ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಈದುಲ್ ಫಿತ್ರ …… ಪದವಿ ದಾನ ಸಂಭ್ರಮ

03:00 AM Apr 12, 2024 IST | Samyukta Karnataka

ರಂಜಾನ್ ಈದ್ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಈ ಹಬ್ಬದ ಇಸ್ಲಾಮಿ ಹೆಸರು ‘ಈ ದುಲ್ ಫಿತರ್’ಅಂದರೆ ರಂಜಾನ್ ತಿಂಗಳ ಕೊನೆಗೆ ಉಪವಾಸ ವ್ರತವನ್ನು ಮುಗಿಸಿ ಅಲ್ಲಾಹನಿಗೆ ಕೃತಜ್ಞತೆಗಳನ್ನು ಅರ್ಪಿಸಿ ಆತನ ಸಂಪ್ರೀತಿಗಾಗಿ ಬಡವರಿಗೆ ಕಡ್ಡಾಯ ದಾನ ಮಾಡುವ ಹಬ್ಬ.
ನಿತ್ಯ ಪ್ರಾರ್ಥನೆ, ಉಪವಾಸ ವ್ರತ, ಪವಿತ್ರ ಗ್ರಂಥದ ಪಠಣ, ದಾನ, ಸನ್ನಡತೆ ಮುಂತಾದವುಗಳ ಒಂದು ಆದರ್ಶನಾಗರಿಕ ಸಮಾಜ ರಚನೆಯಲ್ಲಿ ತೊಡಗಿದ್ದ ರಂಜಾನ್ ಒಂದು ತಿಂಗಳಿನವರೆಗೆ ನಮ್ಮೆಲ್ಲರಿಗೆ ತರಬೇತಿ ನೀಡಿ ಈದ್ ದಿನ ತರಬೇತಿ ಪಡೆದವರೆಲ್ಲರಿಗೂ ದೀಕ್ಷೆ ಕೊಟ್ಟು ಪದವಿ ಪ್ರದಾನಿಸಿ ಎಲ್ಲಾ ಹಬ್ಬಗಳಂತೆ ಇದೂ ಒಂದು ಹಬ್ಬವಾಗಿ ಮತ್ತೆ ಬರುವುದಾಗಿ ಹೇಳಿ ಹೋಗಿದೆ.
ಧಾರ್ಮಿಕ ಆಚರಣೆಯತ್ತ ಗಮನಹರಿಸಿ ನಾವು ಹಬ್ಬ, ಉತ್ಸವಗಳನ್ನು ಆಚರಿಸುತ್ತೇವೆ. ಪ್ರತಿಯೊಂದು ಹಬ್ಬಕ್ಕೆ ಒಂದು ಧಾರ್ಮಿಕ ರೂಪ ಇದ್ದರೂ ಅದಕ್ಕೆ ತನ್ನದೇ ಆದ ಒಂದು ಸಾಮಾಜಿಕ ಉದ್ದೇಶ ಇರುತ್ತದೆ. ಈ ಉದ್ದೇಶವನ್ನು ನಾವು ಧಾರ್ಮಿಕ ಆಚರಣೆಯ ಸಂಭ್ರಮದಲ್ಲಿ ಮರೆತೇ ಬಿಡುತ್ತೇವೆ. ಹಬ್ಬ ಆದಮೇಲೆ ಆ ಹಬ್ಬವನ್ನು ಸಹ ಮರೆಯುತ್ತೇವೆ. ಹಾಗೆಯೇ ಈಗ ಹೋಗಿರುವ ಈದುಲ್ ಫಿತ್ರ (ರಂಜಾನ್ ಹಬ್ಬ).
ಇಸ್ಲಾಮಿನ ನೈಜ ಸ್ವರೂಪ ಸಂಪೂರ್ಣವಾಗಿ ನಮಗೆ ಕಾಣಲು ಸಿಗುವುದು ರಂಜಾನ್ ತಿಂಗಳಲ್ಲಿ. ಹಗಲಿರುಳು ಪ್ರಾರ್ಥನೆಗಳಿಂದ ತುಂಬಿ ತುಳುಕುತ್ತಿರುವ ಪ್ರಾರ್ಥನಾಲಯಗಳು, ಉಪವಾಸ ವ್ರತದಲ್ಲಿರುವವರ ದಾನ, ಝಕಾತ್, ಸರಳ ಸಾಮಾಜಿಕ ನಿತ್ಯ ಚಟುವಟಿಕೆಗಳಲ್ಲಿ ಮುಳುಗಿ ಕುರಾನ್ ಪಠಣ, ಇಫ್ತಾರ್ (ಸಾಮೂಹಿಕ ಭೋಜನ) ಸಾಮೂಹಿಕ ಪ್ರಾರ್ಥನೆ ಮುಂತಾದ ಧಾರ್ಮಿಕ ಸಾಮಾಜಿಕ ಚಟುವಟಿಕೆಗಳಲ್ಲಿ ಮುಳುಗಿ ಹೋದ ಇಸ್ಲಾಮಿ ಸಮುದಾಯ, ರಂಜಾನ್ ಮುಗಿದ ಮೇಲೆ ಅದೆಲ್ಲ ನೆನಪಾಗಿ ಉಳಿಯುವುದು ಖೇದದ ಸಂಗತಿ.
ನಾವು ಆ ತಿಂಗಳಲ್ಲಿ ರಂಜಾನ್ ನಮಗೆ ನೀಡಿದ ಆದರ್ಶ ನಾಗರಿಕನ ತರಬೇತಿ, ದೀಕ್ಷೆ ಎಲ್ಲವನ್ನು ಮರೆತು ಬಿಡುತ್ತೇವೆ. ರಂಜಾನ್ ತಿಂಗಳು ಪ್ರಾರಂಭವಾದ ದಿನ ಉತ್ಸಾಹ, ಲವಲವಿಕೆ, ದೃಢ ಭಕ್ತಿ, ಎಲ್ಲವೂ ಒಂದು ನೆನಪಾಗಿ ಉಳಿಯುವುದು ಅತ್ಯಂತ ಬೇಸರದ ಸಂಗತಿ. ಒಂದು ತಿಂಗಳ ಪಠಣ, ತರಬೇತಿ ಪಡೆದು ದೇವರ ಸಂಪ್ರೀತಿಯನ್ನು ಪಡೆದ ನಾವು ಮಾಡಬೇಕಾದುದ್ದನ್ನು ವರ್ಷವಿಡಿ ನೆನಪಿನಲ್ಲಿಟ್ಟು ಆಚರಿಸಬೇಕು ಮದ್ಯಪಾನ ಮುಂತಾದವುಗಳನ್ನು ತ್ಯಜಿಸಬೇಕು. ಮೋಸ, ವಂಚನೆ, ಅಗತ್ಯ ವಸ್ತುಗಳ ಕೂಡಿಡುವಿಕೆ, ಅನೈತಿಕ ಮೂಲಗಳಿಂದ ಹಣ ಗಳಿಕೆ, ಇಂತಹ ಹಲವಾರು ಅವಗುಣಗಳಿಗೆ ಕಡಿವಾಣ ಹಾಕಿದ ರಂಜಾನ್ ತಿಂಗಳ ತರಬೇತಿಯು ವರ್ಷವಿಡಿ ದೈನಂದಿನ ಸಾಮಾಜಿಕ ನಮ್ಮ ಜನ ಜೀವನದಲ್ಲಿ ಹಾಸು ಹೊಕ್ಕಾಗಬೇಕು. ಕೇವಲ ರಂಜಾನ್ ತಿಂಗಳಲ್ಲಿ ಮಾತ್ರ ನಾವು ರಂಜಾನಿನ ಮುಸ್ಲಿಮರಾಗದೆ ವರ್ಷವಿಡಿ ಅಲ್ಲಾಹನ ಸಂಪ್ರೀತಿಯನ್ನು ಪಡೆಯುವವರಾಗ ಬೇಕೆಂಬುವದು ಇದೀಗ ಹೋಗಿರುವ ರಂಜಾನಿನ ಸಂದೇಶ.

Next Article