ಮುಖ್ಯವಾದುದು, ಮುಖ್ಯವಲ್ಲದ್ದು
ಬಹುತೇಕ ಜನರು ಯಾವುದು ಮುಖ್ಯ?' ಎಂದು ಆಲೋಚಿಸುತ್ತಲೆ, ಅವರಿಗೆ ಯಾವುದು ಮುಖ್ಯವೆನಿಸುತ್ತದೊ ಅದರಲ್ಲೇ ಸಿಲುಕಿಕೊಂಡಿರುತ್ತಾರೆ. ಯಾವಾಗಲೂ ಕೇವಲ ಮುಖ್ಯವಾಗಿರುವುದನ್ನೆ ಏಕೆ ಮಾಡಬೇಕು? ಒಂದು ವಿಷಯ ಮುಖ್ಯವಾಗಬೇಕೆಂದರೆ ಅನೇಕ ವಿಷಯಗಳು ಮುಖ್ಯವಲ್ಲದ್ದಾಗಿರಬೇಕು. ಯಾವುದನ್ನೊ ಮುಖ್ಯವಾಗಿ ಮಾಡಲು ಅನೇಕ ಮುಖ್ಯವಲ್ಲದ ವಿಷಯಗಳಿರುವುದು ಮುಖ್ಯ! ವಿಷಯಗಳು ತಾವಾಗಿಯೇ ಮುಖ್ಯವಾಗಿರುತ್ತವೆ ಅಥವಾ ಇತರ ವಿಷಯಗಳನ್ನು ಮುಖ್ಯವಾಗಿ ಮಾಡುತ್ತವೆ. ಇದರ ಅರ್ಥ, ಎಲ್ಲವೂ ಮುಖ್ಯ ಮತ್ತು ಯಾವುದೂ ಮುಖ್ಯವಲ್ಲ. ಇದನ್ನು ಅರಿತಾಗ ನೀವು ಆಯ್ಕೆಯಿಲ್ಲದವರಾಗುತ್ತೀರಿ. ಯಾವುದೋ ಒಂದು ಮುಖ್ಯ ಎಂದಾಗ ನಿಮ್ಮ ಅಪಾರತೆಯನ್ನು ಸೀಮಿತವಾಗಿಸುತ್ತೀರಿ. ಒಮ್ಮೆ ಒಬ್ಬರು ನನ್ನ ಬಳಿ ಬಂದು,
ಉಸಿರಾಡುವುದು ಏಕೆ ಮುಖ್ಯ? ಸಂತೋಷವಾಗಿರುವುದು ಏಕೆ ಮುಖ್ಯ? ಶಾಂತಿಯನ್ನು ಹೊಂದುವುದು ಏಕೆ ಮುಖ್ಯ?' ಎಂದು ಕೇಳಿದರು. ಈ ಪ್ರಶ್ನೆಗಳೆಲ್ಲವೂ ಅಸಂಬದ್ಧವಾದವು. ಯಾವಾಗಲೂ ಯಾವುದು ಮುಖ್ಯ ಎಂಬುದರ ಬಗ್ಗೆಯೆ ಏಕೆ ಆಲೋಚಿಸಬೇಕು? ಯಾವುದು ಮುಖ್ಯವಲ್ಲವೊ ಅದು ಮುಖ್ಯವಾದುದಕ್ಕೆ ತನ್ನ ಕಾಣಿಕೆಯನ್ನು ನೀಡಬಲ್ಲದು. ಅದಲ್ಲದೆ, ಕಾಲ ಮತ್ತು ಆಕಾಶಕ್ಕೆ ತಕ್ಕಂತೆ ಯಾವುದು ಮುಖ್ಯ, ಯಾವುದು ಮುಖ್ಯವಲ್ಲದ ವಿಷಯ ಎಂಬುದು ಬದಲಿಸುತ್ತಿರುತ್ತದೆ.
ನೀವು ಹಸಿವಿನಿಂದ ಇದ್ದಾಗ ನಿಮಗೆ ಊಟ ಮುಖ್ಯ. ಹಸಿವಾಗದೆ ಇದ್ದಾಗ ಊಟ ಮುಖ್ಯವಲ್ಲ. ಯಾವುದಾದರೂ ಅನಿವಾರ್ಯವಾದರೆ ಅದನ್ನು ಮುಖ್ಯ ಅಥವಾ ಮುಖ್ಯವಲ್ಲದ ವಿಷಯ ಎಂದು ವಿಂಗಡಿಸಲು ಹೋಗುವುದಿಲ್ಲ. ಅದು ಆಯ್ಕೆಗೆ ಮೀರಿದ್ದಾಗುತ್ತದೆ. ಎಲ್ಲವೂ ಮುಖ್ಯ' ಎನ್ನುವುದೇ ಕರ್ಮ ಯೋಗ.
ಯಾವುದೂ ಮುಖ್ಯವಲ್ಲ' ಎನ್ನುವುದು ಆಳವಾದ ಧ್ಯಾನ.
ಕರ್ಮ ಯೋಗದಲ್ಲಿದ್ದಾಗ, ಕಾರ್ಯ ಮಾಡುತ್ತಿರುವಾಗ ಎಲ್ಲದರ ಬಗ್ಗೆಯೂ ಆಸಕ್ತಿ ವಹಿಸಬೇಕು, ಯಾವುದೆಲ್ಲವೂ ಸರಿಯಲ್ಲ ಎನಿಸುತ್ತದೊ ಅದನ್ನು ಸರಿಪಡಿಸುವ ಯತ್ನ ಮಾಡಬೇಕು. ಧ್ಯಾನಕ್ಕೆ ಕುಳಿತಾಗ ಎಲ್ಲವೂ ಸರಿಯಾಗಿಯೇ ನಡೆಯುತ್ತಿದೆ, ವಿಷಯಗಳು ಹೇಗಿವೆಯೊ ಎಲ್ಲವೂ ಹಾಗೆಯೇ ಇರಲಿ ಎಂದು ಬಾಹ್ಯದಲ್ಲೆ ಎಲ್ಲವನ್ನೂ ಬಿಟ್ಟು ನಮ್ಮ ಆಂತರ್ಯದೊಳಗೆ ಹೊಕ್ಕು, ಆಳವಾದ ವಿಶ್ರಾಂತಿಯನ್ನು ಪಡೆಯಬೇಕು. ಹೀಗೆ ಮಾಡಿದರೆ ಮಾತ್ರ ನಾವು ಧ್ಯಾನದಿಂದ ಹೊರಬಂದು ಪುನಃ ಕಾರ್ಯೋನ್ಮುಖರಾಗಿ ಪರಿಪೂರ್ಣ ಕರ್ಮಯೋಗಿಗಳಾಗಲು ಸಾಧ್ಯ.