ವಿರೋಧ ಪಕ್ಷಗಳಿಂದ ಧರಣಿ: ವಿಧಾನಸಭೆ ಕಲಾಪ ಸೋಮವಾರಕ್ಕೆ ವಿಸ್ತರಣೆ
ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧದ ನಿರ್ಣಯಗಳನ್ನು ವಾಪಸ್ ಪಡೆಯುವಂತೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಧರಣಿ ಮುಂದುವರಿಸಿರುವ ಕಾರಣದಿಂದ ವಿಧಾನಸಭೆ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.
ಪೂರ್ವ ನಿಗದಿ ಪ್ರಕಾರ ವಿಧಾನಸಭೆ ಕಲಾಪ ಇಂದಿಗೆ ಮುಕ್ತಾಯವಾಗಬೇಕಿತ್ತು. ಕೆಲ ಮಸೂದೆಗಳ ಅಂಗೀಕಾರ ಬಾಕಿ ಹಿನ್ನೆಲೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಲು ಬಾಕಿ ಇರುವುದರಿಂದ ವಿಧಾನಸಭೆ ಕಲಾಪವನ್ನು ಫೆಬ್ರವರಿ 26 ಸೋಮವಾರದವರೆಗೆ ಮುಂದೂಡಲಾಗಿದೆ. ಶುಕ್ರವಾರ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಧರಣಿ ಮುಂದುವರಿಸಿದರು. ಹತ್ತು ನಿಮಿಷ ಕಲಾಪ ಮುಂದೂಡಿದ ಸಭಾಧ್ಯಕ್ಷ ಯು.ಟಿ. ಖಾದರ್, ತಮ್ಮ ಕಚೇರಿಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ಸಂಧಾನಕ್ಕೆ ಯತ್ನಿಸಿದರು. ಆದರೆ, ಬಿಜೆಪಿ ಸದಸ್ಯರು ಪಟ್ಟು ಸಡಿಲಿಸದ ಕಾರಣ ಸಂಧಾನ ಯತ್ನ ವಿಫಲವಾಯಿತು. ಪುನಃ ಕಲಾಪ ಆರಂಭವಾದಾಗಲೂ ವಿರೋಧ ಪಕ್ಷಗಳ ಸದಸ್ಯರು ಧರಣಿ ಮುಂದುವರಿಸಿದರು. ಸ್ಪೀಕರ್ ಸದನದ ಕಲಾಪವನ್ನು ಸೋಮವಾರ ಬೆಳಿಗ್ಗೆ 9.30ಕ್ಕೆ ಮುಂದೂಡಿದರು.