ವಲಯವಾರು ಉದ್ಯೋಗ ಮೇಳ
ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ `ಯುವ ಸಮೃದ್ಧಿ ಸಮ್ಮೇಳನ'ದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಆಗಮಿಸಿದ್ದರು. ಹೆಸರಾಂತ ವಿದೇಶಿ ಕಂಪನಿಗಳು ಸೇರಿದಂತೆ ಸುಮಾರು ೫೮೦ಕ್ಕೂ ಹೆಚ್ಚು ಕಂಪನಿಗಳು ಮೇಳದಲ್ಲಿ ಪಾಲ್ಗೊಂಡಿದ್ದವು. ಉದ್ಯೋಗಕ್ಕಾಗಿ ಆಗಮಿಸಿದ ಮೊದಲ ದಿನವೇ ೭೫ ಸಾವಿರ ವಿದ್ಯಾರ್ಥಿಗಳು ಹೆಸರು ನೋಂದಣಿ ಮಾಡಿಸಿ ದಾಖಲೆ ನಿರ್ಮಿಸಿದ್ದಾರೆ.
ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರದಿಂದ ಪ್ರತಿ ವರ್ಷ ಇನ್ನೂ ಮುಂದೆ ಕರ್ನಾಟಕದ ನಾಲ್ಕು ವಲಯಗಳಲ್ಲಿ ಉದ್ಯೋಗ ಮೇಳ ನಡೆಸಲಿದೆ. ನಿರುದ್ಯೋಗ ಸಮಸ್ಯೆ ನಿಯಂತ್ರಣಕ್ಕೆ ಮೈಸೂರು, ಕಲಬುರಗಿ, ಬೆಳಗಾವಿ, ಬೆಂಗಳೂರಿನ ಪ್ರಾದೇಶಿಕ ಕಚೇರಿಗಳಲ್ಲಿ ಪ್ರತಿ ವರ್ಷ ಉದ್ಯೋಗ ಮೇಳವನ್ನು ಸರ್ಕಾರ ಆರಂಭಿಸಲಿದೆ. ಅಲ್ಲದೇ ಉದ್ಯೋಗ ಸೃಷ್ಟಿ ಮತ್ತು ತರಬೇತಿಗಾಗಿ ಜಿಟಿಟಿಸಿ ಆರಂಭಿಸಲಾಗುವುದು ಎಂದು ಹೇಳಿದರು. ವೈದ್ಯಕೀಯ ಶಿಕ್ಷಣ ಸಚಿವರ ಶರಣಪ್ರಕಾಶ್ ಪಾಟೀಲ್ ಮಾತನಾಡಿ ಯುವಕರು ಮತ್ತು ಯುವತಿಯರಿಗೆ ಸ್ಥಳದಲ್ಲಿಯೇ ಉದ್ಯೋಗ ನೀಡುವ ಯುವಜನ ಸಮೃದ್ಧಿ ಸಮ್ಮೇಳನ ಕರ್ನಾಟಕದ ಮಟ್ಟಿಗೆ ಒಂದು ಚಾರಿತ್ರಿಕ ದಾಖಲೆಯಾಗಲಿದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.