ವಿಚಾರಧಾರೆ ಹೆಸರಿನಲ್ಲಿ ಮಾಫಿಯಾ ಷಡ್ಯಂತರ
ಮಂಗಳೂರು: ಕರಾವಳಿಯಲ್ಲಿ ಪ್ರಬಲವಾಗಿರುವ ಹಿಂದು ಸಂಘಟನೆ ಒಡೆಯಲು ಕಮ್ಯುನಿಸ್ಟ್ ವಿಚಾರಧಾರೆ ಹೆಸರಿನಲ್ಲಿ ಮಾಫಿಯಾಗಳು ಷಡ್ಯಂತರ ನಡೆಸುತ್ತಿವೆ. ಅದರ ಭಾಗವೇ ಖಾಸಗಿ ಕಾರ್ಯಕ್ರಮದಲ್ಲಿ ಹಿಂದು ಸಂಘಟನೆ ಬಗ್ಗೆ ಮಾತನಾಡಿದ ಉಪನ್ಯಾಸಕ ಡಾ.ಅರುಣ್ ಉಳ್ಳಾಲ್ ಮೇಲೆ ಮಾಡಿರುವ ಆರೋಪ. ಇಂತಹ ಕುಕೃತ್ಯಗಳನ್ನು ಮುಂದುವರಿಸಿದ್ದೇ ಆದಲ್ಲಿ ಹಿಂದು ಸಂಘಟನೆಗಳು ಕೂಡ ರಾಜ್ಯವ್ಯಾಪಿ ಬೃಹತ್ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಹಿಂದು ಜಾಗರಣಾ ವೇದಿಕೆ ಕರ್ನಾಟಕ ಪ್ರಾಂತ ಕಾರ್ಯಕಾರಿಣಿ ಸದಸ್ಯ ಶ್ರೀಕಾಂತ್ ಶೆಟ್ಟಿ ಕಾರ್ಕಳ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಅರುಣ್ ಉಳ್ಳಾಲ್ ಅವರು ಖಾಸಗಿ ಕಾರ್ಯಕ್ರಮದಲ್ಲಿ ಮಾಡಿದ ಭಾಷಣವನ್ನು ಸಾಮಾಜಿಕ ಜಾಲತಾಣದಲ್ಲಿ ಕಮ್ಯುನಿಸ್ಟ್ ಪ್ರೇರಿತ ಗುಂಪುಗಳು ವೈರಲ್ ಮಾಡಿರುವುದು ನೆಪಕ್ಕೆ ಮಾತ್ರ. ವಾಸ್ತವದಲ್ಲಿ ಈ ಗುಂಪುಗಳಿಗೆ ಡಾ.ಅರುಣ್ ಉಳ್ಳಾಲ್ ನಡೆಸುತ್ತಿರುವ ಧರ್ಮ ಶಿಕ್ಷಣ ಅಭಿಯಾನವನ್ನು ಸಹಿಸು ಆಗುತ್ತಿಲ್ಲ. ಅವರು ಸೇರಿದಂತೆ ಹಿಂದು ಸಮಾಜದ ಉದ್ಧಾರಕ್ಕೆ ಕಾರ್ಯನಿರ್ವಹಿಸುತ್ತಿರುವವರನ್ನು ಕಟ್ಟಿಹಾಕುವುದುದೇ ಕಮ್ಯುನಿಸ್ಟ್ ಪ್ರೇರಿತರ ಹಿಡನ್ ಅಜೆಂಡಾ ಆಗಿದೆ ಎಂದು ಆರೋಪಿಸಿದರು.
ಕೇಸ್ ವಾಪಸ್ ಪಡೆಯಲಿ: ಡಾ.ಅರುಣ್ ಉಳ್ಳಾಲ್ ಅವರು ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡಿದ್ದಕ್ಕೆ ಪೊಲೀಸರು ಸ್ವಯಂ ಆಗಿ ಕೇಸು ದಾಖಲಿಸಿದ್ದಾರೆ. ಮುಸ್ಲಿಂ, ಕ್ರೈಸ್ತ ಸಮುದಾಯದಲ್ಲೂ ಖಾಸಗಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾರೆ. ಅವರೇನು ಮಾತನಾಡುತ್ತಾರೆ ಎಂದು ಹಿಂದು ಸಮಾಜ ಹಿಂಬಾಲಿಸಿಕೊಂಡು ಯಾವತ್ತೂ ಹೋಗಿಲ್ಲ. ಹಾಗಿರುವಾಗ ಹಿಂದು ಸಂಪ್ರದಾಯ, ನಡವಳಿಕೆಗಳ ಬಗ್ಗೆ ಡಾ.ಅರುಣ್ ಉಳ್ಳಾಲ್ ಮಾತನಾಡಿದ್ದನ್ನೇ ಅಪರಾಧ ಎಂದು ಕೇಸು ದಾಖಲಿಸಿರುವ ಪೊಲೀಸರೇ ಸ್ವಯಂ ಆಗಿ ಕೇಸ್ ವಾಪಸ್ ಪಡೆಯಬೇಕು ಎಂದು ಶ್ರೀಕಾಂತ್ ಶೆಟ್ಟಿ ಕಾರ್ಕಳ ಆಗ್ರಹಿಸಿದರು.
ಪೋಸ್ಟ್ ಹಾಕಿದವರ ವಿರುದ್ಧವೂ ಕ್ರಮಕ್ಕೆ ಆಗ್ರಹ: ಕರಾವಳಿಯಲ್ಲಿ ಕಮ್ಯುನಿಸ್ಟರ ಐಡಿಯಾಲಜಿ, ಕ್ರಿಶ್ಟಿಯನ್ನರ ಹಣ, ಮುಸ್ಲಿಮರ ಮಾನವ ಶಕ್ತಿಯೇ ಹಿಂದುಗಳನ್ನು ಮಟ್ಟಹಾಕುವ ಷಡ್ಯಂತರಕ್ಕೆ ಬಳಕೆಯಾಗುತ್ತಿದೆ. ಇದರ ವಿರುದ್ಧ ಜಾಗೃತಿ ಮೂಡಿಸಲು ಹಿಂದು ಸಮಾಜ ಸಂಘಟಿತ ಹೋರಾಟ, ಸಮಾವೇಶಗಳನ್ನು ನಡೆಸಲಿದೆ. ಹೆಸರಿಗಷ್ಟೆ ಕಮ್ಯುನಿಸ್ಟ್ ಇದ್ದರೂ, ಇವರೆಲ್ಲರೂ ಒಟ್ಟಾಗಿ ಹಿಂದು ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ. ಡಾ.ಅರುಣ್ ಉಳ್ಳಾಲ್ ವಿರುದ್ಧ ಜಾಲತಾಣಗಳಲ್ಲಿ ಸುಮಾರು 50-70 ಮಂದಿ ಶಾಂತಿ ಕದಡುವ ರೀತಿ ಪೋಸ್ಟ್ ಹಾಕಿದ್ದಾರೆ. ಅವೆಲ್ಲವನ್ನೂ ಸಂಗ್ರಹಿಸಿ ಪೊಲೀಸ್ ಕಮಿಷನರ್‌ಗೆ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಗಿದೆ ಎಂದರು. ಸಮಾಜ ವಿರೋಧಿ ಚಟುವಟಿಕೆ ನಡೆಸಿದಾಗ ಎಸ್‌ಡಿಪಿಐ, ಪಿಎಫ್‌ಐ ವಿರುದ್ಧ ಇದೇ ಕಮ್ಯುನಿಸ್ಟರು ಬೀದಿಗೆ ಇಳಿದು ಹೋರಾಟ ನಡೆಸುವುದಿಲ್ಲ, ಕನಿಷ್ಠ ವಿರೋಧಿಸುವ
ಮಟ್ಟಕ್ಕೂ ಹೋಗುವುದಿಲ್ಲ. ಇದು ಕಮ್ಯುನಿಸ್ಟರಿಗೆ ಇರುವ ಹಿಂದು ವಿರೋಧಿ ನಿಲುವನ್ನು ಸ್ಪಷ್ಟಪಡಿಸುತ್ತದೆ. ಡಾ.ಅರುಣ್ ಉಳ್ಳಾಲ್ ವಿರುದ್ಧ ಸ್ವಯಂ ಕೇಸು ದಾಖಲಿಸುವ ಪೊಲೀಸರು, ಬಾಂಗ್ಲಾ ಮಾದರಿಯಲ್ಲಿ ರಾಜಭವನಕ್ಕೆ ನುಗ್ಗುತ್ತೇವೆ ಎನ್ನುವ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮೇಲೆ ಯಾಕೆ ಕೇಸು ದಾಖಲಿಸುವ ಧೈರ್ಯ ತೋರುತ್ತಿಲ್ಲ ಎಂದು ಶ್ರೀಕಾಂತ್ ಶೆಟ್ಟಿ ಪ್ರಶ್ನಿಸಿದರು.
ಮೊದಲೇ ರಾಜಿನಾಮೆ ನೀಡಿದ್ದರು: ಡಾ.ಅರುಣ್ ಉಳ್ಳಾಲ್ ಅವರು ಆರೇಳು ತಿಂಗಳ ಹಿಂದೆಯೇ ಆಗ್ನೇಸ್ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. ಅವರ ಹುದ್ದೆ ಕಾಯಂ ಆಗುತ್ತದೆ ಎಂದು ಗೊತ್ತಾದ ಕೂಡಲೇ ಆಡಳಿತ ಮಂಡಳಿ ಕ್ರಿಶ್ಚಿಯನ್ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲು ಅವರನ್ನು ಹುದ್ದೆ ತೊರೆಯುವಂತೆ ಸೂಚಿಸಿತ್ತು. ಇದು ನಾಲ್ಕೈದು ವರ್ಷಗಳಿಂದ ಅಲ್ಲಿ ಪಾಠ ಮಾಡುತ್ತಿದ್ದ ಹಿಂದು ಸಮುದಾಯದ ಉಪನ್ಯಾಸನಿಗೆ ನೀಡಿದ ಗೌರವ. ಎಲ್ಲ ಹಿಂದು ಸಂಘಟನೆಗಳು ಡಾ.ಅರುಣ್ ಉಳ್ಳಾಲ್‌ಗೆ ಬೆಂಬಲವಾಗಿ ನಿಲ್ಲಲಿವೆ ಎಂದು ಶ್ರೀಕಾಂತ್ ಶೆಟ್ಟಿ ಹೇಳಿದರು.
ಪ್ರಾಂತ ಕಾರ್ಯಕಾರಿಣಿ ಸದಸ್ಯ ಪ್ರಶಾಂತ್ ಬಂಟ್ವಾಳ್, ನಗರ ಸಂಯೋಜಕ ನಿಖಿತ್, ಗ್ರಾಮಾಂತರ ಸಂಯೋಜಕ ನರಸಿಂಹ ಮಾಣಿ ಇದ್ದರು.