ವಕ್ಫ್ ಹೆಸರಲ್ಲಿ ಸ್ಮಶಾನದ ಜಾಗ
ರಬಕವಿ-ಬನಹಟ್ಟಿ: ಕೆಲ ರೈತರ ಜಮೀನಿನ ಪಹಣಿಯಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಹೆಸರು ಎಂದು ನಮೂದಾಗಿರುವ ವಿಷಯ ತಾಲೂಕಿನಾದ್ಯಂತ ಪ್ರತಿಧ್ವನಿಸಿದೆ. ಹೊಸೂರಿನ ಮಸಣವಾಟ(ಸ್ಮಶಾನ)ದ ಪಹಣಿ ಉತಾರೆಯಲ್ಲಿ ಖಬರಸ್ಥಾನ ಸುನ್ನಿ ವಕ್ಫ್ ಆಸ್ತಿ ಹೆಸರು ದಾಖಲಾಗಿದೆ.
ಪಟ್ಟಣದ ಸರ್ವೆ ನಂ.64 ರಲ್ಲಿರುವ 1.39 ಗುಂಟೆ ಜಾಗದ ಪಹಣಿಯು 2020 ರ ಅ.13 ರಿಂದ ಖಬರಸ್ಥಾನ ಸುನ್ನಿ ವಕ್ಫ್ ಹೆಸರಿನಲ್ಲಿ ನಮೂದಾಗಿದೆ. ಪಹಣಿ ಚಿತ್ರ ವ್ಯಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ.
ನಿರ್ವಹಣೆ : ಈ ಮೊದಲು ಸಣ್ಣವ್ವ ಕೋಲಾರ ಎಂಬಾತಳು ಸರ್ಕಾರಕ್ಕೆ ನೀಡಿದರನ್ವಯ 1.39 ಎಕರೆಯಷ್ಟು ಪ್ರದೇಶದಲ್ಲಿ 1 ಎಕರೆ ಮಸಣವಾಟ(ಸ್ಮಶಾನ)ವಾಗಿ ಹಲವಾರು ವರ್ಷಗಳಿಂದ ರುದ್ರಭೂಮಿಯಾಗಿ ಈಗಲೂ ನಿರ್ವಹಣೆಯಾಗುತ್ತಿದೆ. ಉಳಿದ 39 ಗುಂಟೆಯಷ್ಟು ಜಾಗೆಯು ಖಬರಸ್ಥಾನ ನಿರ್ವಹಿಸುತ್ತಿದೆ. ಇದೀಗ ಎಲ್ಲ 1.39 ಎಕರೆಯಷ್ಟು ಜಾಗೆ ಖಬರಸ್ಥಾನ ಸುನ್ನಿ ವಕ್ಫ್ ಎಂದಾಗಿರುವ ದಾಖಲೆ ಜನರನ್ನು ಆಶ್ಚರ್ಯಗೊಳಿಸಿದೆ.
ಸ್ಮಶಾನದ ಮೇಲೂ ವಕ್ಪ್ ಕಣ್ಣು: ವಕ್ಫ್ ಕಬಂಧಬಾಹು ರಬಕವಿ-ಬನಹಟ್ಟಿಗೂ ವಕ್ಕರಿಸಿದೆ. ಹೊಸೂರಿನ ಹಿಂದೂಗಳ ಸ್ಮಶಾನದ ಮೇಲೂ ಅದರ ಕಣ್ಣು ಬಿದ್ದಿದೆ. ರೈತರ ಒಡೆತನದಲ್ಲಿರುವ ಭೂಮಿಗೆ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಅದು ನಮ್ಮ ವಶದಲ್ಲಿತ್ತು ಎಂದು ತಗಾದೆ ತೆಗೆಯುತ್ತಿದ್ದಾರೆಂದು ಆರೋಪಿಸಿರುವ ಬಿಜೆಪಿಯ ತೇರದಾಳ ಶಾಸಕ ಸಿದ್ದು ಸವದಿ ರೈತರು ಕೂಡಲೇ ಎಚ್ಛೆತ್ತುಕೊಂಡು ತಾಲೂಕು ಕಚೇರಿಗೆ ತೆರಳಿ ತಮ್ಮ ಭೂ ದಾಖಲೆ ಪರಿಶೀಲಿಸಿಕೊಳ್ಳಬೇಕೆಂದು ಸಲಹೆ ನೀಡಿದರು.