ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ವಕ್ಫ್-ಸಾಮರಸ್ಯಕ್ಕೆ ಕೊಳ್ಳಿ; ಎಚ್ಚೆತ್ತುಕೊಳ್ಳಲಿ ಸರ್ಕಾರ

12:05 AM Oct 31, 2024 IST | Samyukta Karnataka

ವಕ್ಫ್ ಮಂಡಳಿ ನಡೆ ರಾಜ್ಯಾದ್ಯಂತ ಆಕ್ರೋಶ ಹಾಗೂ ವಿವಾದ ಸೃಷ್ಟಿಸಿದೆ. ರೈತರು ತಲೆ ತಲಾಂತರಗಳಿಂದ ಉಳಿಮೆ ಮಾಡಿಕೊಂಡು ಬರುತ್ತಿರುವ ಭೂಮಿಯನ್ನು ಅವರ ಪಹಣಿ ಪತ್ರಿಕೆಯಲ್ಲಿ ವಕ್ಫ್ ಆಸ್ತಿ ಎಂದು ನೋಂದಾಯಿಸಿರುವುದು, ಅಲ್ಲದೇ ರಾಜ್ಯಾದ್ಯಂತ ನೂರಾರು ರೈತರಿಗೆ ಕಂದಾಯ ಇಲಾಖೆಯಿಂದ ಇದು ವಕ್ಫ್ ಜಮೀನು ಎಂದು ನೋಟಿಸ್ ನೀಡಿರುವುದು ಆತಂಕ, ಆಘಾತ, ಸಂಘರ್ಷಕ್ಕೂ ಕಾರಣವಾಗಿದೆ.
ಶತಮಾನಗಳಿಂದ ತಮ್ಮ ಹೆಸರಿಗೇ ಇದ್ದ, ತಾವೇ ಉತ್ತು ಬಿತ್ತು ವಾಸ ಮಾಡುತ್ತಿದ್ದ ಭೂಮಿ ಈಗ ಏಕಾಏಕಿ ವಕ್ಫ್ ಮಂಡಳಿ ಆಸ್ತಿ ಎಂದು ಘೋಷಿಸಿದರೆ ಪಾಪ, ಆ ಬಡಪಾಯಿ ಸ್ಥಿತಿ ಇನ್ನೇನಾದೀತು?
ವಿಜಯಪುರ, ಧಾರವಾಡ, ಯಾದಗಿರಿ, ಚಿತ್ರದುರ್ಗ, ಕೋಲಾರ ಇವು ಈಗ ಬೆಳಕಿಗೆ ಬಂದಿರುವ ಭೂ ಸಮಸ್ಯೆಯ ಜಿಲ್ಲೆಗಳು. ಆದರೆ ಜನರಿಗೇ ಗೊತ್ತಿಲ್ಲದೇ ಅವರ ಪಹಣಿ ಪತ್ರಿಕೆಯಲ್ಲಿ ವಕ್ಫ್ ಆಸ್ತಿ ಎಂದು ಸೇರ್ಪಡೆಯಾಗಿರುವುದು ರೈತರು ಅಥವಾ ಆಸ್ತಿ ಮಾಲೀಕ ಮತ್ತೆ ಪಹಣಿ ಪರಿಶೀಲಿಸಿದಾಗಲೇ.
ಆಗ ಬಹುಶಃ ರಾಜ್ಯಾದ್ಯಂತ ಸಾಕಷ್ಟು ಹೋರಾಟ-ಸಂಘರ್ಷ-ತಗಾದೆ ಉಂಟಾದೀತು. ವಕ್ಫ್ ಅದಾಲತ್ ನಡೆಸುವ ರಾಜ್ಯ ವಕ್ಫ್ ಸಚಿವರ ಒಂದು ತಿಂಗಳ ಅಭಿಯಾನದ ನಂತರ ನಡೆದ ಈ ಬೆಳವಣಿಗೆ ಹುನ್ನಾರವಾಗಿ ಕಂಡರೆ ಸಂಶಯ ಪಡಬೇಕಾಗಿಲ್ಲ.
ಸ್ವತಃ ಜಿಲ್ಲಾಧಿಕಾರಿಯೊಬ್ಬರು ಸಚಿವರ ನಿರ್ದೇಶನದಂತೆ ನೋಟಿಸ್ ನೀಡಿ ಪಹಣಿಯಲ್ಲಿ ಸೇರ್ಪಡೆ ಮಾಡಿದ್ದೇವೆ. ವಕ್ಫ್ ಮಂಡಳಿ ಯಾವುದು ತನ್ನ ಆಸ್ತಿ ಎಂದು ಘೋಷಿಸಿತೋ ಅದನ್ನು ಪಹಣಿಯಲ್ಲಿ ಸೇರಿಸುವಂತೆ ನಿರ್ದೇಶನವೂ ಇದೆ ಎಂದು ಹೇಳುವುದರ ಜೊತೆಗೆ, ವಕ್ಫ್ ಆಸ್ತಿಯಲ್ಲ, ಅಲ್ಲಾನ ಭೂಮಿ, ಅಲ್ಲಾನಿಗಾಗಿ ನಾವು ಮರಳಿ ಪಡೆಯುತ್ತೇವೆ ಎಂದು ಸ್ವತಃ ಮಂತ್ರಿ ಜಮೀರ್ ಅಹಮದ್ ಹೇಳಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸಿತೇ ವಿನಾ ಶಮನಗೊಳಿಸಿಲ್ಲ.
ಹಾಗಾಗಿ ವರ್ಗ, ಜಾತಿ, ಮತ ಸಂಘರ್ಷಕ್ಕೆ ಈ ವಿವಾದ ಎಳೆದೊಯ್ಯುವ ಎಲ್ಲ ಸಾಧ್ಯತೆ, ಜೊತೆಗೆ ಸಾಮರಸ್ಯ ಕದಡುವ ಆತಂಕ ಉಂಟಾಗಿದೆ.
ಬೇಕಿತ್ತಾ ಈ ಎಡಬಿಡಂಗಿ ಕೆಲಸ? ಈ ವೇಳೆಯಲ್ಲಿ ಸರ್ಕಾರ ಏಕೆ ಮೈಮೇಲೆ ಎಳೆದುಕೊಂಡಿತು? ಎಂದು ಸ್ವತಃ ರಾಜ್ಯ ಮಂತ್ರಿ ಮಹೋದಯರನ್ನು ಆತ್ಮೀಯವಾಗಿ ಪ್ರಶ್ನಿಸಿ. ಛೆ ದೊಡ್ಡ ತಲೆನೋವಾಗಿಬಿಟ್ಟಿದೆ' ಎಂದು ಸಮರ್ಥಿಸಿಕೊಳ್ಳಲು ಉಪಾಯ ಹುಡುಕುತ್ತ, ಡ್ಯಾಮೇಜ್ ಕಂಟ್ರೋಲ್‌ಗೆ ತಡಕಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಎಲ್ಲ ಕಾಂಗ್ರೆಸ್ ಜನಪ್ರತಿನಿಧಿಗಳು ಅಧಿಕಾರಿಗಳೂ ಕೂಡ ಈ ವಕ್ಫ್ ಆಸ್ತಿ ಹುಟ್ಟಿಸಿರುವ ಗಂಡಾಂತರದಿಂದ ಬಚಾವಾಗುವುದು ಹೇಗೆ ಎನ್ನುವ ತೊಡಕಿನಲ್ಲಿ ಮೌನಕ್ಕೆ ಶರಣಾದಂತಿದೆ. ಅನಿವಾರ್ಯವಾಗಿ ಇದನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದ ರಾಜ್ಯ ಮಂತ್ರಿಗಳು, ಮುಖ್ಯಮಂತ್ರಿಗಳು ಕೂಡ ನೋಟಿಸ್ ವಾಪಸ್ ಪಡೆಯುತ್ತೇವೆ; ರೈತರ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವುದಿಲ್ಲ; ಅವರನ್ನು ಒಕ್ಕಲೆಬ್ಬಿಸುವುದಿಲ್ಲ; ವಕ್ಫ್ ಮಂಡಳಿ ಹಾಗೂ ನೋಟಿಸ್ ಪಡೆದ ವ್ಯಕ್ತಿಯ ಅಹವಾಲು ಆಲಿಸಿ ನ್ಯಾಯ ಒದಗಿಸುತ್ತೇವೆ ಎಂದೆಲ್ಲ ಸಬೂಬು ಹೇಳುತ್ತಿದ್ದಾರೆ. ಆದರೆ ಈ ಆತಂಕ ಮತ್ತು ಜಂಜಾಟದಲ್ಲಿ ರೈತರು-ಜನ ಏಕೆ ಒದ್ದಾಡಬೇಕು? ಜನರ ಸಮಯ, ಶ್ರಮ ಎಲ್ಲ ವ್ಯರ್ಥವಲ್ಲವೇ ಎಂದರೆ ಉತ್ತರವಿಲ್ಲ. ಈಗೇನೋ ಟಾಸ್ಕ್‌ಫೋರ್ಸ್ ರಚಿಸುವ ಮಾತನಾಡುತ್ತಿದ್ದಾರೆ. ಇದೆಲ್ಲ ಬೇಕಿತ್ತೇ ಎಂದು ಕೇಳಿದರೆ, ಏನೋ ಬೆಂಕಿ ಹತ್ತಿಕೊಂಡಿದೆ, ಆರಿಸಲೇಬೇಕಲ್ಲ ಎಂಬ ಉತ್ತರ! ನಿಜ. ಪ್ರತಿಪಕ್ಷಗಳಿಗೆ ದೊಡ್ಡ ಶಸ್ತ್ರ ಸಿಕ್ಕಂತಾಯಿತು. ಶಸ್ತ್ರ ಕೊಟ್ಟಿದ್ದೂ ಸರ್ಕಾರ, ಈಗ ಬಡಿಸಿಕೊಳ್ಳುವುದೂ ಸರ್ಕಾರವೇ. ಸರ್ಕಾರದ ಗಮನಕ್ಕೆ ಬರುವ ಮೊದಲೇ ಶಸ್ತ್ರ ಹಿಡಿದು ಬಿಜೆಪಿ, ನೊಂದವರ, ಆತಂಕಗೊಂಡವರ ಮನೆ ಬಾಗಿಲು ಬಡಿದಿದೆ. ತಮಾಷೆ ಎಂದರೆ ಈ ವಕ್ಫ್ ಸಮಸ್ಯೆಯನ್ನು ಕೆದಕಿ ತೆಗೆದವರು ಶಾಸಕ ಬಸನಗೌಡ ಪಾಟೀಲ ಯತ್ನಾಳ. ಯತ್ನಾಳ ಪಾಟೀಲರು ಮತ್ತು ಬಿಜೆಪಿ ನಾಯಕರ ನಡುವಿನ ಭಿನ್ನಮತದಿಂದ ವಿಷಯ ಎಲ್ಲೋ ಕಳೆದು ಹೋಗಲಿಲ್ಲ ಎಂಬುದು ಇಲ್ಲಿ ಮುಖ್ಯ. ಯತ್ನಾಳ ಪಾಟೀಲರಿಗೆ ಮಾತ್ರ ದೊರೆಯುವ ಪ್ರಚಾರವನ್ನು ಕುಗ್ಗಿಸಿ ತಾನೂ ಗಿಟ್ಟಿಸಿಕೊಳ್ಳಲು ಬಿಜೆಪಿಯ ಪ್ರತಿಗುಂಪು ಕಾರ್ಯತಂತ್ರಕ್ಕೆ ಇಳಿದದ್ದರಿಂದ ಒಟ್ಟಾರೆ ಜನರಿಗೆ ವಿಷಯ ಗೊತ್ತಾಗಿ ಬಿಸಿ ತಟ್ಟುವಂತಾಯಿತು. ಜನರಿಗೆ ತಮ್ಮ ಭೂಮಿ ಕಳೆದುಕೊಳ್ಳುತ್ತಿರುವುದು, ಪಹಣಿಯಲ್ಲಿ ಬದಲಾವಣೆಯಾಗಿರುವುದು, ತಮ್ಮ ಮಠದ ಆಸ್ತಿ ವಕ್ಫ್ ಪಾಲಾಗುತ್ತಿರುವುದು ಬೆಳಕಿಗೆ ಬಂತೆನ್ನಿ. ಏನೇ ಇರಲಿ. ಯಾಕೆ ಎಳೆದುಕೊಂಡಿತು ಸರ್ಕಾರ ಈ ವಿವಾದವನ್ನು? ಇದು ದೇಶಾದ್ಯಂತದ ಹಿಡನ್ ಅಜೆಂಡಾನಾ? ಹೈಕಮಾಂಡ್ ಅಣತಿಯೇ? ಅಥವಾ ತುಷ್ಟೀಕರಣವೇ? ಸಾಕಷ್ಟು ಅನುಮಾನಕ್ಕೆ ಕಾರಣವಿದೆ. ದೇಶದಲ್ಲಿರುವ ವಕ್ಫ್ ಮಂಡಳಿಯ ಕಾರ್ಯವೈಖರಿ, ಅಲ್ಲಿಯ ಭ್ರಷ್ಟಾಚಾರ, ಆಸ್ತಿ ಕಬಳಿಕೆ ಇತ್ಯಾದಿಗಳನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಸಂಸತ್ತಿನ ಮುಂದೆ ಮಂಡಿಸಿರುವ ಮಸೂದೆ ಇದಕ್ಕೆಲ್ಲ ಕಾರಣ. ಸಂಸತ್ತಿನಲ್ಲಿ ಈ ವಕ್ಫ್ ಮಸೂದೆಯ ಕುರಿತು ಸಂಸದೀಯ ಸಮಿತಿಯನ್ನು ರಚಿಸಲಾಗಿದೆ. ಈ ಸಂಸದೀಯ ಸಮಿತಿ ಸಭೆ ಎರಡು ಸಾರೆ ಇಂಡಿಯಾ ಒಕ್ಕೂಟದ ಸದಸ್ಯರು ಬಹಿಷ್ಕರಿಸಿದ್ದಕ್ಕೆ ಸಾಕ್ಷಿಯಾಗಿದೆ. ವಿಜಯಪುರದ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ನಮೂದಾಗಿದೆ ಎಂದು ಬಯಲಿಗೆ ಬಂದ ದಿನವೇ ದೆಹಲಿಯ ಸಂಸತ್ ಭವನದಲ್ಲಿ ಈ ಮಸೂದೆಯ ಬಗ್ಗೆ ಸಂಸದೀಯ ಸಮಿತಿ ಸಭೆ ಸೇರಿತ್ತು. ಅಲ್ಲಿಯೇ ಅಧ್ಯಕ್ಷರತ್ತ ಗಾಜಿನ ಬಾಟಲಿ ಒಗೆದು, ತೂರುವ, ಕೈ ಕೈ ಮಿಲಾಯಿಸುವ ಮಟ್ಟಿಗೆ ಜಟಾಪಟಿ ನಡೆದಿತ್ತು. ಕೇಂದ್ರ ಸರ್ಕಾರ ಮಂಡಿಸಿರುವ ಮಸೂದೆ ಸಂಸದೀಯ ಪ್ರಜಾಪ್ರಭುತ್ವಕ್ಕನುಗುಣವಾಗಿ ಸಮಿತಿಯಲ್ಲಿ ಚರ್ಚೆಯಾಗಬೇಕು. ಎಲ್ಲ ಪಕ್ಷಗಳ ಪ್ರತಿನಿಧಿಗಳೂ ಅಲ್ಲಿದ್ದರು. ಆದರೆ ಚರ್ಚೆಗೆ ಅವಕಾಶ ಕೊಡದೇ ಸಂಸದೀಯ ಸಮಿತಿ ರಚನೆಯನ್ನೇ ಧಿಕ್ಕರಿಸುವ ರೀತಿ ಅಸಹಕಾರ ತೋರುವ ವಿರೋಧ ಪಕ್ಷಗಳ ನಾಯಕರ ವರ್ತನೆ ಎಷ್ಟರ ಮಟ್ಟಿಗೆ ಪ್ರಜಾಸತ್ತಾತ್ಮಕ? ದೇಶದ ೨೮ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ೩೨ ವಕ್ಫ್ ಮಂಡಳಿಗಳಿವೆ. ಬಹುತೇಕ ಎಲ್ಲವೂ ಭ್ರಷ್ಟಾಚಾರ, ಹಗರಣ, ಸ್ವಜನಪಕ್ಷಪಾತ, ಅಕ್ರಮಗಳಿಂದಲೇ ತುಂಬಿವೆ. ವಕ್ಫ್ ಮಂಡಳಿಯ ರಚನೆ, ಅದರ ಉದ್ದೇಶ, ಅದರ ವ್ಯಾಪ್ತಿ ಮತ್ತು ಅಧಿಕಾರ ಎಲ್ಲವೂ ಉದಾತ್ತವಾದದ್ದು ಮತ್ತು ಅಗತ್ಯವಾದದ್ದು. ಆದರೆ ಈ ಮಂಡಳಿಗಳು ನಡೆದುಕೊಂಡ ರೀತಿ, ಇದಕ್ಕೆ ಮತಬ್ಯಾಂಕಿನ ಜೋಡಣೆ, ಆ ಕಾರಣಕ್ಕೆ ಹತ್ತು ಹಲವು ಅಧಿಕಾರ ಮತ್ತು ಕುಮ್ಮಕ್ಕು ಎಲ್ಲವನ್ನೂ ನೀಡುತ್ತಲೇ ಬಂದಿವೆ. ೧೯೯೫ರಲ್ಲಿ ವಕ್ಫ್ ಕಾಯ್ದೆಯನ್ನು ಜಾರಿಗೊಳಿಸಲಾಯಿತು. ಅದಕ್ಕೆ ೨೦೧೩ರಲ್ಲಿ ತಿದ್ದುಪಡಿ ತರಲಾಯಿತು. ವಕ್ಫ್ ಆಸ್ತಿ ಎಂದರೆ ದೇವರಿಗೆ ಸೇರಿದ್ದು. ಮುಸ್ಲಿಮರು ಧಾರ್ಮಿಕ, ಶೈಕ್ಷಣಿಕ ಮತ್ತು ದಾನದ ಉದ್ದೇಶಕ್ಕಾಗಿ ದೇವರಿಗೆ ಸಮರ್ಪಣೆ ಮಾಡಿದ ಆಸ್ತಿ ಇದು. ಇಸ್ಲಾಂ ಪ್ರಕಾರ ಒಮ್ಮೆ ಅಲ್ಲಾನಿಗೆ ಸಮರ್ಪಣೆಯಾದ ಆಸ್ತಿ ಯಾವತ್ತಿಗೂ ಬದಲಾಗಲ್ಲ. ಅದರ ನಿರ್ವಹಣೆ ಆಯಾ ರಾಜ್ಯಗಳ ವಕ್ಫ್ ಮಂಡಳಿಗಳಿಗೆ ಸೇರಿದ್ದು. ವಕ್ಫ್ ಆಸ್ತಿಗಳ ಮೂಲಕ ಬರುವ ಆದಾಯವನ್ನು ಮುಸ್ಲಿಮರ ಸಮಸ್ಯೆಗಳ ಪರಿಹಾರಕ್ಕೆ, ಬಡವರ ಕಲ್ಯಾಣಕ್ಕೆ ಮತ್ತು ಧಾರ್ಮಿಕ ಕಾರಣಗಳಿಗೆ ಬಳಸಬೇಕು ಎಂದಿದೆ. ಆದರೆ ಈ ಉದ್ದೇಶ ಈಡೇರಿದೆಯೇ? ಇದು ಈಗ ಬಂದಿರುವ ಪ್ರಶ್ನೆ. ಎಲ್ಲ ರಾಜ್ಯಗಳ ವಕ್ಫ್ ಬೋರ್ಡ್‌ಗಳಲ್ಲೂ ದುರಾಡಳಿತದ ವಾಸನೆಯೇ. ವಕ್ಫ್ ಅಕ್ರಮಗಳ ಬಗ್ಗೆ ಕರ್ನಾಟಕದಲ್ಲಿಯೇ ತನಿಖೆ ನಡೆಯಿತಲ್ಲ? ರಾಜ್ಯದಲ್ಲಿ ತನಿಖೆ ನಡೆಸಿದ ಅನ್ವರ್ ಮಾನಿಪ್ಪಾಡಿ ಸಮಿತಿ ವರದಿಯಲ್ಲಿ ೨೯ ಸಾವಿರ ವಕ್ಫ್ ಭೂಮಿಯನ್ನು ಮುಸ್ಲಿಂ ರಾಜಕಾರಣಿಗಳೇ ಕಬಳಿಸಿದ್ದು ಬೆಳಕಿಗೆ ಬಂದಿದೆ. ಹನ್ನೆರಡು ವರ್ಷಗಳ ಹಿಂದೆ ಈ ಹಗರಣದ ಮೊತ್ತ ೨.೩ ಲಕ್ಷ ಕೋಟಿ! ಪ್ರತಿ ರಾಜ್ಯದಲ್ಲೂ ಇಂತಹ ಹಗರಣ ನಡೆದಿದೆ. ಈಗ ಜಮೀರ್ ಅಹಮದ್ ಇದು ದೇವರ ಆಸ್ತಿ ಎಂದು ಹೇಳುತ್ತಾರಲ್ಲ, ಮೊದಲು ಅವರೂ ಸೇರಿದಂತೆ ಕಾಂಗ್ರೆಸ್ಸಿನ ನಾಯಕರೆಲ್ಲರೂ ಈ ವಕ್ಫ್ ಆಸ್ತಿಯನ್ನು ಮರಳಿಸಲಿ. ಆ ನಂತರ ಈಗ ನೋಟಿಸ್ ಪಡೆದಿರುವ ಜಮೀನುಗಳ ವಿವರ ಪಡೆಯಲಿ ಅಲ್ಲವೇ? ಭಾವನಾತ್ಮಕವಾಗಿ ಜನರನ್ನು ಕೆರಳಿಸಿ, ಈ ವಿವಾದದಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿರುವವರು ಅದೇ ಮುಸ್ಲಿಂ ರಾಜಕಾರಣಿಗಳು. ಹಾನಿಯಾಗುತ್ತಿರುವುದು ಸಾಮಾಜಿಕ ಸಾಮರಸ್ಯ. ೨೦೦೬ರಲ್ಲಿ ಮನಮೋಹನ ಸಿಂಗ್ ಸರ್ಕಾರ ಮುಸ್ಲೀಮರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ಗತಿ ಅಧ್ಯಯನಕ್ಕೆ ಜಸ್ಟೀಸ್ ಸಾಚಾರ್ ನೇತೃತ್ವದ ಸಮಿತಿ ರಚಿಸಿತ್ತು. ದೇಶಾದ್ಯಂತ ಅಧ್ಯಯನ ನಡೆಸಿ ೨೦೦೭ರಲ್ಲಿ ಸಾಚಾರ್ ಸಮಿತಿ ವರದಿ ಕೊಟ್ಟಿತ್ತು. ಅದರಲ್ಲೇನಿದೆ ಗೊತ್ತಾ? ದೇಶದ ಮುಸ್ಲೀಮರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಅತ್ಯಂತ ಹೀನಾಯವಾಗಿದೆ. ವಕ್ಫ್ ಬೋರ್ಡ್ ಆಡಳಿತ ಮಂಡಳಿಗಳೇ ಇದಕ್ಕೆ ಕಾರಣ. ಮೊದಲು ಈ ಮಂಡಳಿಗಳ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಈ ವಕ್ಫ್ ಬೋರ್ಡ್ಗಳ ಆಡಳಿತ ಮಂಡಳಿಗಳಲ್ಲಿ ಮುಸ್ಲೀಮೇತರ ಎಕ್ಸ್‌ಪರ್ಟ್‌ಗಳಿರಬೇಕು. ಸರ್ಕಾರಿ ಹಿರಿಯ ಅಧಿಕಾರಿಗಳಿಗೆ ವಕ್ಫ್ ಬೋರ್ಡ್‌ಗಳ ಸ್ವತಂತ್ರ ನಿರ್ವಹಣೆಯ ಅಧಿಕಾರ ಕೊಡಿ. ಬೋರ್ಡ್‌ನ ಹಣಕಾಸು ವಿವರಗಳ ಆಡಿಟ್ ನಡೆಯಬೇಕು. ವಕ್ಫ್ ಆಸ್ತಿ ವಿವಾದಗಳು ಕೋರ್ಟಿನಲ್ಲಿ ಇತ್ಯರ್ಥವಾಗಬೇಕು. ವಕ್ಫ್ ಮಂಡಳಿಯಲ್ಲ ಅಲ್ಲ!! ದೇಶದ ೩೨ ವಕ್ಫ್ ಮಂಡಳಿಯಲ್ಲಿ ಒಬ್ಬರೇ ಒಬ್ಬ ಮಹಿಳಾ ಪ್ರತಿನಿಧಿ ಇಲ್ಲ. ಏಕೆ ಇಲ್ಲ? ಅವಕಾಶ ಕೊಡಿ ಎಂದು ಶಿಫಾರಸು ಮಾಡಿದ್ದಾರೆ. ಸಾಚಾರ್ ಸಮಿತಿ ಎಷ್ಟು ನಿಖರವಾಗಿ ವರದಿ ಮಾಡಿತ್ತೋ ಅದು ಮುಸ್ಲಿಂ ನಾಯಕರಿಗೆ ಮತ್ತು ರಾಜಕಾರಣಿಗಳಿಗೆ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಯಿತು. ಈ ಕಮಿಟಿಯ ವರದಿಯನ್ನು ತಣ್ಣಗೆ ಕಪಾಟಿನಲ್ಲಿ ಭದ್ರಪಡಿಸಿ ಇಡಲಾಯಿತು. ೧೯೯೫ರಲ್ಲಿ ಸರ್ಕಾರ ವಕ್ಫ್ ಕಾನೂನಿನ ಮೂಲಕ ಯಾರದ್ದೇ ಆಸ್ತಿಯಾಗಿದ್ದರೂ ಪರವಾಗಿಲ್ಲ, ಅದು ವಕ್ಫ್ ಆಸ್ತಿ ಎಂದು ದಾಖಲೆಯಲ್ಲಿದ್ದರೂ ಕೂಡ ನೋಂದಾಯಿಸಿಕೊಳ್ಳಬಹುದು ಎಂಬ ಅಧಿಕಾರವನ್ನು ಕೊಟ್ಟು ಬಿಟ್ಟಿತು. ಏಕೆಂದರೆ ಈ ಒಂದು ಕಾನೂನನ್ನು ಯಾರೂ ಕೋರ್ಟಿನಲ್ಲಿ ಪ್ರಶ್ನಿಸುವಂತಿಲ್ಲ. ಈಗ ರೈತರಿಗೆ ನೊಟೀಸ್ ಬಂದಿರುವುದೂ ಕೂಡ ಇದೇ ೧೯೯೫ರ ಕಾನೂನಿನ ಪ್ರಕಾರವೇ ! ಈಗ ಕೇಂದ್ರ ಸರ್ಕಾರ ಮಂಡಿಸಿರುವ ವಕ್ಫ್ ಮಸೂದೆಯಲ್ಲಿ ಸಾಕಷ್ಟು ಮಾರ್ಪಡಿಸಲಾಗಿದೆ. ವಕ್ಫ್ ಮಂಡಳಿಯಲ್ಲಿ, ಆಸ್ತಿಯಲ್ಲಿ ಮಹಿಳೆಯರಿಗೂ ಪಾಲಿರಬೇಕು. ಅದು ಪಾರದರ್ಶಕವಾಗಿರಬೇಕು. ಮಂಡಳಿಯ ಪರಮಾಧಿಕಾರ ಕಡಿತಗೊಳಿಸುವುದು ಇತ್ಯಾದಿ ಸೇರಿದಂತೆ ಕೇಂದ್ರ ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿಗಳ ಸಂಯೋಜನೆ ಇತ್ಯಾದಿಗಳನ್ನು ಮಾರ್ಪಡಿಸಲಾಗಿದೆ. ಇದೇ ಸಮಿತಿ ಈಗ ಯಾವ ಧರ್ಮೀಯರಿಗೂ ಇಲ್ಲದ ಪ್ರತ್ಯೇಕ ಮಂಡಳಿ (ವಕ್ಫ್ ಬೋರ್ಡ್) ದೇಶದಲ್ಲಿ ಬೇಕೇ? ಎನ್ನುವ ಪ್ರಶ್ನೆಯನ್ನೂ ಕೈಗೆತ್ತಿಕೊಂಡಿದೆ. ನೋಡಿ. ರಾಜ್ಯದ ರೈತರಿಗೆ ನೋಟಿಸ್ ಕೊಟ್ಟು ಆಸ್ತಿಯನ್ನು ನೋಂದಾಯಿಸಿಕೊಳ್ಳುವುದರ ಹಿಂದೆ ಬರಲಿರುವ ಕಾಯ್ದೆಯ ಭಯವಿದೆ. ಈಗಲೇ ನೋಂದಾಯಿಸಿಕೊಂಡರೆ ಇವೆಲ್ಲ ವಕ್ಫ್ ಆಸ್ತಿ ಎಂದು ಘೋಷಿಸಬಹುದಲ್ಲ ಎನ್ನುವ ಹುನ್ನಾರ ಇರುವುದನ್ನು ಕಂಡವರಿದ್ದಾರೆ. ವಕ್ಫ್ ಅದಾಲತ್ ನಡೆಸಿ, ನೋಟಿಸ್ ನೀಡಿದ್ದರ ಪರಿಣಾಮ ಏನೆಂದರೆನಿಮ್ಮದೇ ಕೇಂದ್ರ ಸರ್ಕಾರ ಮಾಡಿದ್ದ ಸಾಚಾರ್ ಕಮಿಟಿ ವರದಿ ಅನುಷ್ಠಾನಗೊಳಿಸಿ' ಎಂದು ಇಡೀ ದೇಶ ಆಗ್ರಹಿಸುವ ಸನ್ನಿವೇಶ ಸೃಷ್ಟಿಯಾದದ್ದು. ಹಾಗೇ ಸಂಸದೀಯ ಮಂಡಳಿಯನ್ನು ಬಹಿಷ್ಕಾರ ಹಾಕಿರುವುದರಿಂದ ಜನತೆಗೆ ತಾವೇ ತಮ್ಮ ಅವಸ್ಥೆಯನ್ನು ತೆರೆದಿಟ್ಟಂತಾಗಿದೆ. ನೋಟಿಸ್ ಪಡೆದ ರೈತರಲ್ಲಿ ಮುಸ್ಲಿಮರೂ ಇದ್ದಾರೆ. ದಲಿತರೂ ಇದ್ದಾರೆ. ಮುಂದುವರಿದ ಸಮಾಜದವರೂ ಇದ್ದಾರೆ. ಇವರೆಲ್ಲ ಸಹಬಾಳ್ವೆಯಿಂದ ಬದುಕುತ್ತಿದ್ದಾರೆ. ಈಗ ವಕ್ಫ್ ನೋಟಿಸ್ ಗ್ರಾಮ ಗ್ರಾಮಗಳಲ್ಲಿ, ಊರು ಊರುಗಳಲ್ಲಿ ಸಂಘರ್ಷಕ್ಕೆ ಎಡೆ ಮಾಡುವ ಎಲ್ಲ ಸಾಧ್ಯತೆ, ಭಯಗಳನ್ನು ಮೂಡಿಸಿದೆ. ಇದನ್ನು ಸರ್ಕಾರ ಗಮನಿಸಿಲ್ಲವೇಕೆ? ಮೊದಲು ಈ ವಿವಾದ ಬಗೆಹರಿಸಿ, ಸಾಮರಸ್ಯದ ಬದುಕಿಗೆ ಹಾದಿ ಮಾಡಿಕೊಡುವಂತಾಗಲಿ ಅಲ್ಲವೇ?

Next Article