ವಿದ್ಯಾ ಮಂತ್ರಿಗೆ ಕನ್ನಡ ಬರಲ್ವಾ
ಬೆಂಗಳೂರು: ವಿಧಾನಸೌಧದಲ್ಲಿ ಕೋಚಿಂಗ್ ತರಗತಿ ಉದ್ಘಾಟನಾ ಕಾರ್ಯಕ್ರಮದ ವೇಳೆ ವಿದ್ಯಾರ್ಥಿಯೋರ್ವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ `ಕನ್ನಡ ಬರೋದಿಲ್ವಾ' ಎಂದು ಹೇಳಿರುವುದು ಸಚಿವರ ಆಕ್ರೋಶಕ್ಕೆ ಕಾರಣವಾಯಿತು.
ಶಾಲಾ ಶಿಕ್ಷಣ (ಪದವಿ ಪೂರ್ವ) ಮತ್ತು ಸಾಕ್ಷರತಾ ಇಲಾಖೆಯಿಂದ ಬುಧವಾರ ನಿಟ್, ಜೆಇಇ ಮತ್ತು ಸಿಇಟಿ ಆನ್‌ಲೈನ್ ಕೋಚಿಂಗ್ ತರಗತಿ ಉದ್ಘಾಟನಾ ಕಾರ್ಯಕ್ರಮವ ವೇಳೆ ನಡೆದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಸಚಿವರಿಗೆ ಕನ್ನಡ ಬರೋದಿಲ್ಲವೇ ಎಂದು ವಿದ್ಯಾರ್ಥಿಯೋರ್ವ ಏರು ಧ್ವನಿಯಲ್ಲಿ ಪ್ರಶ್ನೆ ಮಾಡಿದ್ದಾನೆ.
ಇದರಿಂದ ಮಧು ಬಂಗಾರಪ್ಪ ಅವರು ಮುಜುಗರಕ್ಕೀಡಾದ ಸನ್ನಿವೇಶ ನಡೆಯಿತು. ಬಳಿಕ ನಗುತ್ತಲೇ ಅವರು ಲೇ.. ಯಾರೋ ಅದು? ನಾನೇನು ಉರ್ದು ಭಾಷೆಯಲ್ಲಿ ಮಾತನಾಡಿದ್ದಿನಾ ಸ್ಟುಫಿಡ್? ಎಂದು ಕೋಪಗೊಂಡರು. ರಾಜ್ಯಮಟ್ಟದ ಕಾರ್ಯಕ್ರಮವಾಗಿರುವ ಕಾರಣ ಮಾಧ್ಯಮದವರೂ ಇದನ್ನು ಪ್ರಸಾರ ಮಾಡುವುದು ಅಗತ್ಯವಿಲ್ಲ ಎಂದು ಮನವಿ ಮಾಡಿದರು. ಈ ರೀತಿ ಹೇಳಿಕೆ ನೀಡಿದವನು ಯಾರೆಂದು ಪತ್ತೆ ಹಚ್ಚಿ, ಆ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಇಲಾಖೆ ನಿರ್ದೇಶಕಿ ಸಿಂಧೂ ರೂಪೇಶ್, ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಅವರುಗಳಿಗೆ ಅದು ಯಾರು ನೋಡಿ, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಅಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಆದರೆ, ಶಿಕ್ಷಣ ಸಚಿವರ ಬಗ್ಗೆ ವಿಡಿಯೊ ಸಂವಾದ ನಡೆಸಿದ ವೇಳೆ ಮಾತನಾಡಿದ ವಿದ್ಯಾರ್ಥಿ ಯಾರು ಎಂಬುದು ಗೊತ್ತಾಗಿಲ್ಲ. ಸಚಿವರ ಸೂಚನೆ ಮೇರೆಗೆ ಅಧಿಕಾರಿಗಳು ವಿದ್ಯಾರ್ಥಿ ಪತ್ತೆಗೆ ಮುಂದಾಗಿದ್ದಾರೆ.