ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ವಿಚಾರಕ್ಕಿಂತ ಶ್ರದ್ಧೆಯೇ ಲೇಸು

04:33 AM Aug 13, 2024 IST | Samyukta Karnataka

ಜಗತ್ತಿನಲ್ಲಿ ಪ್ರಪಂಚದ ಮೂಲ ಕಂಡುಹಿಡಿಯಲು ಹೊರಟವರನ್ನು ಎರಡು ಗುಂಪಾಗಿ ಭಾಗಿಸಬಹುದು. ಶ್ರದ್ಧಾ ಮಾರ್ಗಿಗಳು ಮತ್ತು ವಿಚಾರ ಮಾರ್ಗಿಗಳು. ಒಂದು ಭಕ್ತಿಯ ಮೂಲಕ ಭಗಂತನನ್ನು ಪಡೆಯುವ ಮಾರ್ಗವಾದರೆ, ಮತ್ತೊಂದು ಅನುಭವದ ತಳಹದಿಯಿಂದ ಬಂದ ತರ್ಕಮಾರ್ಗ. ಇವುಗಳ ಬಗ್ಗೆ ಕೊಂಚ ವಿಚಾರಣೆ ನೀಡೋಣ. ಇವೆರಡರ ಪೈಕಿಯಲ್ಲಿ ಶ್ರದ್ಧಾ ಮಾರ್ಗವೇ ನಮ್ಮ ದಾರಿ. ವಿಚಾರ ಮಾರ್ಗದಿಂದ ಜಗತ್ತಿನ ಮೂಲನಾದ ಪರಮಾತ್ಮನನ್ನು ಪಡೆಯಲು ಸಾಧ್ಯವಿಲ್ಲ.
ಶ್ರದ್ಧಾ ಮಾರ್ಗವೆಂದರೆ ಶ್ರದ್ಧೆಯೇ ಮುಖ್ಯವಾಗಿ ಉಳ್ಳ ಮಾರ್ಗ. ದೇವರಲ್ಲಿ ಮತ್ತು ಧರ್ಮದಲ್ಲಿ ಶಾಸ್ತ್ರವಾಕ್ಯದ ಮೂಲಕ ಅಥವಾ ಗುರುವಾಕ್ಯದ ಮೂಲಕ ಅಚಲವಾದ ವಿಶ್ವಾಸವೇ ಶ್ರದ್ಧೆ. ಶ್ರದ್ಧೆಯನ್ನೇ ಸದ್ವಿಚಾರ, ಮಹಾತ್ಮರ ಸಹವಾಸ ಮುಂತಾದವುಗಳ ಮೂಲಕ ಬೆಳೆಸಿಕೊಳ್ಳುತ್ತಾ ಹೋದರೆ ಮುಂದೆ ಜಗತ್ತಿಗೆ ಮೂಲನಾದ ಪರಮಾತ್ಮನ ದರ್ಶನವಾಗುತ್ತದೆ.
ಸಂಶೋಧನೆಯ ಮಾರ್ಗವೆಂದರೆ ವೈಜ್ಞಾನಿಕ ಸಂಶೋಧನೆಯ ಮೂಲಕ ಅಥವಾ ತರ್ಕದ ಮೂಲಕ ಅಥವಾ ಗಣಿತದ ಮೂಲಕ ಜಗತ್ತಿನ ಮೂಲವನ್ನು ಹುಡುಕುವ ಪ್ರಯತ್ನ. ಆಧುನಿಕ ವಿಜ್ಞಾನ ಈ ಕಾರ್ಯವನ್ನು ಕೈಗೆತ್ತಿ ಕೊಡುವುದಕ್ಕಿಂತ ತುಂಬ ಮುಂಚೆಯೇ ಪ್ರಾಚೀನ ಕಾಲದ ಋಷಿಗಳು ಇದನ್ನು ಕೈಗೆತ್ತಿಕೊಂಡಿದ್ದರು. ಅದರ ಫಲವಾಗಿಯೇ ಪ್ರಾಚೀನ ನ್ಯಾಯ, ವೈಶೇಷಿಕ ಮುಂತಾದ ದರ್ಶನಗಳು ಬೆಳೆದುಕೊಂಡು ಬಂದಿವೆ. ಅಂದರೆ ಪ್ರಾಚೀನ ಕಾಲದಿಂದಲೂ ಈ ಸಂಶೋಧನಾ ಮಾರ್ಗ ಇತ್ತು.
ಪ್ರಾಚೀನವಿರಲಿ-ಅರ್ವಾಚೀನವಿರಲಿ ಸಂಶೋಧನಾ ಮಾರ್ಗಕ್ಕಿಂತ ಶ್ರದ್ಧೆಯ ಮಾರ್ಗದಿಂದಲೇ ಅವನನ್ನು ಕಂಡುಕೊಳ್ಳಬೇಕು. ಶ್ರದ್ಧಾಭಕ್ತಿಧ್ಯಾನಯೋಗಾದವೈಃ' ಎಂಬುದಾಗಿ ಉಪನಿಷತ್ತು ಹೇಳುತ್ತದೆ. ಶ್ರದ್ದೆ, ಭಕ್ತಿ ಇವುಗಳ ಮೂಲಕ ಬಂದು ಧ್ಯಾನ, ಯೋಗದ ಮೂಲಕವೇ ಅವನನ್ನು ತಿಳಿಯಬೇಕು.ನೈಷಾ ತರ್ಕೇಣ ಮತಿರಾಪನೇಯಾ' ಪರಬ್ರಹ್ಮ ಸಾಕ್ಷಾತ್ಕಾರವು ಕೇವಲ ತರ್ಕದಿಂದ ಉಂಟಾಗುವುದಿಲ್ಲ ಎಂಬುವುದಾಗಿ ಕಠೋಪನಿಷತ್ತು ಹೇಳುತ್ತದೆ.
ಶ್ರದ್ಧಾ ಮಾರ್ಗದಿಂದಲೇ ಪರಮಾತ್ಮನ ಸಾಕ್ಷಾತ್ಕಾರ ಎಂಬುವುದು ಹೇಳಲು ಪ್ರಮುಖ ಕಾರಣವಿದೆ. ವಿಚಾರ ಮಾರ್ಗದಲ್ಲಿ ಮನಸ್ಸಿನ ಏಕಾಗ್ರತೆಗೆ ಅವಕಾಶವಿಲ್ಲ. ಆದರೆ ಶ್ರದ್ಧಾ ಮಾರ್ಗದಲ್ಲಿ ಪ್ರತ್ಯಾಹಾರ, ಧಾರಣಾ, ಧ್ಯಾನ, ಸಮಾಧಿಗಳೆಂಬ ಏಕಾಗ್ರತೆಯ ಸೋಪಾನಗಳಿವೆ. ಈ ಸೋಪಾನಗಳನ್ನು ಹತ್ತಿದ ಮನಸ್ಸಿಗೆ ಸೂಕ್ಷ್ಮ ವಿಷಯಗಳನ್ನು ಗ್ರಹಿಸುವ ಸಾಮರ್ಥ್ಯವಿರುತ್ತದೆ. ಭಕ್ತಿ ಮಾರ್ಗದಲ್ಲಿಯೂ ಏಕಾಗ್ರತೆಯ ಈ ಸೋಪಾನಗಳು ಭಕ್ತಿಯಿಂದಲೇ ಉಂಟಾಗುತ್ತವೆ. ವಿಚಾರ ಮಾರ್ಗದಲ್ಲಿ ತೀವ್ರವಾಗಿ ತೊಡಗಿಕೊಂಡವರು ಒಂದು ರೀತಿಯ ಏಕಾಗ್ರತೆಯಿಂದಲೇ ವಿಚಾರದಲ್ಲಿ ಅಥವಾ ಸಂಶೋಧನೆಯಲ್ಲಿ ತೊಡಗಿರುತ್ತಾರೆ. ಆದರೆ ಆ ಏಕಾಗ್ರತೆ ಧಾರಣಾ, ಧ್ಯಾನ, ಸಮಾಧಿಗಳೆಂಬ ಸೋಪಾನಗಳನ್ನು ಹತ್ತುವುದಿಲ್ಲ. ಶ್ರದ್ಧಾಮಾರ್ಗದಲ್ಲಿ ಮಾತ್ರವೇ ಏಕಾಗ್ರತೆಯ ಕೊನೆಯ ಸೋಪಾನವನ್ನು ತಲುಪಲು ಸಾಧ್ಯವಿದೆ. ಮೇಲ್ನೋಟಕ್ಕೆ ಮೂಢನಂಬಿಕೆ ಎಂಬಂತೆ ಕಾಣುವ ಶ್ರದ್ಧಾಮಾರ್ಗವು ಜಗತ್ತಿಗೆ ಭಾರತೀಯರ ಅದ್ಭುತ ಕೊಡುಗೆ.

Next Article