ ಚುನಾವಣೆ ಸಿದ್ಧತೆ ಬಗ್ಗೆ ಆಯಾ ರಾಜ್ಯ ಮುಖ್ಯಚುನಾವಣಾಧಿಕಾರಿಗಳೊಂದಿಗೆ ಕೇಂದ್ರ ಚುನಾವಣಾ ಆಯೋಗದ ತಂಡ ಚರ್ಚಿಸಿದೆ. ಶನಿವಾರದಿಂದ ದಕ್ಷಿಣ ರಾಜ್ಯಗಳಾದ ಕೇರಳ, ಕರ್ನಾಟಕ, ತೆಲಂಗಾಣ, ಹಾಗೂ ಆಂಧ್ರಪ್ರದೇಶ ರಾಜ್ಯಗಳಿಗೆ ಭೇಟಿ ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ತಿಂಗಳು ಅಧಿಸೂಚನೆ?
ರಾಜ್ಯದ ೨೮ ಲೋಕಸಭಾ ಕ್ಷೇತ್ರಗಳೂ ಸೇರಿದಂತೆ ದೇಶದ ೫೪೫ ಸಂಸತ್ ಕ್ಷೇತ್ರಗಳಿಗೆ ಚುನಾವಣೆ ನಡೆಸುವ ಸಂಬಂಧ ಮಾರ್ಚ್ ೧೩ಕ್ಕೆ ಕೇಂದ್ರ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
೯೬.೮೮ ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು ಈ ಪೈಕಿ ೧.೮೫ ಕೋಟಿ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. ೨೦೧೯ರಲ್ಲಿ ಏಪ್ರಿಲ್ ೧೧ಕ್ಕೆ ಮೊದಲ ಹಂತ ಹಾಗೂ ಮೇ ೧೯ಕ್ಕೆ ಕೊನೆಯ ಹಂತ ಸೇರಿದಂತೆ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆದಿತ್ತು. ಈ ಬಾರಿ ಎಷ್ಟು ಹಂತಗಳಲ್ಲಿ ಮತದಾನ ನಡೆಯಲಿದೆ? ಯಾವ್ಯಾಗ ವೇಳಾಪಟ್ಟಿ ಪ್ರಕಟವಾಗಲಿದೆ ಎನ್ನುವುದು ಕುತೂಹಲ ಕೆರಳಿಸಿದೆ.