ವಾಲ್ಮೀಕಿ ಸಂದೇಶ ಸಾರ್ವಕಾಲಿಕ ಸತ್ಯ
ಇಂದು ಮಹರ್ಷಿ ವಾಲ್ಮೀಕಿ ದಿನಾಚರಣೆ
ಭಾರತ ದೇಶ ಅತ್ಯಂತ ವೈವಿಧ್ಯತೆಯಿಂದ ಕೂಡಿದ ಪುಣ್ಯಭೂಮಿ. ಈ ಪುಣ್ಯಭೂಮಿಯ ಕಣಕಣಗಳಲ್ಲಿಯೂ ರಾಮಾಯಣದ ಅಧ್ಯಾತ್ಮಿಕ ಚಿಂತನೆ ಮೈದುಂಬಿರುತ್ತದೆ. ಸುಮಾರು ಏಳು ಸಾವಿರಗಳ ಹಿಂದೆ ಪ್ರಚೇತಸನೆಂಬ ಮಹರ್ಷಿ ಇದ್ದರು. ಅವರ ಮಗ ಋಕ್ಷ. ಋಕ್ಷ ಅನೇಕ ವರ್ಷಗಳ ಕಾಲ ತಪಸ್ಸು ಮಾಡುತ್ತಿರುವಾಗ ಅವನ ಮೇಲೆ ಹುತ್ತವು ಬೆಳೆಯಿತು. ವರುಣನು ಮಳೆಗೆರೆದು ಹುತ್ತವನ್ನು ಕರಗಿಸಿದನು. ಋಕ್ಷನು ಅದರಿಂದ ಹೊರಗೆ ಬಂದನು. ಹುತ್ತದಿಂದ ಹೊರ ಬಂದಿದ್ದರಿಂದ ಅವರಿಗೆ ವಾಲ್ಮೀಕಿ ಎಂದು ಹೆಸರಾಯಿತು.
ವಾಲ್ಮೀಕಿ ಮಹರ್ಷಿಗಳು ಗಂಗಾ ನದಿಯ ತೀರಕ್ಕೆ ಶಿಷ್ಯರೊಡನೆ ಹೋದಾಗ, ಆ ನದಿಯ ದಂಡೆಯಲ್ಲಿ ರತಿ ಸುಖದಲ್ಲಿ ಪ್ರಮತ್ತವಾಗಿ. ಆನಂದಾತಿಶಯದಿಂದ ಮನೋಹರವಾಗಿ ಧ್ವನಿ ಮಾಡುತ್ತಿದ್ದ ಕ್ರೌಂಚ ಪಕ್ಷಿಗಳ (ಕೊಕ್ಕರೆಗಳು) ಜೋಡಿಯ ಮೇಲೆ ನಿಷಾದನೊಬ್ಬನು ತನ್ನ ಬಾಣದಿಂದ ಹೊಡೆದು ಗಂಡು ಪಕ್ಷಿಯನ್ನು ಕೊಂದನು. ಅದನ್ನು ನೋಡಿದ ವಾಕ್ಯ ವಿಶಾರದ ಧರ್ಮಾತ್ಮ ಮಹಾ ಮುನಿಗಳಾದ ವಾಲ್ಮೀಕಿ ಮಹರ್ಷಿಗಳ ಹೃದಯದಲ್ಲಿ ಕರುಣಾರಸವು ಉಕ್ಕಿ ಹರಿಯಿತು. ಮಹರ್ಷಿಗಳ ಅಂತಃಕರಣದಿಂದ ಉಕ್ಕಿದ ಕರುಣಾರಸದಿಂದ ಶ್ಲೋಕ ರೂಪವಾಯಿತು. ಕಾಮಚೇಷ್ಟೆಯಿಂದ ಸುತ್ತಾಡುತ್ತಿದ್ದ ಕೌಂಚ ದಂಪತಿಗಳಲ್ಲಿ. ಗಂಡು ಪಕ್ಷಿಯನ್ನು ಕೊಂದಿರುವುದರಿಂದ "ನಿನಗೂ ಬಾಳಿನಲ್ಲಿ ಬಹಳ ಕಾಲ ನೆಲೆ ಇಲ್ಲದಂತಾಗಲಿ" ಎಂದು ಹೇಳುವ ಮೂಲಕ ಪ್ರಾಣಿ-ಪಕ್ಷಿಗಳ ಅಥವಾ ಮನುಷ್ಯರ ಮೇಲೆ ವಿನಾಕಾರಣ ಹಿಂಸೆ ಬೇಡವೆಂದು ವಾಲ್ಮೀಕಿಯವರು ಸಾರಿರುತ್ತಾರೆ. ಮರುಕ್ಷಣದಲ್ಲಿಯೇ. 'ಮಾ ನಿಷಾದ' ಎಂದು ಮಹರ್ಷಿಗಳ ಹೃದಯದಲ್ಲಿ ಚಿಂತನೆ ಉಂಟಾಯಿತು. ಆ ವಾಣಿಯು ಶ್ಲೋಕವಾಗಿ ರೂಪುಗೊಂಡಿತು. ಅಲ್ಲಿಂದ ೨೪,೦೦೦ ಶ್ಲೋಕಗಳ ೫೦೦ ಸರ್ಗಗಳಿಂದ ಕೂಡಿದ ೭ ಕಾಂಡಗಳ ಶ್ರೀಮದ್ ವಾಲ್ಮೀಕಿ ರಾಮಾಯಣವನ್ನು ವಾಲ್ಮೀಕಿ ಮಹರ್ಷಿಗಳು ರಚಿಸಿ. ಆದಿಕವಿಯಾಗಿ. ಜಗತ್ ವಿಖ್ಯಾತರಾಗಿದ್ದಾರೆ. ಆ ಕಾರಣದಿಂದ "ಆದಿಕಾವ್ಯಮಿದಂ ಪ್ರೋಕ್ತಂ ಪುರಾ ವಾಲ್ಮೀಕಿ ನಾ ಕೃತಮ್" ಎನ್ನಲಾಗಿದೆ. ಆದಿಕಾವ್ಯವಾದ ರಾಮಾಯಣದಲ್ಲಿ ಪಿತೃ ಭಕ್ತಿ. ಆಚಾರ್ಯ ನಿಷ್ಠೆ. ಸ್ವಾಮಿ ಭಕ್ತಿ. ರಾಜ ಭಕ್ತಿ, ಸ್ವಾರ್ಥತ್ಯಾಗಗಳು, ಸೋದರತ್ವ ಮುಂತಾದ ಸಾಮಾಜಿಕ. ಧಾರ್ಮಿಕ ವಿಚಾರಗಳು ಹಾಗೂ ಧರ್ಮ-ಅರ್ಥ-ಕಾಮಗಳ ವಿಷಯಗಳನ್ನು ಮನೋಜ್ಞವಾಗಿ ರೂಪಿಸಲಾಗಿದೆ. ಪ್ರಭು ಶ್ರೀರಾಮಚಂದ್ರನ ಧರ್ಮಪತ್ನಿಯಾದ ತುಂಬು ಗರ್ಭಿಣಿಯಾಗಿದ್ದ ಸೀತಾ ಮಾತೆಗೆ ತಪ ಆಶ್ರಮದಲ್ಲಿ ಆಶ್ರಯ ನೀಡಿ ಜನಿಸಿದ ಕುಶ-ಲವರಿಗೆ ಸಾಹಿತ್ಯ, ಸಂಗೀತ. ಶಸ್ತ್ರಾಭ್ಯಾಸ ಮುಂತಾದ ಎಲ್ಲ ವಿದ್ಯೆಗಳನ್ನು ನೀಡಿ ಅವರ ಆಶ್ರಮವೇ ವಿಶ್ವದ ಪ್ರಪ್ರಥಮ ವಿಶ್ವವಿದ್ಯಾಲಯವಾಗಿತ್ತು. ವಿದ್ವತ್ತು. ಪ್ರತಿಭೆ, ಜಾತಿ ಆಧಾರಿತವಲ್ಲ. ಅದು ಪರಿಶ್ರಮದಿಂದ ಪಡೆಯುವ ರತ್ನಗಳು ಎಂದು ಮಹರ್ಷಿ ವಾಲ್ಮೀಕಿ ಸಾರಿದ್ದಾರೆ. ಮೂಲಕ ಅಕ್ಷರ ಸಂಸ್ಕೃತಿಯನ್ನು ಪ್ರತಿಯೊಬ್ಬ ಮನುಷ್ಯನು ಮೈಗೂಡಿಸಿಕೊಳ್ಳುವ ಸಂದೇಶವನ್ನು ವಿಶ್ವಕ್ಕೆ ಸಾರಿರುತ್ತಾರೆ.
ನರಶ್ರೇಷ್ಟ ಶ್ರೀರಾಮಚಂದ್ರನ ಮೂಲಕ ಮನುಕುಲಕ್ಕೆ ಮಾರಕವಾಗಿದ್ದ ಹಿಂಸಾರೂಪಿಗಳಾದ ರಾವಣ ಸೇರಿದಂತೆ. ರಾಕ್ಷಸೀ ಸಮೂಹವನ್ನು ಸಂಹಾರ ಮಾಡಿ. ಜಾತಿ ರಹಿತ, ವರ್ಗ ರಹಿತ, ಶೋಷಣೆ ರಹಿತ ಸಮಪಾಲು. ಸಮಬಾಳು, ಸಮಾನ ಅವಕಾಶದ ಸುಖಿ ಸಮಾಜದ ಸಂದೇಶವನ್ನು ವಾಲ್ಮೀಕಿ ಮಹರ್ಷಿಗಳು ಮನುಕುಲಕ್ಕೆ ಸಾರಿರುತ್ತಾರೆ. ವಾಲ್ಮೀಕಿ ಮಹರ್ಷಿಗಳು ಸಾರಿರುವ ಸಂದೇಶ ಸಾರ್ವಕಾಲಿಕ ಸತ್ಯವಾಗಿದೆ. "ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡುವ ಮೂಲಕ ಅವರ ಸಂದೇಶಗಳಾದ ಅಕ್ಷರ ಸಂಸ್ಕೃತಿ, ಶಿಷ್ಟರ ರಕ್ಷಣೆ, ದುಷ್ಟರ ಸಂಹಾರ ಮಾಡುವ ಮೂಲಕ ವಿಶ್ವ ಮಾನವತ್ವದ ಮನುಕುಲ ಸೃಷ್ಟಿಗೆ ನಮ್ಮನ್ನು ನಾವೇ ಸಮರ್ಪಿಸಿಕೊಳ್ಳುವುದು ಮಹರ್ಷಿ ವಾಲ್ಮೀಕಿಗೆ ನಾವು ತೋರುವ ನಮನ.ಮಹರ್ಷಿ ವಾಲ್ಮೀಕಿ ವಂಶಸ್ಥರು ಹಾಗೂ ಅವರ ವೈಚಾರಿಕತೆಯಲ್ಲಿ ನಂಬಿಕೆಯುಳ್ಳವರು ಹೊಡಿ-ಬಡಿ ಹಾಗೂ ಭ್ರಷ್ಟ ಸಂಸ್ಕೃತಿಯನ್ನು ತೊರೆದು. ಅಹಿಂಸಾವಾದಿಗಳಾಗಿ, ಪ್ರಾಮಾಣಿಕರಾಗಿ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಮಾನವೀಯ ನೆಲೆಗಟ್ಟಿನಲ್ಲಿ ಅಕ್ಷರ ಸುಖಿ ಸಮಾಜವನ್ನು ಕಟ್ಟಲು ಕಂಕಣಬದ್ಧರಾಗೋಣ. ಪುಣ್ಯ ಕಾರ್ಯವಾದ ರಾಮಾಯಣ ಓದೋಣ. ಜೀವನದಲ್ಲಿ ಧರ್ಮ-ಅರ್ಥ-ಕಾಮಗಳನ್ನು ತಿಳಿಯೋಣ. ಮಹರ್ಷಿ ವಾಲ್ಮೀಕಿಯವರ ಸಂದೇಶವನ್ನು ಪಾಲಿಸೋಣ. ಸಾರೋಣ. ಹಿಂಸಾ ರಹಿತ ಸುಖಿ ಸಮಾಜವನ್ನು ಕಾಣೋಣ.