For the best experience, open
https://m.samyuktakarnataka.in
on your mobile browser.

ಉತ್ಕಟ ಭಕ್ತಿಯಿಂದ ಏನೆಲ್ಲಾ ಆಗುವುದು !

03:00 AM Mar 19, 2024 IST | Samyukta Karnataka
ಉತ್ಕಟ ಭಕ್ತಿಯಿಂದ ಏನೆಲ್ಲಾ ಆಗುವುದು

ಭಕ್ತಿಯು ಪಕ್ವಗೊಂಡರೆ ಏನು ಬೇಕಾದರೂ ಆಗುತ್ತದೆ. ಆದರೆ ಹಾಗೆ ಪಕ್ವಗೊಳ್ಳುವುದು ಅತ್ಯಂತ ದುರ್ಲಭ. ಇದಕ್ಕೊಂದು ಉದಾಹರಣೆಯನ್ನು ಶಂಕರಾಚಾರ್ಯರ ಶಿವಾನಂದಲಹರಿ ಸ್ತೋತ್ರದಿಂದ ತೆಗೆದುಕೊಳ್ಳೋಣ. `ಮಾರ್ಗಾವರ್ತಿತ ಪಾದುಕಾಪಶುಪತೇಃ ಅಂಗಸ್ಯ ಕೂರ್ಚಾಯತೇ | ಗಂಡೂಷಾಂಬು ನಿಶೇಚನಂ ಪರಿರಪೋಃ ದಿವ್ಯಾಭಿಷೇಕಾಯತೇ ||
ಕಿಂಚಿತ್ಭಕ್ಷಿತ ಮಾಂಸಶೇಷಕ ಬಲಂ ನವ್ಯೋಪಹಾರಾಯತೇ |
ಭಕ್ತಿಃ ಕಿಂ ನ ಕರೋತ್ಸಹೋ ವನಚರೋ ಭಕ್ತಾವತಂಸಾಯತೇ ||'
ಬೇಡರಕಣ್ಣಪ್ಪನೆಂದು ಹೆಸರು ಪಡೆದು ಪ್ರಸಿದ್ಧನಿರುವ ಒಬ್ಬ ಶಿವ ಭಕ್ತನ ಕಥೆಯಿದು. ಇಂದಿನ ಆಂಧ್ರಪ್ರದೇಶದಲ್ಲಿರುವ ಕಾಳಹಸ್ತೇಶ್ವರ ಎಂಬ ಶಿವ ಕ್ಷೇತ್ರದಲ್ಲಿ ನಡೆದ ಘಟನೆ ಇದು. ಎಂಬುದಾಗಿ ಹೇಳಲಾಗುತ್ತದೆ. ಕಣ್ಣಪ್ಪನು ಕಾಡಿನಲ್ಲಿರುವ ಶಿವಮಂದಿರಕ್ಕೆ ಹೋಗಿ ನೋಡಿದಾಗ ಶಿವಲಿಂಗದ ಮೇಲೆ ಧೂಳು ಆವರಿಸಿಕೊಂಡಿತ್ತು. ಶಿವ ಭಕ್ತನಾದ ಕಣ್ಣಪ್ಪನಿಗೆ ತನ್ನೊಡೆಯನ ಈ ಸ್ಥಿತಿಯನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಶಿವನ ಮೈಮೇಲಿರುವ ಧೂಳು ತೆಗೆಯಲು ಅವನಿಗೆ ಬೇರೆ ಉಪಾಯ ಕಾಣಲಿಲ್ಲ. ತನ್ನ ಕಾಲಲ್ಲಿರುವ ಹಳೆ ಚಪ್ಪಲಿಯಿಂದಲೇ ಧೂಳನ್ನು ಅತ್ಯಂತ ಭಕ್ತಿಯಿಂದ ಜಾಡಿಸಿದ. ಈ ಭಕ್ತಿಯಿಂದ ಆ ಹಳೆ ಚಪ್ಪಲಿಯು ಕೂರ್ಚ (ದೇವರನ್ನು ಸ್ವಚ್ಛಗೊಳಿಸುವ ದರ್ಭೆ)ವಾಗಿ ಶಿವನಿಗೆ ಅನುಭವ ಗೋಚರವಾಯಿತು.
ಆದರೂ ಶಿವಲಿಂಗವು ಪೂರ್ತಿ ಸ್ವಚ್ಛವಾಗಲಿಲ್ಲ. ಅದಕ್ಕೆ ನೀರಿನ ಅಭಿಷೇಕವಾಗಬೇಕು. ಕಣ್ಣಪ್ಪನಿಗೆ ಬೇರೆ ಉಪಾಯ ಕಾಣಲಿಲ್ಲ. ಸಮೀಪದ ನೀರಿನ ಝರಿಯಿಂದ ಬಾಯಲ್ಲಿ ನೀರು ತುಂಬಿಕೊಂಡು ಬಂದು ಬಾಯಿಂದಲೇ ಶಿವನಿಗೆ ಅಭಿಷೇಕ ಮಾಡಿದ. ಬೇರೆಯವರ ದೃಷ್ಟಿಯಲ್ಲಿ ಇದು ಉಗುಳುವಿಕೆ. ಆದರೆ ಶಿವನ ದೃಷ್ಟಿಯಲ್ಲಿ ಇದು ಅಭಿಷೇಕ, ದಿವ್ಯಾಭಿಷೇಕ. ಉಗುಳಿದ ನೀರು ದಿವ್ಯಾಭಿಷೇಕವಾಗಲು ಅವನ ಉತ್ಕಟ ಭಕ್ತಿಯೇ ಕಾರಣ.
ಅಭಿಷೇಕ ವಾಗುತ್ತಿದಂತೆಯೇ ಕಣ್ಣಪ್ಪನಿಗೆ ಒಂದು ಆಲೋಚನೆ ಬಂದಿತ್ತು ‘ನನ್ನ ಒಡಯನಿಗೆ ಹಸಿವಾಗಿರಬಹುದಲ್ಲವೇ, ಅವನಿಗೆ ಏನನ್ನಾದರೂ ತಿನ್ನಲೂ ಕೊಡಬೇಕು, ಏನಿದೆ?’ಹೀಗೆ ವಿಚಾರಿಸುತ್ತ, ತನ್ನ ಜೋಳಿಗೆಯಲ್ಲಿರುವ ಮಾಂಸದ ತುಂಡುಗಳನ್ನು ಕೊಡಲು ಮುಂದಾದ. ಅಷ್ಟರಲ್ಲಿ ಮತ್ತೊಂದು ಆಲೋಚನೆ ಬಂದಿತ್ತು ‘ಈ ಮಾಂಸದ ತುಂಡುಗಳು ಸರಿಯಾಗಿರಬಹುದೇ?’ಹೀಗೆ ಅಂದುಕೊಳ್ಳುತ್ತ, ಮಾಂಸದ ತುಣುಕುಗಳನ್ನು ಪರೀಕ್ಷಿಸಲು ತಾನೇ ಅದನ್ನು ಕಚ್ಚಿ ನೋಡಿದನು. ಸರಿಯಾಗಿದ್ದದ್ದು ಖಾತ್ರಿಯಾದ ನಂತರ ಅದನ್ನೇ ಶಿವನಿಗೆ ಅರ್ಪಣೆ ಮಾಡಿದನು. ಹೀಗೆ ಅರ್ಪಿಸಲ್ಪಟ್ಟ ಎಂಜಲು ಮಾಂಸ ಶಿವನ ದೃಷ್ಟಿಯಲ್ಲಿ ಎಂಜಲು ಎನಿಸದೇ ಹೊಸ ದಿವ್ಯ ಆಹಾರವಾಗಿ ಪರಿಣಮಿಸಿತು. ಇದಕ್ಕೆ ಅವನ ಉತ್ಕಟ ಭಕ್ತಿಯೇ ಕಾರಣ.
ಉತ್ಕಟ ಭಕ್ತಿಯ ಮಹಿಮೆಯನ್ನು ಇನ್ನು ಎಷ್ಟು ಹೇಳುವುದು? ಕಾಡಿನ ಬೇಡನು ಭಕ್ತಾಗ್ರೇಸರನಾಗುತ್ತಾನೆ, ಲೋಕಪಾವನನಾಗುತ್ತನೆ. ಅಂತಹ ಉತ್ಕಟ ಭಕ್ತಿಯು ಬರುವುದು ಅತ್ಯಂತ ದುರ್ಲಭ. ಭಗವಂತನ ಅನುಗ್ರಹದಿಂದಲೇ ಬರಬೇಕೇನೋ.