ವಿಘ್ನೇಶಾ ವರಕೊಡುವಾಗ ಹುಷಾರು
ಅಮ್ಮಾ ನಾ ಹೋಗಿ ಬರುತ್ತೇನೆ ಎಂದು ವಕ್ರತುಂಡ ಸಾಹೇಬರು ಅಮ್ಮನವರಿಗೆ ಹೇಳಿದಾಗ… ತಡಿ ತಡಿ ಕಂದಾ ನಿನಗೆ ಸ್ವಲ್ಪ ಹೇಳುವುದಿದೆ ಎಂದು ಅಡುಗೆಮನೆಯಿಂದ ಹೊರಗೆ ಬಂದು ಮಗನನ್ನು ಕೂಡಿಸಿಕೊಂಡು ಹೇಳತೊಡಗಿದಳು. ನೋಡೂ ನೀನು ಭೂಲೋಕದಲ್ಲಿ ಇಲ್ಲಿಂದ ಉತ್ತರದಿಕ್ಕಿನ ಮೂಲೆಯಲ್ಲಿ ಕಾಣುತ್ತಿದೆಯಲ್ಲ ಅದು ಕರ್ನಾಟಕ. ಅಲ್ಲಿಗೂ ನೀನು ಹೋಗುತ್ತಿ ಭಯಂಕರ ಹುಷಾರಾಗಿರಬೇಕು. ಯಾಕೆಂದರೆ ಅಲ್ಲಿ ವಾತಾವರಣ ಭಯಂಕರವಾಗಿದೆ. ಅಲ್ಲಿ ಮೂಡಾ, ಮೂಡಾ ಎಂದು ಕೆಲವರು ಹಲುಬುತ್ತಿದ್ದಾರೆ. ಸ್ವಾಮೀ ಮೂಡಾದಿಂದ ನೀನೇ ಕಾಪಾಡು ಗಣೇಶಾ ಎಂದು ಬೇಡಿಕೊಳ್ಳುತ್ತಾರೆ. ಎದುರಾಳಿಗಳು ನೋಡು ವಿಘ್ನೇಶಾ… ಮೂಡಾದಲ್ಲಿ ಅವರನ್ನು ಸಿಕ್ಕಿಸಿಹಾಕಿಬಿಡು ಎಂದು ಹೇಳುತ್ತಾರೆ. ನೀನು ಇಬ್ಬರಿಗೂ ಹೂಂ… ಹೂಂ ಅಂದು ಫಜೀತಿ ಪಡಬೇಡ ವರ ಕೊಡುವಾಗ ಹುಷಾರು. ಅನೇಕರು ಬಂದು ನೋಡು ನನ್ನನ್ನೇ ಮುಖ್ಯ ಕುರ್ಚಿಯ ಮೇಲೆ ಕೂಡುವ ಹಾಗೆ ಮಾಡಿಬಿಡು… ಮುಂದಿನ ಸಲ ನಿನಗೆ ಅದು ಮಾಡಿಸುತ್ತೇನೆ. ಇದು ಮಾಡಿಸುತ್ತೇನೆ ಎಂದು ಹೇಳುತ್ತಾರೆ. ನೀನು ಯಾವುದೇ ಕಾರಣಕ್ಕೆ ಮರುಳಾಗಬೇಡ. ಬೇಕಿದ್ದರೆ ಅವರ ಕನಸಿನಲ್ಲಿ ಹೋಗಿ.. ನೋಡ್ರಪ ಇದು ನನ್ನ ಕೈಲಿ ಇಲ್ಲ ಎಂದು ಹೇಳುವುದಾದರೆ ಹೇಳಿಬಿಡು. ಇನ್ನೊಂದು ಕಡೆ ದಾಸನ ಬಿಡಿಸು ದಾಸನ ಬಿಡಿಸು ಅಂತಾರೆ ನೀನು ಅವರ ಚಾರ್ಜ್ಶೀಟನ್ನು ಒಮ್ಮೆ ಓದಿ ವಿಚಾರಮಾಡಿ ಎಸ್ ಅನ್ನು. ಇನ್ನೂ ಕೆಲವು ಕಡೆ ಜೋರಾಗಿ ಡಿಜೆ ಹಾಕುತ್ತಾರೆ ಆಗ ನಿನ್ನ ಕಿವಿಯಲ್ಲಿ ಹತ್ತಿ ಇಟ್ಟುಕೊಂಡು ಬಿಡು. ನಿನ್ನ ನೆಪ ಮಾಡಿ ಸಿಕ್ಕಾಪಟ್ಟೆ ವಸೂಲಿ ಮಾಡುತ್ತಿದ್ದಾರೆ ಎಂದು ಪೊಲೀಸರು ನನಗೆ ಇನಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ. ನೀನು ಅದಕ್ಕೆಲ್ಲ ಮನಸ್ಸಿಗೆ ಹಚ್ಚಿಕೊಳ್ಳಬೇಡ. ಇನ್ನು ಮನೆ-ಮನೆಯಲ್ಲಿ ನಿನ್ನನ್ನು ಕೂಡಿಸುತ್ತಾರೆ. ಕೆಲವರು ಕೆಲವು ಬೇಡಿಕೆಗಳನ್ನು ಸಲ್ಲಿಸುತ್ತಾರೆ. ಬಾಯಿ ಮಾತಿನವು ಇದ್ದರೆ ಒಪ್ಪಿಕೊಂಡು ವರಕೊಡು. ಇನ್ನೂ ಹಲವರು ಕೆಜಿ ಕೆಜಿ ಬಂಗಾರ ಬೇಕಾಗಿದೆ ಎಂದು ಹೇಳುತ್ತಾರೆ ಸಿಕ್ಕಾಪಟ್ಟೆ ಕಾಸ್ಟ್ಲಿ ಆಗಿರುವುದರಿಂದ ನೀನು ವಿಚಾರಮಾಡು. ಇನ್ನು ಹನ್ನೊಂದು ದಿನ ಹೋಗುತ್ತೀಯ.. ಆರೋಗ್ಯದ ಕಡೆ ಗಮನವಿರಲಿ.. ಮೋದಕ… ಕಡುಬು ಅದು ಇದು ಎಂದು ತಿಂದು ಗೊಣಗಾಡಬೇಡ…ಹೋಗಿ ಬಾ ಕಂದ ಹೋಗಿ ಬಾ ಎಂದು ಆಶೀರ್ವದಿಸಿ ಒಳಗೆ ಹೋದಳು. ಆಕಾಶಮಾರ್ಗವಾಗಿ ಗಣೇಶ ಭೂಮಿಗೆ ಬಂದ.