ವೈಭವದ ಮೈಲಾಪುರ ಮೈಲಾರಲಿಂಗೇಶ್ವರ ಜಾತ್ರೆ
ಯಾದಗಿರಿ: ಕಲ್ಯಾಣ ಕರ್ನಾಟಕದಲ್ಲಿಯೇ ಅತೀ ದೊಡ್ಡ ಜಾತ್ರೆ, ಮೈಲಾರಲಿಂಗ ದೇವರ 77 ಕ್ಷೇತ್ರಗಳ ಪೈಕಿ ಕೊನೆಯದಾಗಿರುವ ಯಾದಗಿರಿ ತಾಲೂಕಿನ ಮೈಲಾಪುರದ ಮೈಲಾರಲಿಂಗೇಶ್ವರ ಜಾತ್ರೆ ಮಂಗಳವಾರ ವೈಭವದಿಂದ ನಡೆಯಿತು.
ರಾಜ್ಯ ಸೇರಿ ಹೊರರಾಜ್ಯಗಳಿಂದ ಬಂದಿದ್ದ ಭಕ್ತರು ಮೈಲಾಪುರದ ಮಲ್ಲಯ್ಯನಿಗೆ ಪಲ್ಲಕ್ಕಿ ಮೇಲೆ ಭಂಡಾರ ಅರ್ಪಿಸಿ ತಮ್ಮ ಹರಕೆ ತಿರಿಸಿದರು. ʻಏಳು ಕೋಟಿ ಏಳು ಕೋಟಿʼ `ಮಲ್ಲಯ್ಯ ಪರಾಕ್' ಎಂಬಿತ್ಯಾದಿ ಜಯಘೋಷಗಳೊಂದಿಗೆ ಮಲ್ಲಯ್ಯನ ಬೆಟ್ಟ ಏರಿ, ಜಯಘೋಷಗಳು ಕೂಗಿದ ಭಕ್ತರು, ಇನ್ನೊಂದೆಡೆ ಭಂಡಾರವನ್ನು ಎರಚುವ ಮೂಲಕ ಸಂಭ್ರಮಿಸಿದರು.
ಹೊನ್ನಕೆರೆಗೆ ಪಲ್ಲಕ್ಕಿ ಉತ್ಸವದೊಂದಿಗೆ ತೆರಳುವಾಗ ಪಲ್ಲಕ್ಕಿ ಮೇಲೆ ಭಕ್ತರು ಭಂಡಾರ ಅರ್ಪಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು. ಜೊತೆಗೆ ಬಂಡೆಯ ಕಲ್ಲಿಗೆ ಕಟ್ಟಿದ ಸರಪಳಿ ಹರಿಯುವುದು ಈ ಜಾತ್ರೆಯ ಪ್ರಮುಖ ಪದ್ಧತಿಯಾಗಿದೆ. ಈ ಸರಪಳಿಯನ್ನು ಮಲ್ಲಯ್ಯನ ಭಕ್ತರು ಹರಿದು ಸಂಭ್ರಮಪಟ್ಟರು.
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದ ಭಾನುವಾರ ಬೆಳಿಗ್ಗೆಯಿಂದಲೇ ಆಗಮಿಸಿದ ಭಕ್ತರು ಹೊನ್ನಕೆರೆಯಲ್ಲಿ ಪುಣ್ಯ ಸ್ನಾನ ಮಾಡಿ, ಸರದಿಯಲ್ಲಿ ಗಂಟೆಗಳ ಕಾಲ ನಿಂತು, ಮೈಲಾರಲಿಂಗೇಶ್ವರನ ದರ್ಶನ ಪಡೆದರು.
ಸೂಕ್ತ ಬಂದೋಬಸ್ತ್: ಮೈಲಾಪುರ ಜಾತ್ರೆ ಅಂಗವಾಗಿ ಮುಂಜಾಗ್ರತೆ ಕ್ರಮವಾಗಿ 4 ಡಿವೈಎಸ್‌ಪಿ, 14 ಸಿಪಿಐ, 37 ಪಿಎಸ್‌ಐ, 400 ಗೃಹ ರಕ್ಷಕ ದಳ ಸಿಬ್ಬಂದಿ, 370 ಪಿಸಿ, 3 ಡಿಎಆರ್ ತುಕಡಿ ನಿಯೋಜಿಸಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.
ನಿಷೇಧದ ನಡುವೆಯೂ ಕುರಿಮರಿ ಎಸೆತ
ಜಾತ್ರೆ ವೇಳೆ ಪಲ್ಲಕ್ಕಿ ಮೆರವಣಿಗೆ ವೇಳೆ ಕುರಿ ಮರಿ ಎಸೆಯುವ ಪದ್ಧತಿ ನಿಷೇಧಿಸಿರುವ ಜಿಲ್ಲಾಡಳಿತ ಕಣ್ತಪ್ಪಿಸಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆಯೂ ಭಕ್ತರು ಕುರಿ ಮರಿ ಎಸೆದ ಘಟನೆ ಸಹ ನಡೆದಿದೆ ಎನ್ನಲಾಗಿದೆ.