ವಿಷಯಾಂತರದಲ್ಲಿ ಸಿದ್ದರಾಮಯ್ಯ ನಿಷ್ಣಾತರು
ಹುಬ್ಬಳ್ಳಿ: ವಿಷಯಾಂತರ ಮಾಡುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಷ್ಣಾತರು. ಜನರ ಗಮನ ಬೇರೆಡೆ ಸೆಳೆಯುವ ಮೂಲಕ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ಉಪನಾಯಕ ಹಾಗೂ ಶಾಸಕ ಅರವಿಂದ ಬೆಲ್ಲದ ಕಿಡಿಕಾರಿದ್ದಾರೆ.
೫೦ ಕೋಟಿ ಕೊಟ್ಟು ೫೦ ಶಾಸಕರನ್ನು ಕರೆದುಕೊಂಡು ಸರ್ಕಾರ ಬೀಳಿಸಲು ಬಿಜೆಪಿ ಪ್ಲ್ಯಾನ್ ಮಾಡಿದೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಪ್ರವಾಹ ಬಂದಿದೆ. ರೈತರಿಗೆ ಒಂದೇ ಒಂದು ರೂಪಾಯಿ ಕೂಡ ಪರಿಹಾರ ಕೊಟ್ಟಿಲ್ಲ. ಅಭಿವೃದ್ಧಿ ಕಾರ್ಯಗಳು ಬಹುತೇಕ ನನೆಗುದಿಗೆ ಬಿದ್ದಿದೆ. ಇದು ಯಾವುದರ ಬಗ್ಗೆಯೂ ಸಿಎಂ ಆಗಲಿ, ಸರ್ಕಾರವಾಗಲಿ ತಲೆ ಕೆಡೆಸಿಕೊಂಡಿಲ್ಲ ಎಂದು ಟೀಕಿಸಿದ್ದಾರೆ.
ಮುಡಾ, ವಾಲ್ಮೀಕಿ ಹಗರಣ ಮಾಡಿರುವ ಸಿಎಂ ಸಿದ್ದರಾಮಯ್ಯನವರು, ವಿಷಯಾಂತರ ಮಾಡಲು ಈ ರೀತಿ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಚುನಾವಣೆ ನಡೆದು ಒಂದೂವರೆ ವರ್ಷವಾಗಿದೆ. ಯಾವುದೇ ಒಂದು ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ಸಿನವರು ಮುಡಾದಲ್ಲಿ, ವಾಲ್ಮೀಕಿ ನಿಗಮದಲ್ಲಿ ದೊಡ್ಡ ದೊಡ್ಡ ಲಫಡಾ ಮಾಡಿದ್ದಾರೆ. ಇವರು ಸ್ವಚ್ಛವಾಗಿದ್ದರೆ ಯಾವ ಇಡಿ (ಜಾರಿ ನಿರ್ದೇಶನಾಲಯ) ಏನೂ ಮಾಡಲು ಆಗುತ್ತಿರಲಿಲ್ಲ. ಲೂಟಿ ಮಾಡಿಲ್ಲ ಎನ್ನುವುದೇ ಆದರೇ ಇವರ ಹತ್ತಿರ ಅಷ್ಟೊಂದು ದುಡ್ಡು ಬರಲು ಹೇಗೆ ಸಾಧ್ಯ? ಸಾವಿರಾರು ಕೋಟಿ ಲೂಟಿ ಮಾಡಿ ಏಷ್ಯಾದಲ್ಲಿ ಅತ್ಯಂತ ದೊಡ್ಡ ಪಬ್ ಕಟ್ಟಿಸಿರುವುದು ಇದಕ್ಕೆ ನಿದರ್ಶನವಾಗಿದೆ ಎಂದು ಹೇಳಿದರು.