ವಿಪಕ್ಷ ನಾಯಕರ ವಿರುದ್ಧ ಲೋಕಾಯುಕ್ತರು ಕ್ರಮ ಜರುಗಿಸಲಿ
ಹುಬ್ಬಳ್ಳಿ: ಲೋಕಾಯುಕ್ತ ಸಂವಿಧಾನಬದ್ಧ ಹಕ್ಕು ಇರುವಂತಹ ಹುದ್ದೆ. ಇಂತಹ ಹುದ್ದೆ ಬಗ್ಗೆ `ಮ್ಯಾಚ್ ಫಿಕ್ಸಿಂಗ್' ಎಂಬ ಪದ ಬಳಸಿ ಹಗುರವಾಗಿ ಮಾತನಾಡಿರುವ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ವಿರುದ್ಧ ಲೋಕಾಯುಕ್ತರು ಕ್ರಮ ಜರುಗಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಒತ್ತಾಯಿಸಿದರು.
ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತರು ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ಗೌರವ ಕೊಟ್ಟು ವಿಚಾರಣೆಗೆ ನಿಗದಿತ ಸಮಯದಲ್ಲಿ ಹಾಜರಾಗಿ ಉತ್ತರ ಕೊಟ್ಟು ಬಂದಿದ್ದಾರೆ. ಮುಖ್ಯಮಂತ್ರಿಗಳು ವಿಚಾರಣೆಗೆ ಹಾಜರಾಗಿದ್ದಕ್ಕೆ ನೀವು(ಬಿಜೆಪಿಯವರು) ಖುಷಿ ಪಡಬೇಕು. ಅದನ್ನು ಬಿಟ್ಟು ಲೋಕಾಯುಕ್ತದಂತಹ ಸಾಂವಿಧಾನಿಕ ಹುದ್ದೆ, ರಾಜಕೀಯದವರು ನೇಮಿಸಿದ ಹುದ್ದೆಗಳಲ್ಲ. ಸ್ಥಾನಮಾನಕ್ಕೆ ಅಗೌರವ ತೋರುವ ರೀತಿ ಮ್ಯಾಚ್ ಫಿಕ್ಸಿಂಗ್ ಎಂಬ ಪದ ಬಳಕೆ ಖಂಡನೀಯವಾದುದು ಎಂದು ಡಿ.ಕೆ ಶಿವಕುಮಾರ ಹೇಳಿದರು.
ಲೋಕಾಯುಕ್ತರನ್ನು ನೇಮಕ ಮಾಡಿದರ‍್ಯಾರು? ಯಾರ ಕಾಲದಲ್ಲಿ ನೇಮಕ ಮಾಡಿದ್ದು? ಅವರ ಕಾಲದಲ್ಲೇ ನೇಮಕ ಮಾಡಿದವರ ಮೇಲೆಯೇ ಅಪನಂಬಿಕೆ ಎಂದರೆ ಏನರ್ಥ. ಲೋಕಾಯುಕ್ತರ ಬಗ್ಗೆ ಹೀಗೆ ಅನುಮಾನ ವ್ಯಕ್ತಪಡಿಸಿದರೆ ಆ ಸ್ಥಾನಕ್ಕೆ ದೊಡ್ಡ ಅಗೌರವ ತೋರಿದಂತೆಯೇ ಎಂದು ಪ್ರತಿಪಾದಿಸಿದರು.