ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಆಹಾರ: ಪ್ರಸಾದ, (ತಬರೂಕ)

04:00 AM Apr 26, 2024 IST | Samyukta Karnataka

ನಮ್ಮ ದೇಹದ ಹಂಬಲವೆಂದರೆ ಆಹಾರ. ಎಲ್ಲ ಜೀವಿಗಳ ಬಯಕೆ ಸಹ ಆಹಾರ. ಹುಟ್ಟಿದ ಜೀವ ಮೊದಲು ಹಂಬಲಿಸುವುದು ತಾಯಿಯ ಹಾಲಿಗೆ. ಅದನ್ನು ನಾವು ದೈಹಿಕ ಆಹಾರವೆನ್ನುತ್ತೇವೆ. ಅದರಿಂದ ದೇಹದ ಪೋಷಣೆ ಸಾಧ್ಯ. ನಾವು ಸೇವಿಸುವ ಪ್ರತಿಯೊಂದು ಆಹಾರ ಪಾನೀಯಗಳು, ಸೇವಿಸುವ ಮೊದಲು ಅವುಗಳ ನೈವೇದ್ಯವಾಗಬೇಕು. ಆಗ ಅವು ಪ್ರಸಾದವಾಗಿ ನಮ್ಮ ದೇಹಕ್ಕೆ ನಿಜವಾದ ಪೋಷಣೆ ಸಿಗುತ್ತದೆ.
ಇಸ್ಲಾಮಿನ ನಡವಳಿಕೆಯಲ್ಲಿ ಯಾವುದೇ ಕೆಲಸದ ಪ್ರಾರಂಭದಲ್ಲಿ ಅಲ್ಲಾಹನ ಸ್ಮರಣೆ ಆಗುತ್ತದೆ. ಆಗ ಅದೆಲ್ಲ ತಬರೂಕ ಅಂದರೆ ಪ್ರಸಾದವಾಗುತ್ತದೆ. ಕುರಾನಿನ 'ತಹಾ' ಎಂಬ ಅಧ್ಯಾಯದಲ್ಲಿ (೨೦:೧೩) ದೇವರು ನಿಮಗೆ ನೀಡಿರುವ ಆಹಾರ ನಿಮ್ಮ ಪೋಷಣೆಗೆ ಉತ್ತಮವಾಗಿ ಹಾಗೂ ಕೊನೆಯವರೆಗೆ ಅದು ಇರುತ್ತದೆ. ಇಂತಹ ಆಹಾರದಿಂದ ದೇಹದ ಪೋಷಣೆಯ ಜೊತೆಗೆ ನಮ್ಮ ಅಧ್ಯಾತ್ಮ ಪೋಷಣೆಯು ಆಗಬೇಕು. ಅದು ನಮ್ಮ ಭೌತಿಕ ವಿಕಾಸಕ್ಕೆ ಅವಶ್ಯ ಎಂಬುದನ್ನು ಅನೇಕ ಶರಣರು, ಸಂತರು, ಪ್ರಸ್ತಾಪಿಸಿದ್ದಾರೆ. ಕೇವಲ ದೈಹಿಕ ಪೋಷಣೆ ಆದರೆ ಸಾಲದು. ನಮ್ಮ ಅಧ್ಯಾತ್ಮಿಕ ಪೋಷಣೆಯೂ ಆಗಬೇಕು. ಜೀಸಸ್ ಕ್ರೈಸ್ತರು ಹೇಳುತ್ತಾರೆ ಮನುಷ್ಯ ಕೇವಲ ದೈಹಿಕ ಆಹಾರದಿಂದ ಬದುಕಲು ಆಗದು (ಮ್ಯಾಥ್ಯೂ (೪:೪) ಎಂದು.
ನಮ್ಮ ಪಚನಕ್ರಿಯೆಗೆ ಸಹಾಯಕಾರಿ ಆಗುವ ಆಹಾರ ಪಡೆದರೆ ನಮ್ಮ ಅಧ್ಯಾತ್ಮಿಕ, ಆಹಾರ, ತಿಳಿವಳಿಕೆ, ನಮ್ಮ ಜ್ಞಾನ ಹಾಗೂ ಜೀವನವನ್ನು ಅವಲೋಕಿಸಲು, ಗಮನಿಸಲು, ಒಳಿತು ಕೆಡಕುಗಳನ್ನು ಪರೀಕ್ಷಿಸಲು ಹಚ್ಚುತ್ತದೆ.
ನಾವು ಸೇವಿಸುವ ಪ್ರತಿಯೊಂದು ಆಹಾರ, ನೀರಿನಲ್ಲಿ ದೈವಿಕ ಶಕ್ತಿ ಇರುವುದನ್ನು ನಮ್ಮ ಶರಣರು, ಸಂತರು ಹೇಳಿದ್ದಾರೆ. ಆಹಾರದಲ್ಲಿ, ಪ್ರಸಾದ ನೀರಿನಲ್ಲಿ ತೀರ್ಥವಿದೆ. ನಮ್ಮ ವಿಚಾರ ಶಕ್ತಿಯಿಂದ ಆಲೋಚನೆಯಿಂದ ದೈಹಿಕ ಆಹಾರದಲ್ಲಿ ದೈವಿಕತೆಯನ್ನು ಹುಡುಕಬೇಕಾದರೆ ನೀಡಿದವನ ಸ್ಮರಣೆ ಮಾಡಬೇಕು. ಕೊಟ್ಟಿ ದ್ದವನನ್ನು ನೆನಪಿಸುತ್ತ ಸೇವಿಸಿದಾಗ ಆಹಾರ ಪ್ರಸಾದ, ನೀರು ತೀರ್ಥವಾಗುತ್ತದೆ.
ಕುರಾನಿನ ಅಧ್ಯಾಯ ಅಬಸ್ (೮೦: ೨೪) ಶ್ಲೋಕದಲ್ಲಿ ಅಲ್ಲಾಹನು ಮನುಷ್ಯನು ತನ್ನ ಆಹಾರದ ಕಡೆ, ಒಮ್ಮೆ ನೋಡಲಿ' ಎಂದಿದ್ದಾನೆ. ನಾವು ಪಡೆದುದ್ದೆಲ್ಲವೂ ಆತನ ಕರುಣೆಯ ಫಲ ಎಂಬುವುದನ್ನು ಅರಿಯಲು ಬಹಳ ಶ್ರಮಪಡುವ ಅಗತ್ಯವಿಲ್ಲ. ನಾವು ಪಡೆದಾಗ ಇದು ಹೇಗೆ ಸಾಧ್ಯವಾಯಿತು ಎಂಬುದರ ಆಲೋಚನೆ ಮಾಡಿದರೆ ಸಾಕು. 'ದೇವರೇ ನೀನೆಷ್ಟು ಕರುಣಾಮಯಿ. ನಮ್ಮನ್ನೆಲ್ಲ ಏನೆಲ್ಲ ರೀತಿಯಿಂದ ಪೋಷಿಸುತ್ತಿರುವೆ' ಎಂಬ ಒಂದು ಚಿಕ್ಕ ಪ್ರಾರ್ಥನೆ ನಮ್ಮ ತುಟಿಗಳ ಮೇಲೆ ಸುಳಿದರೆ ಸಾಕು. ನಾವು ಸೇವಿಸುವ ಆಹಾರ ಎಲ್ಲಿಂದ ಬಂತು ಎಂಬುದನ್ನು ನಾವು ಸ್ವಲ್ಪ ವಿಚಾರಿಸಿದಾಗ, ಕೆಲಸಗಾರರ ಒಂದು ಬೃಹತ್ ಚಿತ್ರವೇ ನಮ್ಮ ಕಣ್ಣು ಮುಂದೆ ನಿಂತು ಅಲ್ಲಿ ಸಾವಿರಾರು ಜನರ ಕಾಯಕ ಗೋಚರಿಸುತ್ತದೆ. ರೈತರು ಹೊಲದಲ್ಲಿ ದುಡಿಯುವ ಕಾರ್ಮಿಕರು ಬೆಳೆಯನ್ನು ನಮ್ಮತನಕ ಒಯ್ಯುವ ಅನೇಕರು ಕಾಣುತ್ತಾರೆ. ಅವರೆಲ್ಲರ ಕೆಲಸ ನಮಗಾಗಿ ಇರುವುದರಿಂದ ಅದು ಕಾಯಕವಾಗುತ್ತದೆ. ಇಂತಹ ಕಾಯಕದ ಫಲ ನಮಗೆ ಅಧ್ಯಾತ್ಮಿಕ ಆಹಾರವಾಗುತ್ತದೆ. ಆಗ ನಾವುಓ ಜನರೇ ನಿಮ್ಮ ಕಾಯಕದ ಫಲ ನಾವೆಲ್ಲ ಅನುಭವಿಸುತ್ತಿದ್ದೇವೆ. ನಿಮಗೆ ಧನ್ಯವಾದಗಳು' ಎಂದಾಗ ನಾವು ಮಾನವ ಕುಲವನ್ನು ನಿರ್ಮಿಸಿದವನ ಆಭಾರಿಗಳಾಗುತ್ತೇವೆ. ಇದು ಒಂದೆಡೆ ದೇವರ ಸ್ಮರಣೆ, ಆದರೆ ಇನ್ನೊಂದೆಡೆ ಕಾಯಕದಲ್ಲಿ ತೊಡಗಿದವರ ಉಪಕಾರ ಸ್ಮರಣೆ ಮಾಡಿದಂತಾಗುತ್ತದೆ.
ಸಂತೋಷ, ಪ್ರೀತಿ, ಸಮಾಧಾನ, ಶಾಂತಿ, ತಾಳ್ಮೆ, ಕರುಣೆ, ಸೌಮ್ಯ ನಡುವಳಿಕೆ, ವಿಶ್ವಾಸ ಇವೆಲ್ಲ ನಮ್ಮ ಆಹಾರದಲ್ಲಿ ಪರೋಕ್ಷವಾಗಿದ್ದು ನಮಗೆ ಸಿಗುವುದೆಲ್ಲವು ದೈವಿಕ ಕಾಣಿಕೆಗಳಾಗಬೇಕಾದರೆ ಅದು ಪ್ರಭುವಿಗೆ ನೈವೇದ್ಯವಾಗಬೇಕು.
ಆಗ ನಾವು ಸೇವಿಸುವ ಆಹಾರ ಪ್ರಸಾದ, (ತಬರೂಕ) ನೀರು ತೀರ್ಥ, (ದುವಾ-ಎ- ಆಬ) ಕೆಲಸ- ಕಾಯಕ, ಮಾತು-ವಚನ, ಪ್ರಯಾಣ-ಯಾತ್ರೆ, ಮನೆ-ಮಂದಿರವಾಗಿ ನಾವು-ಮಾನವರಾಗುತ್ತೇವೆ.

Next Article