ವಿಮಾನ ಹಾರಿಸಿ ಕಲಿತ ಪಾಠ
ಮುಂಬೈನಲ್ಲಿ ಶಾಲಾ ಶಿಕ್ಷಣ ಮುಗಿಸಿ ರತನ್ ನೇರವಾಗಿ ಹಾರಿದ್ದು ಅಮೆರಿಕಕ್ಕೆ. ಆಗವರ ವಯಸ್ಸು ಕೇವಲ ೧೭. ಕಾರ್ನೆಲ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿದ ಅವರ ಕೈಗೆ ೧೯೬೨ರ ಹೊತ್ತಿಗೆ ವಾಸ್ತುಶಿಲ್ಪದ ಪದವಿ ಬಂದಿತ್ತು. ಇದೇ ಹೊತ್ತಿನಲ್ಲಿ ನಡೆದ ಒಂದು ಘಟನೆ ರತನ್ ಟಾಟಾ ಅವರ ಮಾತುಗಳಲ್ಲೇ ಕೇಳುವಂಥದ್ದು. `ನನಗಾಗ ೧೭ ವರ್ಷ. ಆ ವಯಸ್ಸಿಗೆ ಅಮೆರಿಕಾದಲ್ಲಿ ಪೈಲೆಟ್ ಪರವಾನಿಗೆ ಕೊಡಲಾಗುತ್ತಿತ್ತು. ಆದರೆ ನಾನೊಬ್ಬನೇ ವಿಮಾನವನ್ನು ಬಾಡಿಗೆ ತೆಗೆದುಕೊಂಡು ಹಾರಿಸಲು ಸಾಧ್ಯವಿರಲಿಲ್ಲ. ಹಾಗಾಗಿ ಕೆಲ ಸಹಪಾಠಿಗಳ ಜೊತೆ ಮಾತನಾಡಿ ವಿಮಾನ ಬಾಡಿಗೆಗೆ ಹಣವನ್ನು ಎಲ್ಲರೂ ಹಾಕೋಣ ಎಂದು ಒಪ್ಪಿಸಿದೆ. ವಿಮಾನ ಹಾರಿಸುವ ಜವಾಬ್ದಾರಿಯನ್ನೂ ತೆಗೆದುಕೊಂಡೆ. ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಒಮ್ಮಿಂದೊಮ್ಮೆಲೇ ಆಕಾಶದಲ್ಲಿ ಹಾರಾಡುತ್ತಿದ್ದ ವಿಮಾನ ಅಲುಗಾಡಲು ಶುರುವಾಯಿತು. ನಂತರ ಎಂಜಿನ್ ನಿಂತು ಹೋಯಿತು. ಆನಂತರ ವಿಮಾನದ ಪ್ರೊಪೆಲ್ಲರ್ ಕೂಡ ನಿಂತಿತು. ಆಗ ಎಂಜಿನ್ ಇಲ್ಲದೆಯೇ ವಿಮಾನ ಆಕಾಶದಲ್ಲಿ ಹಾರಾಡುತ್ತಿತ್ತು. ನನ್ನ ಜೊತೆ ಇದ್ದವರೆಲ್ಲ ಸ್ತಬ್ಧರಾಗಿ ಬಿಟ್ಟರು. ಆದರೆ ನನ್ನ ತಲೆಯಲ್ಲಿದ್ದದ್ದು ಮಾತ್ರ ವಿಮಾನವನ್ನು ಹೇಗೆ ಲ್ಯಾಂಡ್ ಮಾಡಿಸಬೇಕು ಎಂಬ ವಿಚಾರ. ಎಂಜಿನ್ ನಿಂತ ಮಾತ್ರಕ್ಕೆ ಲಘು ವಿಮಾನ ಕುಸಿದು ಬಿಡುವುದಿಲ್ಲ. ಎಷ್ಟು ಎತ್ತರಕ್ಕೆ ಹಾರುತ್ತಿದ್ದೇವೆ, ಎಷ್ಟು ಗ್ಲೆಡಿಂಗ್ ಸಮಯ ಇದೆ ಎಂಬ ಆಧಾರದ ಮೇಲೆ ವಿಮಾನ ಲ್ಯಾಂಡ್ ಮಾಡಬಹುದು. ಹಾಗೆಯೇ ಲ್ಯಾಂಡ್ ಮಾಡಿಸಿದೆ.' ಎಂಥದೇ ಸಂದಿಗ್ಧ ಸಂದರ್ಭದಲ್ಲೂ ತಲೆಯನ್ನು ಶಾಂತವಾಗಿಟ್ಟುಕೊMಡರೆ ಏನನ್ನೂ ಬೇಕಾದರೂ ಸಾಧಿಸಬಹುದು ಎಂಬ ಪಾಠವನ್ನು ಈ ಘಟನೆಯಿಂದ ರತನ್ ಟಾಟಾ ಕಲಿತಿದ್ದರು.