For the best experience, open
https://m.samyuktakarnataka.in
on your mobile browser.

ವಾಣಿಜ್ಯ ವಾಹನಗಳಿಗೆ ಪ್ಯಾನಿಕ್ ಬಟನ್‌ಗೆ ವಿರೋಧ: ಪ್ರತಿಭಟನೆ

06:48 PM Jul 23, 2024 IST | Samyukta Karnataka
ವಾಣಿಜ್ಯ ವಾಹನಗಳಿಗೆ ಪ್ಯಾನಿಕ್ ಬಟನ್‌ಗೆ ವಿರೋಧ  ಪ್ರತಿಭಟನೆ

ಮಂಗಳೂರು: ಕೇಂದ್ರ ಸಾರಿಗೆ ಇಲಾಖೆಯ ಆದೇಶದಂತೆ ರಾಜ್ಯ ಸಾರಿಗೆ ಇಲಾಖೆಯು ವಾಣಿಜ್ಯ ವಾಹನಗಳಿಗೆ ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ಅಳವಡಿಕೆಗೆ ಆಗ್ರಹಿಸುತ್ತಿರುವುದು ಅವೈಜ್ಞಾನಿಕ ಎಂದು ವಿರೋಧಿಸಿ ಮಂಗಳವಾರ ಮಂಗಳೂರಿನ ಮಿನಿ ವಿಧಾನಸೌಧ ಮುಂಭಾಗ ದ.ಕ. ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿ ಕ್ಯಾಬ್ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.
ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿ ಕ್ಯಾಬ್ ಸಂಘದ ಅಧ್ಯಕ್ಷ ಆನಂದ ಕೆ. ಮಾತನಾಡಿ, ಈ ಸಾಧನಗಳ ಅಳವಡಿಕೆಯ ಆದೇಶ ಗೊಂದಲಮಯವಾಗಿದೆ. ಇದು ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕ ಮಾಲಕರ ಉದ್ಯೋಗದ ಮೇಲೆ ಹೆಚ್ಚುವರಿ ಹೊರೆಯಾಗಿದೆ. ರಾಜ್ಯ ಸರಕಾರ ಈ ಸಾಧನ ಅಳವಡಿಸಲು ೭,೫೯೦ ರೂ. ಗಳನ್ನುನಿಗದಿಪಡಿಸಿದ್ದರೂ ರಾಜ್ಯದ ಎಲ್ಲ ಸಾರಿಗೆ ಕಚೇರಿಗಳಲ್ಲಿ ೧೩,೦೦೦ ರೂ.ನಿಂದ ೧೫,೦೦೦ ರೂ.ವರೆಗೆ ಪಡೆಯಲಾಗುತ್ತಿದೆ. ಇದು ವಾಹನ ಚಾಲಕ ಮಾಲಕರಿಗೆ ಮಾಡುತ್ತಿರುವ ಅನ್ಯಾಯ ಎಂದರು.
ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಮಂಗಳೂರು ಆರ್‌ಟಿಒ ಶ್ರೀಧರ್ ಮಲ್ಲಾಡ್ ಮಾತನಾಡಿ, ಚಾಲಕರ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಸಂಘದ ಗೌರವಾಧ್ಯಕ್ಷ ದಿನೇಶ್ ಕುಂಪಲ, ಕಮಲಾಕ್ಷ, ಶರತ್, ಮನೋಜ್, ಬೋಜಣ್ಣ, ಶುಭಕರ ಶೆಟ್ಟಿ, ಉದಯ್ ಕುಮಾರ್, ಲೋಕೇಶ್ ಗೌಡ, ರೆಹಮಾನ್ ಕುಂಜತ್ತಬೈಲ್ ಸಹಿತ ನೂರಾರು ಸಂಖ್ಯೆಯ ಚಾಲಕರಿದ್ದರು.