For the best experience, open
https://m.samyuktakarnataka.in
on your mobile browser.

ವಿನೂತನ ಮಾದರಿಯ ಪುಸ್ತಕ ಗೂಡಿಗೆ ಸಚಿವ ಖರ್ಗೆ ಮೆಚ್ಚುಗೆ

01:25 PM Oct 31, 2024 IST | Samyukta Karnataka
ವಿನೂತನ ಮಾದರಿಯ ಪುಸ್ತಕ ಗೂಡಿಗೆ ಸಚಿವ ಖರ್ಗೆ ಮೆಚ್ಚುಗೆ

ಬಳ್ಳಾರಿ ಜಿಲ್ಲೆಯ ಹ್ಯಾಳ್ಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸ್ ನಿಲ್ದಾಣವೊಂದರಲ್ಲಿ ಅರಿವು ಕೇಂದ್ರವನ್ನು “ಪುಸ್ತಕ ಗೂಡು“ ಎಂಬ ವಿನೂತನ ಮಾದರಿಯ ಓಪನ್ ಲೈಬ್ರರಿ

ಬೆಂಗಳೂರು: ಪುಸ್ತಕಗಳಿಗೆ ಮಿಗಿಲಾದ ಗೆಳೆಯರಿಲ್ಲ, ಜ್ಞಾನಕ್ಕೆ ಮಿಗಿಲಾದ ಸಂಪತ್ತಿಲ್ಲ, ಎಂಬ ಮಾತು ಸಾರ್ವಕಾಲಿಕ ಸತ್ಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ರಾಜ್ಯದ ಕೆಲವು ಉತ್ಸಾಹಿ ಗ್ರಾಮ ಪಂಚಾಯಿತಿಗಳು ಪುಸ್ತಕಗಳನ್ನು ಜನರಿಗೆ ಆಪ್ತವಾಗಿಸುವ ಪ್ರಯತ್ನವಾಗಿ ಅರಿವು ಕೇಂದ್ರಗಳಲ್ಲಿ ಹೊಸ ಹೊಸ ಪ್ರಯೋಗಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯ ಸಂಗತಿ.
ಇಂತಹ ಪ್ರಯತ್ನದ ಭಾಗವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇದ್ದಂತಹ ಓಪನ್ ಲೈಬ್ರರಿಯ ಪರಿಕಲ್ಪನೆಯನ್ನು ಅಳವಡಿಸಿಕೊಂಡಿರುವ ಬಳ್ಳಾರಿ ಜಿಲ್ಲೆಯ ಹ್ಯಾಳ್ಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಸ್ ನಿಲ್ದಾಣವೊಂದರಲ್ಲಿ ಅರಿವು ಕೇಂದ್ರವನ್ನು “ಪುಸ್ತಕ ಗೂಡು“ ಎಂಬ ವಿನೂತನ ಮಾದರಿಯ ಓಪನ್ ಲೈಬ್ರರಿಯನ್ನು ಸ್ಥಾಪಿಸಿ ಆಸಕ್ತರಿಗೆ ಮುಕ್ತವಾಗಿ ಪುಸ್ತಕಗಳು ದೊರಕುವಂತೆ ಮಾಡಿದೆ. ಹರಟೆಯ ಕಟ್ಟೆಗಳೆನಿಸಿಕೊಳ್ಳುವ ಬಸ್ ನಿಲ್ದಾಣವನ್ನು ಚರ್ಚೆಯ ಕಟ್ಟೆಯಾಗಿಸಿ, ಜ್ಞಾನ ಸಂಪಾದನೆಯ ಜಾಗವನ್ನಾಗಿಸುವ ಈ ಹಂಬಲಕ್ಕೆ ಶರಣು.
ಅರಿವು ಕೇಂದ್ರಗಳು ಜ್ಞಾನಗಂಗೋತ್ರಿಯಾಗಿ ಗ್ರಾಮೀಣ ಜನರ ಉನ್ನತಿಗಾಗಿ ಕೆಲಸ ಮಾಡಲಿವೆ ಎನ್ನುವುದಕ್ಕೆ ಈ ವಿಶೇಷ ಗ್ರಂಥಾಲಯ ಸಾಕ್ಷಿ ನುಡಿಯುತ್ತಿದೆ.ನಾಡಿನ ಯುವ ಜನತೆಗೆ ನನ್ನ ವಿಶೇಷ ಮನವಿ… ಸದಾ ಜೊತೆಯಲ್ಲೊಂದು ಪುಸ್ತಕ ಇಟ್ಟುಕೊಳ್ಳಿ, ನಿಮ್ಮ ಬಿಡುವಿನ ವೇಳೆಯಲ್ಲಿ ಕನಿಷ್ಠ ನಾಲ್ಕು ಪುಟಗಳನ್ನಾದರೂ ಓದುವ ಅಭ್ಯಾಸ ರೂಡಿಸಿಕೊಳ್ಳಿ, ವಾರಕ್ಕೆ ಕನಿಷ್ಠ ಒಂದು ಪುಸ್ತಕವನ್ನಾದರೂ ಓದುವ ಸಂಕಲ್ಪ ಮಾಡಿ, ನಿಮ್ಮ ಓದುಗ ಗೆಳೆಯರಲ್ಲಿ ಉತ್ತಮ ಪುಸ್ತಕಗಳ ಬಗ್ಗೆ ಮಾಹಿತಿ ಪಡೆಯಿರಿ, ಪುಸ್ತಕಗಳ ಕುರಿತು ಚರ್ಚಿಸಿ, ಯುವ ಜನರೆಲ್ಲರೂ ಗ್ರಂಥಾಲಯದಲ್ಲಿ ಸದಸ್ಯತ್ವ ಪಡೆಯಬೇಕು, ಜ್ಞಾನವೆನ್ನುವುದು ಹರಿಯುವ ನೀರಿನಂತಿರಬೇಕು, ಹಾಗಾಗಿ ನೀವು ಓದಿದ ನಂತರ ಇತರರಿಗೆ ಪುಸ್ತಕಗಳನ್ನು ಹಂಚಿಕೊಳ್ಳಿ, ಯಾವುದೇ ಪುಸ್ತಕಗಳು ಅತ್ಯಮೂಲ್ಯವಾದಂತವು, ಪುಸ್ತಕಗಳು ಹಾಳಾಗದಂತೆ ಜಾಗ್ರತೆಯಿಂದ ಕಾಪಾಡಿ, ನೀವು ಓದಿ ಮುಗಿಸಿದ ಹಳೆಯ ಪುಸ್ತಕಗಳನ್ನು ಸಮೀಪದ ಗ್ರಂಥಾಲಯಕ್ಕೆ ದೇಣಿಗೆ ನೀಡಿ, ಗ್ರಂಥಾಲಯದಿಂದ ಪಡೆಯುವ ಪುಸ್ತಕಗಳನ್ನು ಜತನದಿಂದ ಕಾಪಾಡಿ, ಓದಿದ ನಂತರ ಜವಾಬ್ದಾರಿಯುತವಾಗಿ ಹಿಂದಿರುಗಿಸಿ, ಹರಿಯುತ್ತಿರಲಿ ಜ್ಞಾನ ಗಂಗೋತ್ರಿ, ಮನುಕುಲದ ಜ್ಞಾನದಾಹ ತೀರಲು, ಅಜ್ಞಾನದ ಕೊಳೆ ತೊಳೆಯಲು ಸಹಕಾರಿ ಎಂದಿದ್ದಾರೆ.

Tags :