ಬಕ್ರೀದ್: ದೇವನಿಷ್ಠೆಯ ಪರಾಕಾಷ್ಠೆ
ಬಕ್ರೀದ್'. ಇದು ಸಾಮಾನ್ಯವಾಗಿ ಕರೆಯುವ ಹಬ್ಬದ ಹೆಸರು. ಆದರೆ ಇದರ ಇಸ್ಲಾಮಿ ಹೆಸರು
ಈದುಲ್ಅಝ'
ಪ್ರವಾದಿ ಇಬ್ರಾಹಿಂ ಅವರು ತಮ್ಮ ಮಗ ಇಸ್ಮಾಯಿಲ್ ಅವರನ್ನು ದೇವನ ಇಚ್ಛೆಯಂತೆ ಬಲಿ ಸಮರ್ಪಿಸಲು ಸಿದ್ಧರಾದ ಘಟನೆಯ ನೆನಪಿನಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅದಕ್ಕಾಗಿ ಇದನ್ನು ಬಲಿದಾನದ ಹಬ್ಬ'ವೆಂದು ಕರೆಯಲಾಗುತ್ತದೆ. ಇಬ್ರಾಹಿಂ ಅವರು ನಿರ್ಮಿಸಿದ ಅಲ್ಲಾಹನ ಮನೆ (ಕಾಬಾ)ಗಾಗಿಯೂ ಈ ಬಲಿದಾನದ ಸಿದ್ಧತೆ ಆಗಿತ್ತು. ಅದರ ನೆನಪಿಗಾಗಿಯೂ ಈಗ ಮಕ್ಕಾದ ಕಾಬಾದಲ್ಲಿ
ಹಜ್' ಸಾಮೂಹಿಕ ಆರಾಧನೆ ನಡೆಯುತ್ತಿದೆ.
ಬಕ್ರೀದ್, ಇದರ ಶ್ರದ್ಧೆಯ ಹಿನ್ನೆಲೆಯಲ್ಲಿ ಈ ಹಬ್ಬವನ್ನು ಆಚರಿಸಬೇಕು. ಆದರೆ ಈಗಿನ ಈ ಹಬ್ಬದ ಆಚರಣೆಯೇ ಬೇರೆ ಆಗಿದ್ದು ವಿಚಾರಾಧೀನವಾಗಿದೆ. ವಿವಿಧ ಭಕ್ಷಗಳನ್ನು ವಿಶೇಷವಾಗಿ ಪದಾರ್ಥಗಳ ಅಡುಗೆ ಮಾಡಿ ತಿನ್ನುವುದು. ತಮ್ಮ ನೆರೆಹೊರೆಯವರಿಗೆ ಪ್ರೀತಿ ಬಾಂಧವರಿಗೆ ತಿನಿಸುವುದು, ಹೊಸಬಟ್ಟೆ, ಮಸೀದೆಯಲ್ಲಿ ನಮಾಜ್, ಪರಸ್ಪರ ಆಲಿಂಗನ, ಆಡು ಕುರಿ ಮುಂತಾದ ಪ್ರಾಣಿಗಳನ್ನು ಬಲಿಕೊಡುವುದು (ಕುರ್ಬಾನಿ) ಇದು ಈಗಿನ ಈದ್ ಆಚರಣೆ.
ಪ್ರತಿವರ್ಷ ಬರುವ ಈ ಈದ್, ಪ್ರಾಣಿಗಳನ್ನು ಮುಖ್ಯವಾಗಿ ಬಲಿ ಕೊಡುವ ಕಾರ್ಯಕ್ಕಾಗಿ ಅಲ್ಲ. ಒಬ್ಬ ಇಸ್ಲಾಮಿ ವಿದ್ವಾಂಸರು ಹೇಳಿದ ಒಂದು ಮಾತನ್ನು ಇಲ್ಲಿ ಸ್ಮರಿಸಬೇಕು. ಯಾರೋ ಎಲ್ಲಿಯೋ ಸಾಕಿದ ಪ್ರಾಣಿಯನ್ನು ಬಲಿ ಅರ್ಪಿಸಬಹುದು. ಆದರೆ ಸ್ವಯಂ ನಮ್ಮ ತನು ಮನಗಳಲ್ಲಿ ಬೆಳೆಯುತ್ತಿರುವ ಮೃಗತ್ವದ ಬಲಿ ಅರ್ಪಿಸಲು ಸಿದ್ಧರಾಗಬೇಕು'. ನಮ್ಮಲ್ಲಿರುವ ಮೃಗಗಳಂತಹ ದುರ್ಗುಣಗಳನ್ನು ಅಲ್ಲಾಹನ ಸಂಪ್ರೀತಿಗಾಗಿ ಸಂಪೂರ್ಣವಾಗಿ ತ್ಯಜಿಸಿ, ಆತನ ಸನ್ಮಾರ್ಗದಲ್ಲಿ ಜೀವನ ಪ್ರಾರಂಭಿಸುವುದಾಗಿದೆ ಇದರ ಸಂದೇಶ. ನಮ್ಮಲ್ಲಿ ಅನೇಕ ಹಿಂಸಾತ್ಮಕ ಪ್ರಾಣಿಗಳಿವೆ. ಅಸೂಯೆ, ಅಹಂಕಾರ ಮೋಸ, ದ್ವೇಷ, ಕೋಮುವಾದ ಮುಂತಾದ ದುರ್ಗುಣಗಳು ಮನೆ ಮಾಡಿಕೊಂಡಿವೆ. ಅವುಗಳನ್ನು ನಾವು ಅತ್ಯಂತ ಕೆಟ್ಟ ರೀತಿಯಲ್ಲಿ ಪ್ರದರ್ಶಿಸಿ ಅನ್ಯರಿಗೆ ಅನ್ಯಾಯ ಮಾಡಿ ಆಘಾತ ನೀಡುತ್ತೇವೆ. ಈ ದುಷ್ಟ ಪ್ರಾಣಿಗಳ ಸಂಹಾರವೇ ಈ ಬಲಿದಾನದ ಹಬ್ಬ. ದೇವನಿಷ್ಠೆಗಾಗಿ ನಾವು ಏನನ್ನು ತ್ಯಾಗ ಮಾಡುತ್ತೇವೆ? ಮುಂಜಾವಿನ ಪ್ರಾರ್ಥನೆಗಾಗಿ ನಮ್ಮ ನಿದ್ರೆಯನ್ನಾದರೂ ತ್ಯಾಗ ಮಾಡುತ್ತೇವೆಯೇ? ನಮ್ಮ ಜೀವನದಲ್ಲಿ ಆಗಾಗ ಆಗುವ ಅಲ್ಲಾಹನ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತೇವೆ. ಅವನ ಸನ್ಮಾರ್ಗಕ್ಕಾಗಿ ನಮ್ಮಲ್ಲಿಯ ಒಂದು ದುರ್ಗುಣವನ್ನು ಸಹ ನಾವು ತ್ಯಾಗ ಮಾಡಲು ಸಿದ್ಧರಿರುವದಿಲ್ಲ. ಸಾವಿರಾರು ವರ್ಷಗಳ ಹಿಂದೆ ನಡೆದ ದೇವನಿಷ್ಠೆಯ ಪರಾಕಾಷ್ಠೆಯ ನೆನಪೇ, ನಾವು ನಮ್ಮ ದುರ್ಗುಣಗಳ ಪಶುಗಳನ್ನು ಸಂಪೂರ್ಣ ಬಲಿ ಕೊಡುವುದಾಗಿದೆ. ಬಕ್ರಿದ್‌ಲ್ಲಿ ಪ್ರಾಣಿಬಲಿ ಎಲ್ಲರೂ ಕೊಡಬೇಕೆಂಬ ಕಡ್ಡಾಯವೇನಿಲ್ಲ. ಯಾರು ಜಕಾತ್ ಕೊಡುವ ಯೋಗ್ಯತೆ ಉಳ್ಳವರು ಇದ್ದಾರೆಯೋ ಅಂಥವರು ಪ್ರಾಣಿ ಬಲಿ ಕೊಡಬಹುದು. ಇಷ್ಟು ಮೇಲಾಗಿ ಕುರಾನ್ (ಅಧ್ಯಾಯ ೨೨:೩೭) ಹೇಳುತ್ತದೆ.
ಬಲಿಕೊಟ್ಟ ಪ್ರಾಣಿಯ ಮಾಂಸವಾಗಲಿ ಅವುಗಳ ರಕ್ತವಾಗಲಿ ಅಲ್ಲಾಹನಿಗೆ ತಲುಪುವುದಿಲ್ಲ.
ನಿಮ್ಮಿಂದ ಅವನಿಗೆ ತಲುಪುವುದು ನಿಮ್ಮ ದೈವ ಧರ್ಮ ನಿಷ್ಠೆ ಮಾತ್ರ ಎಂದು. ಒಬ್ಬ ಇಬ್ರಾಹಿಂರನ್ನು ಒಬ್ಬ ಇಸ್ಮಾಯಿಲ್‌ರನ್ನು ಹಾಗೂ ಒಬ್ಬ ಹಾಜೀರಾರನ್ನು ಕಂಡುಕೊಳ್ಳಬೇಕು. ಅವರ ದೃಢಭಕ್ತಿ ನಮ್ಮೆಲ್ಲರಿಗೆ ದಾರಿದೀಪವಾಗಬೇಕು.