ವಿದ್ಯೆಯೆಂಬ ಕಲ್ಪಲತೆ
ಶ್ರೀ ಶಂಕರಾಚಾರ್ಯರು ಹೇಳಿದ ಪ್ರಸಿದ್ಧವಾದ ಮಾತು. ಕಾ ಕಲ್ಪಲತಿಕಾಲೋಕೇ ಸಚ್ಛಿಷ್ಯಾಯ ಅರ್ಪಿತಾ ವಿದ್ಯಾ' ಈ ಲೋಕದ ಕಲ್ಪಲತೆ ಯಾವುದು ಸಚ್ಛಿಷ್ಯನಿಗೆ ನೀಡಲ್ಪಟ್ಟ ವಿದ್ಯೆ ಕಲ್ಪಲತೆ ಅಥವಾ ಕಲ್ಪವಲ್ಲೀ ಸ್ವರ್ಗಲೋಕದಲ್ಲಿರುವ ಕೇಳಿದ್ದನ್ನು ಕೊಡುವ ಈ ದಿವ್ಯವಾದ ಬಳ್ಳಿ, ಯಾವಾಗಲೂ ಇರುವ ಬಳ್ಳಿ ಸಚ್ಛಿಷ್ಯನಿಗೆ ವಿದ್ಯೆಯನ್ನು ಕೊಟ್ಟರೆ ಅದು ಇದೇ ರೀತಿಯಾಗುತ್ತದೆ. ವಿದ್ಯೆಗೆ ಕಲ್ಪಲತೆಯ ಪಟ್ಟವಿದೆ.
ಮಾತೇವ ರಕ್ಷತಿ ಪಿತೇವ ಹಿತೇ ನಿಯುಂಕ್ತೇ ಕಾಂತೇವ ಚಾಭಿರಮಯಪ್ಯನೀಯ ಖೇದಂ | ಕೀರ್ತಿಂ ಚ ದಿಕ್ಷು ವಿತನೋತಿ ತನೋತಿ ಲಕ್ಷ್ಮೀಂ ಕಿಂ ನ ಸಾಧಯತಿ ಕಲ್ಪಲತೇವ ವಿದ್ಯಾ ||
ವಿದ್ಯೆಯು ಬಾಲಕನನ್ನು ತಾಯಿ ರಕ್ಷಿಸುವಂತೆ ನಮ್ಮನ್ನು ರಕ್ಷಿಸುತ್ತದೆ. ಹಿತವಾದದ್ದು ಯಾವುದು ಅಹಿತವಾದದ್ದು ಯಾವುದು ಎಂಬ ವಿವೇಕವನ್ನು ಮಾಡುವ ಮೂಲಕ ತಂದೆಯಂತೆ ಹಿತದಲ್ಲಿ ತೊಡಗಿಸುತ್ತದೆ. ಪತ್ನಿಯಂತೆ ಖೇದವನ್ನು ಹೋಗಲಾಡಿಸುವ ಮೂಲಕ ವಿದ್ಯೆಯು ಸಂತೋಷಪಡಿಸುತ್ತಾಳೆ. ಎಲ್ಲ ಕಡೆ ವಿದ್ಯಾವಂತನ ಕೀರ್ತಿಯು ಹರಡುವಂತೆ ವಿದ್ಯೆಯು ಮಾಡುತ್ತದೆ. ಸಂಪತ್ತನ್ನೂ ತಂದುಕೊಡುತ್ತದೆ. ಇನ್ನೆಷ್ಟು ಹೇಳಿದರೂ ಕಮ್ಮಿಯೇ. ಒಂದೇ ಮಾತಿನಲ್ಲಿ ಹೇಳುವುದಾದರೆ ಕಲ್ಪಲತೆಯು ಕೇಳಿದ್ದನ್ನೆಲ್ಲ ಕೊಡುವಂತೆ ವಿದ್ಯೆಯೂ ಕೇಳಿದ್ದನ್ನೆಲ್ಲ ಕೊಡುತ್ತದೆ. ಹೀಗೆ ವಿದ್ಯೆಗೆ ಕಲ್ಪಲತೆಯ ಸ್ಥಾನವಿದೆ.
ಅರ್ಹನಾದ ಶಿಷ್ಯನಿಗೆ ಅದು ಕೊಡಲ್ಪಟ್ಟರೆ ಅದರ ಸಾಮರ್ಥ್ಯ ಇನ್ನಷ್ಟು ಹೆಚ್ಚುತ್ತದೆ. ಅಸೂಯೆ, ಅವಿಧೇಯತೆ, ಅಪ್ರಾಮಾಣಿಕತೆ ಎಂಬ ಮೂರು ದೋಷಗಳಿಲ್ಲದವ. ಅರ್ಹನೆನಿಸುತ್ತಾನೆ. "ಅಸೂಯಕಾಯ ಅನೃಜವೇ ಶಠಾಯ ಮಮಾ ಬ್ರೂಹಿ ವೀರ್ಯವತೀ ತಥಾಸ್ಯಾಮ್" ವಿದ್ಯಾದೇವಿ ಕೇಳಿಕೊಂಡಿರುವ ಪ್ರಾರ್ಥನೆಯಿದು. `ಅಸೂಯೆ ಉಳ್ಳ, ಅಪ್ರಾಮಾಣಿಕ, ಅವಿಧೇಯ ವ್ಯಕ್ತಿಗೆ ನನ್ನನ್ನು ಕೊಡಬೇಡಿ.' ಆದ್ದರಿಂದ ಈ ಮೂರು ದೋಷವಿಲ್ಲದ ವ್ಯಕ್ತಿ ಅರ್ಹ. ಅಂತವನಿಗೆ ವಿದ್ಯೆ ಕೊಟ್ಟರೆ ಅವನು ಅದನ್ನು ಇನ್ನಷ್ಟು ಬೆಳೆಸುತ್ತಾನೆ.