ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ವಿಕಸಿತ ಭಾರತದಲ್ಲಿ ನಿರ್ಲಕ್ಷಿತ ಕರ್ನಾಟಕ

03:32 AM Jul 24, 2024 IST | Samyukta Karnataka

ಬಿ.ಅರವಿಂದ
ಮೋದಿ ೩.೦ ಸರ್ಕಾರದ ಮೊದಲ ಬಜೆಟ್‌ನಿಂದ ತುಂಬ ಅಲ್ಲದಿದ್ದರೂ, ಕೆಲವು ಅಗತ್ಯ ಬೇಡಿಕೆಗಳಿಗೆ ಸ್ಪಂದನೆಯ ನಿರೀಕ್ಷೆ ಸಹಜವಾಗಿ ಇತ್ತು. ಆದರೆ, ಒಂದೆರಡು ಬಾರಿ ಹೊರತುಪಡಿಸಿದರೆ, ಕರ್ನಾಟಕದ ಹೆಸರಿನ ಪ್ರಸ್ತಾಪವೂ ಆಗಲಿಲ್ಲ. ವಿಕಸಿತ ಭಾರತ'ದ ಬಜೆಟ್‌ನಲ್ಲಿನಿರ್ಲಕ್ಷಿತ ಕರ್ನಾಟಕ' ಆಯ್ತಲ್ಲ ಎಂಬುದು ಈಗ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿರುವ ಬೇಸರದ ಚರ್ಚೆ.
ರಾಜಕೀಯ ಟೀಕೆ ಮತ್ತು ಸ್ವಾಗತಗಳು ಬೇರೆ. ನಿರ್ದಿಷ್ಟತೆ ಬೇರೆ. ಕೇಂದ್ರ ಬಜೆಟ್‌ನಲ್ಲಿ ಶ್ರೀಸಾಮಾನ್ಯ ಎರಡನೆಯದ್ದರ ನಿರೀಕ್ಷೆಯಲ್ಲಿರುತ್ತಾನೆ. ಈ ಎರಡನೇ ಅಂಶ ನಾಪತ್ತೆಯಾದರೆ ಬೇಸರಿಸಿಕೊಳ್ಳುತ್ತಾನೆ.
ಕೇಂದ್ರ ಬಜೆಟ್ ಇಡೀ ದೇಶಕ್ಕೆ ಸಂಬಂಧಿಸಿದ್ದು; ಇದರಲ್ಲಿ ಘೋಷಣೆಯಾದ ಕಾರ್ಯಕ್ರಮಗಳ ಲಾಭ ಕರ್ನಾಟಕಕ್ಕೂ ಆಗುತ್ತದೆ. ಹೀಗಾಗಿ ರಾಜ್ಯದ ಹೆಸರು ಹೇಳಬೇಕಾಗಿಲ್ಲ ನಿಜ. ಇದು ದೇಶದ ಎಲ್ಲ ಭಾಗಗಳಿಗೂ ಅನ್ವಯವಾಗಬೇಕಲ್ಲವೇ ಎಂಬ ಸಹಜ ಮಾತು ಕೇಳಿ ಬರುತ್ತಿದೆ.
ಅದರಲ್ಲೂ ಪ್ರವಾಹ ಪೀಡಿತ ಪ್ರದೇಶಗಳ ಹೆಸರುಗಳಿಗೆ ಒತ್ತು ಕೊಟ್ಟು ಪರಿಹಾರೋಪಾಯ ಘೋಷಿಸಿದ ಸರ್ಕಾರ, ಕರ್ನಾಟಕದಲ್ಲಿ ಮೊನ್ನೆ ಮೊನ್ನೆಯಷ್ಟೇ ನಡೆದ ದೊಡ್ಡ ದುರಂತವನ್ನೇ ಮರೆತುಬಿಟ್ಟಿತಲ್ಲ ಎನ್ನುವ ನೋವು ಜನರಲ್ಲಿ ಮೂಡುವಂತಾಗಿದೆ.
ಬಿಹಾರ್, ಹಿಮಾಚಲ ಪ್ರದೇಶ, ಉತ್ತರಾಖಂಡ ರಾಜ್ಯಗಳಲ್ಲಿ ನೆರೆಹಾನಿ ಸಹನೀಯವಾಗಿಸಲು ಬಜೆಟ್‌ನಲ್ಲಿ ಘೋಷಣೆ ಮೊಳಗಿತು. ಅದೇ, ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಭವಿಸಿದ ಹಾನಿಗೆ ಯಾವುದೇ ಪ್ರತಿಕ್ರಿಯೆ ಇರಲಿಲ್ಲ.
ಅದರಲ್ಲೂ ಉತ್ತರ ಕನ್ನಡ ಜಿಲ್ಲೆ ಅಂಕೋಲಾದ ಶಿರೂರಿನಲ್ಲಿ ಕಳೆದ ವಾರ ಸಂಭವಿಸಿದ ಭೂಕುಸಿತದ ವಿಷಯ. ಅಪಾರ ಪ್ರಾಣ ಮತ್ತು ಆಸ್ತಿ ಪಾಸ್ತಿ ಹಾನಿಯಾಗಿದ್ದಕ್ಕೆ ನೇರ ಕಾರಣವೇ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕೆಲಸ ಎಂಬ ಆರೋಪ ವಿಧಾನಸಭೆಯಲ್ಲೇ ಕೇಳಿ ಬಂದಿದೆ. ಆಡಳಿತ ಪಕ್ಷದ ಜವಾಬ್ದಾರಿಯುತ ಸಚಿವ, ವಿಪತ್ತು ನಿರ್ವಹಣೆ ಸಮಿತಿಯ ಮುಖ್ಯಸ್ಥರೂ ಆದ ಕೃಷ್ಣ ಬೈರೇಗೌಡ ಸ್ವತಃ ಈ ಆಕ್ರೋಶ ತೋಡಿಕೊಂಡಿದ್ದಾರೆ.
ಘಟನೆ ಮತ್ತು ವಿಧಾನಸಭೆಯಲ್ಲಿ ಹೊಮ್ಮಿದ ಆಕ್ರೋಶ ಕೇಂದ್ರ ಸರ್ಕಾರಕ್ಕೆ ಗೊತ್ತಿಲ್ಲದ ಸಂಗತಿಯೇನಲ್ಲ. ಹೀಗಿರುವಾಗ ಈ ವಿಷಯಕ್ಕೆ ಸೀಮಿತವಾಗಿ ಒಂದಿಷ್ಟು ಪರಿಹಾರವನ್ನು ಘೋಷಣೆ ಮಾಡಬಹುದಿತ್ತಲ್ಲವೇ? ಬಜೆಟ್ ಪ್ರತಿ ದುರಂತಕ್ಕೆ ಮುನ್ನವೇ ಸಿದ್ಧಗೊಂಡಿರುತ್ತದೆ ಎನ್ನುವ ವಾದ ಕೇಳಿಬರಬಹುದು. ಆದರೆ ಟ್ಯಾಬ್ ಕಾಲಘಟ್ಟದ ಡಿಜಿಟಲ್ ಯುಗದಲ್ಲಿ ಇಂತಹ ಸಮರ್ಥನೆ ಅಪ್ರಸ್ತುತವಲ್ಲವೇ ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.
ಪ್ರವಾಸೋದ್ಯಮದಲ್ಲಿ ಈಗ ಕರ್ನಾಟಕ ದಕ್ಷಿಣ ಭಾರತದಲ್ಲೇ ಮುಂಚೂಣಿಯಲ್ಲಿರುವ ರಾಜ್ಯ. ದೇಶದೆಲ್ಲೆಡೆಯಿಂದ ಮಾತ್ರವಲ್ಲ, ವಿಶ್ವದ ಅನೇಕ ಕಡೆಗಳಿಂದಲೂ ಜನ ರಾಜ್ಯಕ್ಕೆ ಭೇಟಿ ಕೊಡುವುದು ಹೆಚ್ಚಿದೆ. ಆದರೆ ಧಾರ್ಮಿಕ ಪ್ರವಾಸಿ ಕಾರಿಡಾರ್‌ಗಳು ಹೋಗಲಿ. ಒಂದು ಸಣ್ಣ ಪ್ರೋತ್ಸಾಹಕ ಕ್ರಮವನ್ನು ರಾಜ್ಯಕ್ಕೆ ನಿರ್ದಿಷ್ಟವಾಗಿ ಘೋಷಿಸಲಿಲ್ಲ.
ಭದ್ರಾ ಬಾಕಿ ಹಣ ಸೇರಿದಂತೆ ಉಳಿದು ಹೋಗಿರುವ ನೀರಾವರಿ ಯೋಜನೆಗಳು, ಬೆಂಗಳೂರಿಗೆ ಅತ್ಯಗತ್ಯವಾಗಿರುವ ಪೆರಿಫರಲ್ ರಿಂಗ್ ರೋಡ್, ರಾಜ್ಯದಲ್ಲಿ ಉಳಿದು ಹೋಗಿರುವ ಹೆದ್ದಾರಿ ಯೋಜನೆಗಳು, ರೋಗಗ್ರಸ್ಥವಾಗಿರುವ ಕೇಂದ್ರ ಸ್ವಾಮ್ಯದ ಉದ್ಯಮಗಳು, ಹೊಸ ಕೈಗಾರಿಕೆಗಳ ಸ್ಥಾಪನೆ ಇವೇ ಮೊದಲಾದ ಬೇಡಿಕೆಗಳಿಗೆ ಈ ಬಾರಿಯೂ ಬಜೆಟ್ ಧ್ವನಿಯಾಗಲಿಲ್ಲ.

Next Article