For the best experience, open
https://m.samyuktakarnataka.in
on your mobile browser.

ವಿದ್ಯುತ್ ಲಾಭ; ಗ್ರಾಹಕರಿಗೆ ಹಂಚಿಕೆ ಮಾಡಿ

03:00 AM Aug 02, 2024 IST | Samyukta Karnataka
ವಿದ್ಯುತ್ ಲಾಭ  ಗ್ರಾಹಕರಿಗೆ ಹಂಚಿಕೆ ಮಾಡಿ

ರಾಜ್ಯದಲ್ಲಿ ಉತ್ತಮ ಮಳೆಯಾಗಿ ದಿನದ ಬಳಕೆ ಇಳಿಮುಖಗೊಂಡಿದೆ. ವಿದ್ಯುತ್ ಹೆಚ್ಚುವರಿ ಮಾರಾಟದಿಂದ ೧೪೦೩ ಕೋಟಿ ರೂ. ಆದಾಯ ಬಂದಿದೆ. ಅಲ್ಲದೆ ಜಲ ವಿದ್ಯುತ್ ಜಲಾಶಯಗಳೆಲ್ಲ ತುಂಬಿರುವುದರಿಂದ ಮುಂದಿನ ೨೫೦ ದಿನ ವಿದ್ಯುತ್ ಸಮಸ್ಯೆ ಬರುವುದಿಲ್ಲ. ಹೀಗಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಬಿಲ್‌ನಲ್ಲಿ ಇಂಧನ ಹೊಂದಾಣಿಕೆ ದರವನ್ನು ರದ್ದುಪಡಿಸಬೇಕೆಂದು ಗ್ರಾಹಕರು ಒತ್ತಾಯಿಸಿದ್ದಾರೆ.
ಬರಗಾಲದಲ್ಲಿ ವಿದ್ಯುತ್ ಪೂರೈಕೆ ಕಷ್ಟವಾಗಿತ್ತು. ಪಂಜಾಬ್‌ನಿಂದ ಹೆಚ್ಚುವರಿ ವಿದ್ಯುತ್ ಪಡೆಯಬೇಕಾಗಿ ಬಂದಿತು. ಈಗ ಹೆಚ್ಚುವರಿ ವಿದ್ಯುತ್ ಲಭಿಸುತ್ತಿರುವುದರಿಂದ ಪಂಜಾಬ್‌ಗೆ ಸಾಲವಾಗಿ ಪಡೆದಿದ್ದ ವಿದ್ಯುತ್ ಹಿಂತಿರುಗಿಸಿರುವುದರಲ್ಲದೆ ಹೆಚ್ಚುವರಿ ವಿದ್ಯುತ್ ಮಾರಾಟ ಮಾಡಲು ಸಾಧ್ಯವಾಗಿದೆ. ಫೆಬ್ರವರಿಯಿಂದ ಜುಲೈವರೆಗೆ ೨೭೩೯ ದಶಲಕ್ಷ ಯೂನಿಟ್ ವಿದ್ಯುತ್ ಹೊರಗಿನಿಂದ ಖರೀದಿ ಮಾಡಲಾಗಿತ್ತು. ಪ್ರತಿ ಯೂನಿಟ್‌ಗೆ ಸರಾಸರಿ ೮.೭೯ ರೂ. ನೀಡಲಾಯಿತು. ಈಗ ೨೬೮೦.೧೦ ದಶಲಕ್ಷ ಯೂನಿಟ್‌ಗಳನ್ನು ಮಾರಾಟ ಮಾಡಿ ೧೪೦೩.೦೬ ಕೋಟಿ ರೂ. ಸಂಪಾದಿಸಲಾಗಿದೆ. ಇದರಿಂದ ಪ್ರತಿ ಯೂನಿಟ್‌ಗೆ ಸರಾಸರಿ ೫.೨೪ ರೂ. ನಂತೆ ಆದಾಯ ಬಂದಿದೆ.
ಇದಲ್ಲದೆ ಈಗ ಲಿಂಗನಮಕ್ಕಿ, ಸೂಪಾ ಮತ್ತು ಮಾಣೆ ಜಲಾಶಯಗಳು ಭರ್ತಿಯಾಗುವ ಹಂತ ತಲುಪಲಿದ್ದು, ಪ್ರತಿ ದಿನ ೨೨೪.೨೨ ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದಿಸಲು ಬೇಕಾಗುವಷ್ಟು ನೀರಿನ ಹರಿವು ಜಲಾಶಯಗಳಿವೆ. ನಾವು ಈಗ ಪ್ರತಿ ದಿನ ಬಳಸುತ್ತಿರುವುದು ೨೦೪.೮೮ ದಶಲಕ್ಷ ಯೂನಿಟ್. ಅದಕ್ಕಿಂತ ಜಲ ವಿದ್ಯುತ್ ಕೇಂದ್ರಗಳಿಗೆ ನೀರಿನ ಹರಿವು ಹೆಚ್ಚಾಗಿದೆ. ಈಗ ಇರುವ ನೀರಿನ ಸಂಗ್ರಹದಲ್ಲಿ ಇನ್ನೂ ೨೧೫ ದಿನ ವಿದ್ಯುತ್ ಉತ್ಪಾದನೆಗೆ ತೊಂದರೆ ಇಲ್ಲ. ಜಲ ವಿದ್ಯುತ್ ಉತ್ಪಾದನೆ ವೆಚ್ಚ ಬಹಳ ಕಡಿಮೆ. ಪ್ರತಿ ಯೂನಿಟ್ ದರ ೧.೧೨ ರೂ. ಮಾತ್ರ ಶರಾವತಿ ಕೇವಲ ೩೦ ಪೈಸೆಗೆ ಒಂದು ಯೂನಿಟ್ ವಿದ್ಯುತ್ ಕೊಡುತ್ತಿದೆ. ಈಗ ಪ್ರತಿದಿನ ಜಲ ವಿದ್ಯುತ್ ಮೂಲಗಳಿಂದ ೫೧.೩೧ ದಶಲಕ್ಷ ಯೂನಿಟ್ ಬಳಸುತ್ತಿದ್ದೇವೆ. ಗ್ರಾಹಕರು ಸರಾಸರಿ ಪ್ರತಿ ಯೂನಿಟ್‌ಗೆ ೭.೧೬ ರೂ, ಕೊಡುತ್ತಿದ್ದಾರೆ. ಅಲ್ಲದೆ ಪ್ರತಿ ತಿಂಗಳೂ ವಿದ್ಯುತ್ ಹೊಂದಾಣಿಕೆ ದರವನ್ನು ನೀಡುತ್ತಿದ್ದಾರೆ. ಇದು ಪ್ರತಿ ಯೂನಿಟ್‌ಗೆ ೨೦ ಪೈಸೆಯಿಂದ ೩೦ ಪೈಸೆವರೆಗೆ ವ್ಯತ್ಯಾಸವಾಗುತ್ತ ಹೋಗುತ್ತದೆ. ಪ್ರತಿ ತಿಂಗಳೂ ಇಂಧನ ದರ ಹೊಂದಾಣಿಕೆಯನ್ನು ಆಯಾ ಗ್ರಾಹಕರಿಂದ ಪಡೆದುಕೊಳ್ಳಲು ವಿದ್ಯುತ್ ನಿಯಂತ್ರಣ ಆಯೋಗ ಅನುಮತಿ ನೀಡಿದೆ. ಅದರಿಂದ ವಿದ್ಯುತ್ ದರ ಕಡಿಮೆ ಮಾಡಲು ಕೆಇಆರ್‌ಸಿ ಅನುಮತಿ ಬೇಕಿಲ್ಲ. ಎರಡು ತಿಂಗಳು ಇಂಧನ ದರ ಹೊಂದಾಣಿಕೆ ದರ ಪಡೆಯದೇ ಇದ್ದಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರಿಗೆ ಉತ್ತಮ ಉತ್ಪಾದನೆಗೆ ಅನುಕೂಲವಾಗುತ್ತದೆ. ಈಗ ಕೃಷಿ ಬಳಕೆಗೆ ವಿದ್ಯುತ್ ಪೂರೈಕೆ ಕಡಿಮೆ ಇರುವುದರಿಂದ ಆ ವಿದ್ಯುತ್ ಕೈಗಾರಿಕೆಗೆ ಲಭಿಸುವಂತೆ ಮಾಡಬಹುದು. ವಿದ್ಯುತ್ ದರ ಇಳಿಸುವ ಅಧಿಕಾರ ನಮಗಿಲ್ಲ ಎಂದು ಸರ್ಕಾರ ಹೇಳಬಹುದು. ಕೆಇಆರ್‌ಸಿಗೆ ಅಧಿಕಾರವಿದೆ ಎಂದು ಹೇಳಬಹುದು. ಕೆಇಆರ್‌ಸಿ ಅದನ್ನು ಕೈಗೊಳ್ಳಬೇಕಾದರೆ ಸಾರ್ವಜನಿಕ ಅಹವಾಲು ಕೇಳಬೇಕಾಗುತ್ತದೆ. ಅದರ ಬದಲು ರಾಜ್ಯದ ೫ ವಿತರಣ ಕಂಪನಿಗಳಿಗೆ ಆಯಾ ತಿಂಗಳು ಇಂಧನ ಖರೀದಿ ಹೊಂದಾಣಿಕೆ ದರವನ್ನು ಸಂಗ್ರಹಿಸುವ ಅಧಿಕಾರ ನೀಡಿರುವುದರಿಂದ ಎರಡು ತಿಂಗಳು ಅದನ್ನು ಮುಂದೂಡಬಹುದು. ಆಗ ಕಂಪನಿಗಳು ಗಳಿಸಿದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿದಂತಾಗುತ್ತದೆ.
ಕಲ್ಲಿದ್ದಲು ವಿದ್ಯುತ್
ಜಲ ವಿದ್ಯುತ್ ರೀತಿಯಲ್ಲಿ ಕಲ್ಲಿದ್ದಲು ಆಧರಿತ ವಿದ್ಯುತ್ ಕೇಂದ್ರಗಳನ್ನು ನಡೆಸಲು ಬರುವುದಿಲ್ಲ. ಕಲ್ಲಿದ್ದಲು ಖರೀದಿ ಮಾಡಬೇಕು. ಈಗ ಎಲ್ಲ ಕಡೆ ಮಳೆ ಬಂದಿರುವುದರಿಂದ ಕಲ್ಲಿದ್ದಲು ಗಣಿಯಲ್ಲೂ ಚಟುವಟಿಕೆ ನಿಂತುಹೋಗಿರುತ್ತದೆ. ಸೋಲಾರ್, ಪವನ ವಿದ್ಯುತ್ ಸಾಕಷ್ಟು ಇರುವುದರಿಂದ ಅದನ್ನೂ ಬಳಸಿಕೊಂಡು ಕಡಿಮೆ ದರದಲ್ಲಿ ವಿದ್ಯುತ್ ಪಡೆಯಬಹುದು. ವಿದ್ಯುತ್ ಉತ್ಪಾದನೆ ವೆಚ್ಚ ಅಧಿಕಗೊಂಡ ಕೂಡಲೇ ಅದೇ ತಿಂಗಳು ಗ್ರಾಹಕರ ಮೇಲೆ ವರ್ಗಾಯಿಸುವ ವಿತರಣ ಕಂಪನಿಗಳು ಲಾಭ ಬಂದಾಗ ಅದನ್ನು ಗ್ರಾಹಕರಿಗೆ ವರ್ಗಾಯಿಸಲು ಹಿಂಜರಿಯಬಾರದು. ನಷ್ಟದಲ್ಲಿ ಹೊರೆ ಹೊರುವ ಗ್ರಾಹಕರಿಗೆ ಲಾಭದ ಪಾಲನ್ನೂ ನೀಡುವುದನ್ನು ಧರ್ಮ. ಇದಕ್ಕೆ ಸರ್ಕಾರ ಹಿಂದಕ್ಕೆ ಸರಿಯಬಾರದು.
ಕಂಪನಿಗಳಿಗೆ ಸ್ಪಷ್ಟ ನಿರ್ದೇಶನವನ್ನು ಸರ್ಕಾರ ನೀಡಬೇಕು. ಕೊರೊನಾ ಕಾಲದಲ್ಲೂ ಗ್ರಾಹಕರು ಎಲ್ಲ ವಿತರಣ ಕಂಪನಿಗಳೊಂದಿಗೆ ಸಹಕರಿಸಿದ್ದಾರೆ. ಈಗಲೂ ಎಲ್ಲ ಕಡೆ ಮಳೆ ಬಂದು ರಾಜ್ಯದಲ್ಲಿ ೧೧೨೦ ಕಿಮೀ ವಿದ್ಯುತ್ ಮಾರ್ಗ, ೫೩ ಸಾವಿರ ಕಂಬಗಳು, ೪ ಸಾವಿರ ಟ್ರಾನ್ಸ್‌ಫಾರ್ಮರ್‌ಗಳು ಹೋಗಿವೆ. ಹಲವು ಕಡೆ ವಿದ್ಯುತ್ ಪೂರೈಕೆ ಸಮರ್ಪಕವಾಗಿಲ್ಲ. ಆದರೂ ಗ್ರಾಹಕರು ವಿದ್ಯುತ್ ಇಲಾಖೆಯೊಂದಿಗೆ ಸಹಕರಿಸಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಲಾಭಗಳಿಕೆಯಲ್ಲಿ ಒಂದಂಶವನ್ನು ಗ್ರಾಹಕರಿಗೆ ವರ್ಗಾಯಿಸುವುದು ಕಂಪನಿಗಳ ಕರ್ತವ್ಯವೂ ಹೌದು.
ಜಲವಿದ್ಯುತ್ ಯೋಜನೆ ಆರಂಭಿಸುವುದರಲ್ಲಿ ಕರ್ನಾಟಕ ಇಡೀ ದೇಶಕ್ಕೆ ಮಾದರಿ. ಶಿವನಸಮುದ್ರ ಜಲ ವಿದ್ಯುತ್ ಕೇಂದ್ರ ಆರಂಭವಾಗಿ ೧೨೦ ವರ್ಷಗಳು ಮೀರಿದೆ. ಈಗಲೂ ಈ ಘಟಕ ಕಾರ್ಯನಿರ್ವಹಿಸುತ್ತಿದೆ. ಶರಾವತಿ ಈಗಲೂ ಇಡೀ ದೇಶದಲ್ಲಿ ಅತ್ಯುತ್ತಮ ಜಲ ವಿದ್ಯುತ್‌ಕೇಂದ್ರಲ್ಲೊಂದು. ನಮ್ಮಲ್ಲಿ ಜಲ ವಿದ್ಯುತ್ ನಿಂದ ಹಿಡಿದು ಸೌರ ವಿದ್ಯುತ್‌ವರೆಗೆ ಎಲ್ಲ ಮೂಲಗಳ ವಿದ್ಯುತ್ ಲಭ್ಯ. ಹೀಗಿರುವಾಗ ನಮ್ಮಲ್ಲಿಯ ಗ್ರಾಹಕರಿಗೆ ಅತಿ ಕಡಿಮೆ ದರದಲ್ಲಿ ವಿದ್ಯುತ್ ಒದಗಿಸುವುದು ವಿದ್ಯುತ್ ಇಲಾಖೆಗೆ ಕರ್ತವ್ಯವೂ ಹೌದು. ಕೈಗಾರಿಕೆ ರಂಗದಲ್ಲಿ ಬೆಳವಣಿಗೆ ಕಾಣಬೇಕು ಎಂದರೆ ವಿದ್ಯುತ್ ಪೂರೈಕೆ ಉತ್ತಮವಾಗಿರಬೇಕು. ವಿದ್ಯುತ್ ಪೂರೈಕೆ ಉತ್ತಮವಾಗಿದ್ದರೆ ಕೈಗಾರಿಕೆರಂಗದಲ್ಲಿ ಬಂಡವಾಳ ಹೂಡಿಕೆ ಉತ್ತಮವಾಗಿರುತ್ತದೆ. ನಮ್ಮ ವಿದ್ಯುತ್ ವಿತರಣ ಕಂಪನಿಗಳು ಗ್ರಾಹಕರ ಆಕ್ರೋಶಕ್ಕೆ ಬಲಿಯಾಗುವ ಮುನ್ನ ಲಾಭವನ್ನು ಹಂಚಿ ಇಡೀ ದೇಶಕ್ಕೆ ಮಾದರಿಯಾಗುವ ಅವಕಾಶ ಈಗ ಬಂದಿದೆ.