For the best experience, open
https://m.samyuktakarnataka.in
on your mobile browser.

ಲೋಕ ಚುನಾವಣೆಯಲ್ಲಿ ಜಾತಿ ನಗಣ್ಯ

02:45 AM Apr 06, 2024 IST | Samyukta Karnataka
ಲೋಕ ಚುನಾವಣೆಯಲ್ಲಿ ಜಾತಿ ನಗಣ್ಯ

ಹರ್ಷ ಕುಲಕರ್ಣಿ
ಹುಬ್ಬಳ್ಳಿ: ಸಾಮಾನ್ಯವಾಗಿ ಚುನಾವಣೆಗಳಲ್ಲಿ ಎಲ್ಲ ಪಕ್ಷಗಳೂ ಜಾತಿ ಲೆಕ್ಕಾಚಾರ ಹಾಕುತ್ತಾರೆ. ಹಾಗೆಯೇ ಮತದಾರ ಪ್ರಭು ಅದನ್ನೇ ಪರಿಗಣಿಸುವುದಿಲ್ಲ. ಧಾರವಾಡ ಲೋಕಸಭಾ ಕ್ಷೇತ್ರದ ವಿಚಾರದಲ್ಲೂ ದೊಡ್ಡ ಸಮುದಾಯದವರು ಆಯ್ಕೆಯಾಗಿದ್ದು ತೀರ ಕಡಿಮೆ.
ಕ್ಷೇತ್ರದಲ್ಲಿ ಅಂದಾಜು ೫ ಲಕ್ಷಕ್ಕೂ ಅಧಿಕ ವೀರಶೈವ ಲಿಂಗಾಯತ ಮತದಾರರಿದ್ದಾರೆ. ೩ ಲಕ್ಷದಷ್ಟು ಮುಸ್ಲಿಮರು, ೨ ಲಕ್ಷದಷ್ಟು ಪರಿಶಿಷ್ಟ ಜಾತಿ, ೧.೬೦ ಲಕ್ಷದಷ್ಟು ಕುರುಬರು, ಒಂದು ಲಕ್ಷದಷ್ಟು ಪರಿಶಿಷ್ಟ ಪಂಗಡದವರು, ಒಂದು ಲಕ್ಷದಷ್ಟು ಎಸ್‌ಎಸ್‌ಕೆ ಸಮಾಜ, ಮರಾಠ ಸಮಾಜದವರು, ೫೦ ಸಾವಿರಕ್ಕೂ ಅಧಿಕ ಬ್ರಾಹ್ಮಣರು ಹಾಗೂ ಇತರ ಸಮಾಜದವರು ೨ ರಿಂದ ೨.೫೦ ಲಕ್ಷದಷ್ಟಿದ್ದಾರೆ.
ಲಿಂಗಾಯತ ಸಮುದಾಯವೇ ನಿರ್ಣಾಯಕ ಎಂಬ ಮಾತಿದ್ದರೂ ಸಾರಿಗೆ ಉದ್ಯಮಿ ಡಾ. ವಿಜಯ ಸಂಕೇಶ್ವರ ಅವರು ಈ ಕ್ಷೇತ್ರದಿಂದ ಮೂರು ಅವಧಿಗೆ ಆಯ್ಕೆಯಾದ ಏಕೈಕ ಲಿಂಗಾಯತ ಅಭ್ಯರ್ಥಿಯಾಗಿದ್ದಾರೆ.
ಲಿಂಗಾಯತ ಪ್ರಾಬಲ್ಯ ಹೊಂದಿರುವ ಧಾರವಾಡ ಕ್ಷೇತ್ರದಲ್ಲಿ ೧೯೮೪ರ ಚುನಾವಣೆಯಲ್ಲಿ ಎಸ್.ಐ. ಶೆಟ್ಟರ ವಿರುದ್ಧ ಕುರುಬ ಸಮುದಾಯದ ಮತ್ತು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ನಾಯ್ಕರ್ ೨,೨೯,೬೬೫ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ೧೯೮೯ರಲ್ಲಿ ಚಂದ್ರಕಾಂತ ಬೆಲ್ಲದ ವಿರುದ್ಧ ಡಿ.ಕೆ. ನಾಯ್ಕರ್ ಪುನರಾಯ್ಕೆ ಆಗಿದ್ದರು. ೧೯೯೧ರಲ್ಲಿ ಮತ್ತದೇ ಡಿ.ಕೆ. ನಾಯ್ಕರ್, ಚಂದ್ರಕಾಂತ ಬೆಲ್ಲದ ವಿರುದ್ಧ ೨೨,೧೧೭ ಮತಗಳನ್ನು ಹೆಚ್ಚು ಪಡೆಯುವ ಮೂಲಕ ಮೂರನೇ ಬಾರಿ ಲೋಕಸಭೆ ಪ್ರವೇಶಿಸಿದ್ದರು.
೧೯೯೬ ರಿಂದ ೧೯೯೯ರ ವರೆಗೆ ಕಾಂಗ್ರೆಸ್‌ನ ಶಂಕರಣ್ಣ ಮುನವಳ್ಳಿ, ಡಿ.ಕೆ. ನಾಯ್ಕರ್ ಹಾಗೂ ವೀರಣ್ಣ ಮತ್ತೀಕಟ್ಟಿ ಅವರಿಗೆ ಸೋಲಿನ ರುಚಿ ತೋರಿಸುವ ಮೂಲಕ ಬಿಜೆಪಿ ಅಭ್ಯರ್ಥಿ ಡಾ. ವಿಜಯ ಸಂಕೆಶ್ವರ ಅತ್ಯಧಿಕ ಮತಗಳ ಅಂತರದಿಂದ ಹ್ಯಾಟ್ರಿಕ್ ಬಾರಿಸಿದ್ದರು.
೨೦೦೪ ರಲ್ಲಿ ಪ್ರಹ್ಲಾದ ಜೋಶಿ ಲೋಕಸಭೆಗೆ ಪ್ರಥಮ ಬಾರಿಗೆ ಸ್ಪರ್ಧಿಸಿದ್ದರು. ಮೊದಲ ಪ್ರಯತ್ನದಲ್ಲೇ ಕಾಂಗ್ರೆಸ್ ಅಭ್ಯರ್ಥಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್. ಪಾಟೀಲ ಅವರನ್ನು ಪರಾಭವಗೊಳಿಸಿ ಲೋಕಸಭೆ ಪ್ರವೇಶಿಸಿದ್ದರು. ೨೦೦೯ರಲ್ಲಿ ಮಂಜುನಾಥ ಕುನ್ನೂರ, ೨೦೧೪ರಲ್ಲಿ ವಿನಯ ಕುಲಕರ್ಣಿ ಹಾಗೂ ೨೦೧೯ರಲ್ಲಿ ಮತ್ತೆ ವಿನಯ ಕುಲಕರ್ಣಿ ಅವರನ್ನು ಮಣಿಸಿದ್ದ ಪ್ರಹ್ಲಾದ ಜೋಶಿ ಅವರಿಗೆ ಸಚಿವ ಸ್ಥಾನ ಒಲಿದಿತ್ತು.
ಗೆದ್ದಿದ್ದು ಸಂಕೇಶ್ವರ ಮಾತ್ರ…
೧೯೮೦ರಿಂದ ಈವರೆಗೆ ನಡೆದ ೧೧ ಲೋಕಸಭಾ ಚುನಾವಣೆಗಳಲ್ಲಿ ಲಿಂಗಾಯತ ಸಮುದಾಯದವರು ವಿವಿಧ ಪಕ್ಷಗಳ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರು. ಆದರೆ, ಗೆದ್ದ ಏಕೈಕ ಲಿಂಗಾಯತ ಅಭ್ಯರ್ಥಿ ಡಾ. ವಿಜಯ ಸಂಕೇಶ್ವರ ಮಾತ್ರ. ಧಾರವಾಡ ಕ್ಷೇತ್ರದಿಂದ ೧೯೯೬, ೧೯೯೮ ಹಾಗೂ ೧೯೯೯ರಲ್ಲಿ ಅವರು ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರು.
ಆಯ್ಕೆಯಾದವರು…
ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಅನೇಕರು ಪಾರಮ್ಯ ಮೆರೆದಿದ್ದಾರೆ. ಡಿ.ಪಿ.ಕರಮರಕರ್ ಎರಡು ಅವಧಿಗೆ ಹಾಗೂ ಸರೋಜಿನಿ ಮಹಿಷಿ ನಾಲ್ಕು ಅವಧಿಗೆ ಆಯ್ಕೆಯಾಗಿದ್ದರು.