ವಕ್ಫ್ ವಿವಾದ: ಜೈಲ್ ಭರೋ ಆಂದೋಲನದ ಎಚ್ಚರಿಕೆ
ರಬಕವಿ-ಬನಹಟ್ಟಿ: ರಾಜ್ಯ ಆಡಳಿತದಲ್ಲಿರುವ ಕಾಂಗ್ರೆಸ್ ವಕ್ಫ್ ಮಂಡಳಿಯ ಮೂಲಕ ಜನರನ್ನು ಆತಂಕದ ಸ್ಥಿತಿಗೆ ತಳ್ಳುವುದಕ್ಕೆ ಮುಂದಾಗಿದ್ದು, ಜೊತೆಗೆ ಸರ್ಕಾರಿ ಅಧೀನದಲ್ಲಿರುವ ಆಸ್ತಿಯನ್ನು ತನ್ನದೆಂದು ವಕ್ಫ್ ಬೋರ್ಡ್ ಹೇಳುತ್ತಿರುವುದನ್ನು ವಿರೋಧಿಸಿ ಬನಹಟ್ಟಿ ನಗರದಲ್ಲಿ ಬಿಜೆಪಿ ಹಾಗು ಕಿಸಾನ್ ಮೋರ್ಚಾ ವತಿಯಿಂದ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿ ಗ್ರೇಡ್-೨ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಈ ವೇಳೆ ವಿದ್ಯಾಧರ ಸವದಿ ಮಾತನಾಡಿ, ಒಂದು ಸಮುದಾಯದ ಓಲೈಕೆಯ ದುರ್ವರ್ತನೆಯಿಂದ ಸರ್ವ ಜನಾಂಗಕ್ಕೆ ಅಪಮಾನ ಮಾಡಿದ ನೀಚ ಸರ್ಕಾರಕ್ಕೆ ಧಿಕ್ಕಾರ. ವಕ್ಫ್ ಕಾನೂನು ರದ್ದುಪಡಿಸುವವರೆಗೂ ಹೋರಾಟ ನಿಲ್ಲುವದಿಲ್ಲವೆಂದು ಸ್ಪಷ್ಟಪಡಿಸಿದರು.
ಜಿ.ಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ ಮಾತನಾಡಿ, ಅಧಿಕಾರಿಗಳನ್ನು ಕೈಗೊಂಬೆಯನ್ನಾಗಿಸಿಕೊಂಡು ಜನಸಾಮಾನ್ಯರ ವಿರೋಧಿ ನೀತಿಯನ್ನು ತರುವಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ ಮುಂದಾಗಿದ್ದಾರೆ. ಇದು ಸರ್ಕಾರದ ಅವನತಿಗೆ ನಾಂದಿ ಹಾಡಲು ಕಾರಣವಾಗಿದ್ದು, ಇದರ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜೈಲ್ ಭರೋ ಚಳವಳಿ: ೨೦೧೯ರ ಪೂರ್ವದಲ್ಲಿಯೇ ತೇರದಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೯೦೦ಕ್ಕೂ ಅಧಿಕ ಎಕರೆಯಷ್ಟು ವಕ್ಫ್ ಆಸ್ತಿಯನ್ನಾಗಿಸಿದೆ. ಇದೀಗ ೧೩೦೦ ಎಕರೆ ಹೇಗೆ ನಮೂದಾಗಿದೆ ಎಂಬುದು ಯಾರಿಗೂ ಅರಿವಿಲ್ಲ. ಇವೆಲ್ಲದಕ್ಕೂ ತಿಲಾಂಜಲಿ ನೀಡಿ, ಮರಳಿ ಆಯಾ ರೈತರ ಜಮೀನಿನ ಹಕ್ಕು ನೀಡಬೇಕು. ಇಲ್ಲವಾದಲ್ಲಿ ಸರ್ಕಾರಿ ಕಚೇರಿಗಳಿಗೆ ಮುತ್ತಿಗೆ ಹಾಕುವ ಮೂಲಕ ಜೈಲ್ ಭರೋ ಚಳವಳಿ ನಡೆಸಲಾಗುವದೆಂದು ಬಿಜೆಪಿ ಮುಖಂಡ ನಂದು ಗಾಯಕವಾಡ ಹೇಳಿದರು.
ಕೆಲ ಕಾಲ ಉದ್ವಿಗ್ನ: ಪ್ರತಿಭಟನಾ ರ‍್ಯಾಲಿ ನಂತರ ಗ್ರೇಡ್-೨ ತಹಶೀಲ್ದಾರ್ ಸತೀಶಕುಮಾರ ಜಿ. ಅವರಿಗೆ ಮನವಿ ಪತ್ರ ನೀಡುವ ಸಂದರ್ಭ ತಾ.ಪಂ ಸದಸ್ಯ ಗುರು ಮರಡಿಮಠ ಆಕ್ರೋಶಭರಿತ ಮಾತುಗಳನ್ನಾಡಿ ಸರ್ಕಾರದ ಗುಲಾಮಗಿರಿಯಾಗಿ ಯಾಕೆ ಕಾರ್ಯ ನಡೆಸುತ್ತಿದ್ದೀರಿ? ನಿಮಗೆ ರೈತರ ಮೇಲೆ ಅನುಕಂಪವಿಲ್ಲವೇ ಎಂದು ಹೇಳುತ್ತಿದ್ದಂತೆ ಕೆಲ ಕಾಲ ಉದ್ವಿಗ್ನದ ವಾತಾವರಣ ಸೃಷ್ಟಿಯಾಯಿತು.
ಇದಕ್ಕೂ ಮೊದಲು ನಗರದ ಈಶ್ವರಲಿಂಗ ಮೈದಾನದಿಂದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿ ಎಂ.ಎಂ.ಬಂಗ್ಲೆ ಎದುರು ಮಾನವ ಸರಪಳಿ ನಿರ್ಮಿಸಲಾಯಿತು.