ನೀರಿನ ಮಿತ ಬಳಕೆ: ಒಂದು ದೈವ ಪ್ರಜ್ಞೆ
ಇಂದು ಜಗತ್ತಿನ ಹಲವಾರು ಪ್ರದೇಶಗಳು, ರಾಷ್ಟçಗಳು ನೀರಿನ ತೀವ್ರ ಅಭಾವ ಎದುರಿಸುತ್ತಿವೆ. ಇದಕ್ಕೆ ಕಾರಣ ನೀರಿನ ವ್ಯರ್ಥ ಬಳಕೆ. ಇದಕ್ಕಾಗಿಯೇ ಎಲ್ಲಾ ಧರ್ಮಗಳು ನೀರಿನ ಮಹತ್ವವನ್ನು ಪ್ರತಿಪಾದಿಸಿ ಜಲ ರಕ್ಷಣೆಗೆ ಒತ್ತು ಕೊಟ್ಟಿವೆ.
ಇಸ್ಲಾಮಿನಲ್ಲಿ ನೀರು ಜೀವನವನ್ನು ನೀಡಿ ಪೋಷಣೆ ಮಾಡುತ್ತದೆ. ಮಾನವ ಕುಲವನ್ನು ಹಾಗೂ ಭೂಮಿಯನ್ನು ಶುದ್ಧೀಕರಿಸುತ್ತದೆ' ಎಂದು ಹೇಳುತ್ತ, ಕುರಾನಿನಾದ್ಯಂತ ನೀರಿನ ಉಪಯೋಗ ಬಳಕೆ ಕುರಿತು ಸುಮಾರು ೬೩ ಸಾರಿ ವಿವಿಧ ಪ್ರಸಂಗಗಳಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ನೀರಿನ ಸಂರಕ್ಷಣೆಯ ಅಭ್ಯಾಸ ಕ್ರಮವನ್ನು ವಿಸ್ತಾರವಾಗಿ ಹೇಳಲಾಗಿದೆ. ಕುರಾನಿನ ಅಧ್ಯಾಯ ಮುಮಿನೂನ್(೨೩:೧೮) ಶ್ಲೋಕಗಳಲ್ಲಿ ನೀರಿನ ಸಂಪನ್ಮೂಲಗಳು ಸೀಮಿತವಾಗಿದ್ದು ಅದನ್ನು ಸಂರಕ್ಷಿಸುವ ವಿಷಯವನ್ನು ಪ್ರಸ್ತಾಪಿಸಲಾಗಿದೆ. ಅಲ್ಲದೆ ಅಧ್ಯಾಯ ಅಲ್ ಅರಾ ಫ್(೭:೩೧) ಶ್ಲೋಕದಲ್ಲಿ ನೀರನ್ನು ವ್ಯರ್ಥವಾಗಿ ಪೋಲು ಮಾಡಬೇಡಿ ಎಂದು ಉಪದೇಶಿಸಲಾಗಿದೆ. ಪ್ರವಾದಿವರ್ಯ ಮೊಹಮ್ಮದ (ಸ) ಅವರು ಅಂಗ ಸ್ನಾನಕ್ಕೆ (ವಜು) ಕೇವಲ ಒಂದು
ಮುದ್ದ' ದಷ್ಟು ಅಂದರೆ ಈಗಿನ ಕೇವಲ ೮.೧೫ ಗ್ರಾಮಿನಷ್ಟು ನೀರನ್ನು ಹಾಗೂ ಸ್ನಾನಕ್ಕಾಗಿ (ಗುಸಲ್) ಒಂದು ಸೇ'ದಷ್ಟು. ಅಂದರೆ ಈಗಿನ ಸುಮಾರು ಮೂರು ಲೀಟರ್ನಷ್ಟು, ನೀರನ್ನು ಬಳಸುತ್ತಿದ್ದರು ಎಂದು ವರದಿಯಾಗಿದೆ. ಇಸ್ಲಾಮಿನ ದಿನದ ೫ ಪ್ರಾರ್ಥನೆಗಳನ್ನು ಅಂಗಸ್ನಾನ (ವಜು) ಇಲ್ಲದೆ ಮಾಡುವಂತಿಲ್ಲ. ಅಂಗಸ್ನಾನ ಕಡ್ಡಾಯ. ಈ ಅಂಗ ಸ್ನಾನವನ್ನು ನೀರಿನ ಮಿತ ಬಳಕೆಯಿಂದ ಮಾಡಬೇಕೆಂಬ ಕಡ್ಡಾಯ ಆಜ್ಞೆ ಇದೆ. ಧಾರ್ಮಿಕ ಹಾಗೂ ಸಾಮಾಜಿಕ ಜೀವನದಲ್ಲಿ ನೀರಿಗೆ ಮಿತವಾದ ಬಳಕೆಯನ್ನು ಎಲ್ಲಾ ಹಂತಗಳಲ್ಲಿ ಉಪದೇಶಿಸಲಾಗಿದೆ. ತಮ್ಮ ಉಪದೇಶಗಳಲ್ಲಿ ಪದೇ ಪದೇ ನೀರಿನ ಮಹತ್ವವನ್ನು ವಿವರಿಸುತ್ತ ಪ್ರವಾದಿವರ್ಯರು
ನೀರು ದೇವರ ದೊಡ್ಡ ಆಶೀರ್ವಾದವಾಗಿದೆ. ಅದನ್ನು ಪೋಲು ಮಾಡದೆ ಕಾಳಜಿ ಪೂರಕ ಉಪಯೋಗಿಸಿರಿ' ಎಂದು ಹೇಳುತ್ತಿದ್ದರು.