ವಾಹನ ಪಲ್ಟಿ: ವಿದ್ಯಾರ್ಥಿನಿ ಸಾವು, ನಾಲ್ವರ ಸ್ಥಿತಿ ಚಿಂತಾಜನಕ, 20 ಜನರಿಗೆ ಗಂಭೀರ ಗಾಯ
ವಿಜಯಪುರ(ತಾಳಿಕೋಟೆ): ಹೊಟ್ಟೆ ಪಾಡಿಗಾಗಿ ದುಡಿಯಲಿಕ್ಕೆ ಕೂಲಿ ನಾಲಿ ಅರಿಸಿಕೊಂಡು ಬೇರೆ ಬೇರೆ ಗ್ರಾಮಗಳಿಗೆ ನಿತ್ಯ ಜನರನ್ನು ತುಂಬಿಕೊಂಡು ಹೋಗುತ್ತಿದ್ದ ವಾಹನವು ಪಲ್ಟಿಯಾಗಿದ್ದು, ವಾಹನದಲ್ಲಿ ಕುಳಿತಿದ್ದ ಓರ್ವ ಬಾಲಕಿ ವಿದ್ಯಾರ್ಥಿನಿ ಕಲ್ಪನಾ ಭಜಂತ್ರಿ(೧೬) ಜಿಲ್ಲಾ ಆಸ್ಪತ್ರೆಯಲ್ಲಿ ಸಾವನಪ್ಪಿದ್ದು, ೨೦ ಜನರಿಗೆ ಗಂಭೀರ ಗಾಯವಾದ ಘಟನೆ ತಾಲೂಕಿನ ಪತ್ತೇಪೂರ ಗ್ರಾಮದ ಬಳಿ ನಡೆದಿದೆ.
ಭೀಕರ ಬರಗಾಲ ಆವರಿಸಿರುವದರಿಂದ ದುಡಿಯುವ ಕೈಗಳಿಗೆ ಕೆಲಸವಿಲ್ಲದೇ ಪರಿತಪಿಸುತ್ತಿದ್ದರೆ, ಇನ್ನೊಂದೆಡೆ ಮಾಡಿದ ಸಾಲಸೂಲಕ್ಕೆ ಬಡ್ಡಿ ಕಟ್ಟಲಾಗದೇ ಕಂಗಾಲಾಗಿರುವ ರೈತ ಬಡ ಕುಟುಂಬಸ್ಥರು ಕೂಲಿ ನಾಲಿ ಅರಿಸಿಕೊಂಡು ತಮ್ಮ ತಮ್ಮ ಮಕ್ಕಳೊಂದಿಗೆ ಬೇರೆ ಬೇರೆ ಗ್ರಾಮಗಳಿಗೆ ಅಲೆದಾಡುವದು ಈ ಭಾಗದಲ್ಲಿ ಸಾಮಾನ್ಯವಾಗಿದೆ.
ಇದಕ್ಕೆ ನಿದರ್ಶನವೆಂಬಂತೆ ತಾಳಿಕೋಟೆ ತಾಲೂಕಿನ ಬಳೇಭಾವಿ ಗ್ರಾಮದ ಬಡ ಕುಟುಂಬಸ್ಥರು ನಿತ್ಯ ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ ಮೈಲೇಶ್ವರ ಗ್ರಾಮದ ಸುನೀಲ್ ಬಲಭೀಮ ಕೊಕನೂರ ಎಂಬ ಬುಲೇರೋ ಪಿಕಫ್ ವಾಹನದ ಚಾಲಕನು ಬೆಳಿಗ್ಗೆ ಬಿಳೇಭಾವಿ ಗ್ರಾಮಕ್ಕೆ ಆಗಮಿಸಿ ಕೂಲಿ ಅರಿಸಿಕೊಂಡು ಕುಳಿತಿದ್ದ ೨೧ ಜನರನ್ನು ತುಂಬಿಕೊಂಡು ತೆರಳುತ್ತಿದ್ದಾಗ ಚಾಲಕನ ಅಜಾಗರುಕತೆಯಿಂದ ಪತ್ತೇಪೂರ ಗ್ರಾಮದ ಹತ್ತಿರ ನಡುದಾರಿಯಲ್ಲಿಯೇ ವಾಹನವು ಪಲ್ಟಿಯಾಗಲು ಕಾರಣವಾಗಿದೆ ಎಂದು ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ ದೂರಿನಲ್ಲಿ ತಿಳಿಸಲಾಗಿದೆ.